Advertisement

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

01:21 AM Oct 18, 2021 | Team Udayavani |

ಮಂಗಳೂರು: ಇನ್ನು ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳು ಅಂಕಪಟ್ಟಿಗಾಗಿ ತಿಂಗಳುಗಟ್ಟಲೆ ಕಾಯ ಬೇಕಿಲ್ಲ. ಫಲಿತಾಂಶ ಘೋಷಣೆಯಾದ ಕೆಲವೇ ದಿನಗಳಲ್ಲಿ “ಇ -ಅಂಕಪಟ್ಟಿ’ ವಿ.ವಿ.ಯ ವೆಬ್‌ಸೈಟ್‌ ಮೂಲಕ ದೊರೆಯಲಿದೆ.

Advertisement

ಇದನ್ನು ಶೀಘ್ರ ಜಾರಿಗೊಳಿಸಲು ವಿಶ್ವವಿದ್ಯಾನಿಲಯವು ಬಿರುಸಿನ ತಯಾರಿ ನಡೆಸುತ್ತಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಉದ್ಯೋಗ ಅಗತ್ಯಗಳಿಗೆ ಇದರಿಂದ ಸಹಾಯವಾಗಲಿದೆ. ಫಲಿತಾಂಶ ಘೋಷಣೆ ಯಾದ ತಿಂಗಳೊಳಗೆ ಮೂಲ ಅಂಕಪಟ್ಟಿ ದೊರೆಯಲಿದೆ.

ಸಾಮಾನ್ಯವಾಗಿ ಮೇ ತಿಂಗಳಲ್ಲಿ ಪದವಿ ಪರೀಕ್ಷೆ ನಡೆದು ಜುಲೈ ಒಳಗೆ ಫಲಿತಾಂಶ ಬರುತ್ತಿತ್ತು. ಆದರೆ ಈ ಬಾರಿ ಶೇ. 60ರಷ್ಟು ಪರೀಕ್ಷೆ ಎಪ್ರಿಲ್‌ನಲ್ಲಿ ಪೂರ್ಣಗೊಂಡಿದ್ದರೂ ಬಸ್‌ ಬಂದ್‌, ಚುನಾವಣೆ ಮತ್ತು ಕೊರೊನಾದಿಂದ ಉಳಿದ ಪರೀಕ್ಷೆಗಳು ಬಾಕಿಯಾಗಿದ್ದವು. ಹೀಗಾಗಿ ಬೇರೆ ವಿ.ವಿ., ಕಾಲೇಜುಗಳಿಗೆ ಉನ್ನತ ಶಿಕ್ಷಣಕ್ಕಾಗಿ ದಾಖಲಾಗಲು ವಿದ್ಯಾರ್ಥಿಗಳಿಗೆ ತೊಡಕಾಗಿತ್ತು. ಇದನ್ನು ಮನಗಂಡು ಮಂಗಳೂರು ವಿ.ವಿ. ಇ-ಅಂಕಪಟ್ಟಿ ಒದಗಿಸಲು ತೀರ್ಮಾನಿಸಿದೆ.

ಇಲ್ಲಿಯ ವರೆಗೆ ವಿ.ವಿ. ವೆಬ್‌ ಸೈಟ್‌ನಲ್ಲಿ ಅಂಕ ಪಟ್ಟಿ ಹಾಕಲಾಗುತ್ತಿತ್ತಾದರೂ ಅದು ತಡವಾಗಿ ಅಪ್‌ಲೋಡ್‌ ಆಗುತ್ತಿತ್ತು. ಜತೆಗೆ ವಿ.ವಿ.ಯ ಮಾನ್ಯತೆ ಸಿಗುತ್ತಿರಲಿಲ್ಲ. ಇನ್ನು ಮುಂದೆ ಇದನ್ನು ಶೀಘ್ರವಾಗಿ ಅಪ್‌ಲೋಡ್‌ ಮಾಡಲು ಮತ್ತು ಮಾನ್ಯತೆ ಒದಗಿಸುವುದಕ್ಕಾಗಿ ಹೊಸ ಸಾಫ್ಟ್ವೇರ್‌ನಲ್ಲಿ ಇ -ಅಂಕಪಟ್ಟಿ ಜಾರಿಗೊಳಿಸಲಾಗುತ್ತದೆ.

ಇದನ್ನೂ ಓದಿ:ಹುಬ್ಬಳ್ಳಿ: ಸಾರಿಗೆ ಸಂಸ್ಥೆ ನಮ್ಮ ಕಾರ್ಗೋಗೆ ಉತ್ತಮ ಸ್ಪಂದನೆ

Advertisement

ಏನಿದು ಇ -ಅಂಕಪಟ್ಟಿ?
ಪದವಿ, ಸ್ನಾತಕೋತ್ತರ ಪದವಿ ಫಲಿತಾಂಶ ಘೋಷಣೆ ಯಾದ ಬಳಿಕ ಮಂಗಳೂರು ವಿ.ವಿ.ಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳ ಅಂಕ  ಗಳನ್ನು ನಮೂದಿಸಲಾಗುತ್ತದೆ. ಬಳಿಕ ವಿದ್ಯಾರ್ಥಿ ತನ್ನ ನೋಂದಣಿ ಸಂಖ್ಯೆ ನಮೂದಿಸಿ ಅಂಕಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು. ಅದಕ್ಕೆ ಕಾಲೇಜು ಪ್ರಾಂಶು ಪಾಲರ ಸಹಿ ಪಡೆದರೆ ಅದು ಅಧಿಕೃತ ಅಂಕಪಟ್ಟಿ ಎನಿಸಲಿದೆ. ವಿ.ವಿ.ಯು ಇದಕ್ಕೆ ಯುಜಿಸಿಯ ಅನುಮೋದನೆಯನ್ನೂ ಪಡೆದಿದೆ. ಇದಾಗಿ ಒಂದು ತಿಂಗಳ ಒಳಗೆ ಮೂಲ ಅಂಕಪಟ್ಟಿ ಒದಗಿಸುವುದು ವಿ.ವಿ.ಯ ಸದ್ಯದ ಯೋಜನೆ.

ಅ. 23ಕ್ಕೆ ವಿ.ವಿ. ವ್ಯಾಪ್ತಿಯ ಎಲ್ಲ ಸೆಮಿಸ್ಟರ್‌ ಪರೀಕ್ಷೆ ಪೂರ್ಣಗೊಳ್ಳಲಿದೆ. ಬಳಿಕ ಇ- ಅಂಕಪಟ್ಟಿ ಜಾರಿಗೊಳಿಸಲಾಗುತ್ತದೆ. ಹೀಗಾಗಿ ಈ ಮಾಸಾಂತ್ಯಕ್ಕೆ ಇದು ಅನುಷ್ಠಾನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಉದ್ಯೋಗಕ್ಕೆ ನೆರವು
ಇ- ಅಂಕಪಟ್ಟಿ ಆಧಾರದಲ್ಲಿ ತುರ್ತಾಗಿ ಉನ್ನತ ಶಿಕ್ಷಣ ಅಥವಾ ಉದ್ಯೋಗಕ್ಕೆ ತೆರಳಲು ಅವಕಾಶ ಸಿಗಲಿದೆ. ಕೇಂದ್ರ, ರಾಜ್ಯ ಸರಕಾರಗಳ ಹಲವು ಇಲಾಖೆ ಗಳ ಉದ್ಯೋಗ ನೇಮಕಾತಿ ಪರೀಕ್ಷೆಗೆ ಮುಂದಿನ ತಿಂಗಳು ದಿನಾಂಕ ನಿಗದಿ ಯಾಗಿದೆ. ಆದರೆ ಮಂಗಳೂರು ವಿ.ವಿ. ವ್ಯಾಪ್ತಿಯ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಇಲ್ಲದೆ ಸಮಸ್ಯೆಯಾಗಿತ್ತು. ಇ – ಅಂಕಪಟ್ಟಿ ಜಾರಿ ಯಾಗಿ ಅವರಿಗೂ ಉಪಯೋಗ ವಾಗುತ್ತದೆ.

ಮಂಗಳೂರು ವಿ.ವಿ. ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ತುರ್ತಾಗಿ ಅಂಕಪಟ್ಟಿ ಬೇಕಾಗಿದ್ದು, “ಇ-ಅಂಕಪಟ್ಟಿ’ ಅನುಷ್ಠಾನಕ್ಕೆ ಚಿಂತನೆ ನಡೆಸಲಾಗಿದೆ. ಮೌಲ್ಯಮಾಪನ ನಡೆಯುತ್ತಿರುವಾಗಲೇ ಅಂಕಗಳನ್ನು ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿದೆ. ಫಲಿತಾಂಶ ಘೋಷಣೆಯಾದ ಬಳಿಕ ಎರಡು ದಿನಗಳ ಒಳಗೆ ಇ- ಅಂಕಪಟ್ಟಿ ವೆಬ್‌ಸೈಟ್‌ನಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಗ್ಗೆ ಶೀಘ್ರವೇ ಪ್ರಕಟಿಸಲಾಗುವುದು.
– ಪ್ರೊ| ಪಿ.ಎಲ್‌. ಧರ್ಮ, ಕುಲಸಚಿವರು, ಪರೀಕ್ಷಾಂಗ, ಮಂಗಳೂರು ವಿ.ವಿ.

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next