ಯಡ್ರಾಮಿ: ಜಾತಿ, ಮತ, ಪಂಥಗಳ ಬೇಧವಿಲ್ಲದೇ ಸರ್ವ ಜನಾಂಗದವರು ಸೇರಿ ಸೌಹಾರ್ದತೆ, ಭಾವೈಕ್ಯತೆಯಿಂದ ಇಲ್ಲಿನ ದ್ಯಾವಮ್ಮ ದೇವಿ (ಗ್ರಾಮ ದೇವತೆ) ಜಾತ್ರೆಯನ್ನು ಏ.29ರಂದು ವಿಜೃಂಭಣೆಯಿಂದ ಆಚರಿಸುತ್ತಾರೆ.
ಈ ಜಾತ್ರೆ ಪದ್ಧತಿಯಂತೆ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುತ್ತದೆ. ಸುಮಾರು ವರ್ಷಗಳಿಂದ ಗ್ರಾಮದೇವತೆ ಮಂದಿರ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿತ್ತು. ಪ್ರಸಕ್ತ ಸಾಲಿನಲ್ಲಿ ಕಾಮಗಾರಿ ಪೂರ್ಣವಾಗಿದ್ದರಿಂದ ಅದ್ಧೂರಿ ಜಾತ್ರೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ. ಹೀಗಾಗಿ ಪಟ್ಟಣ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ.
ಗುರುವಾರ ರಾತ್ರಿ 11 ಗಂಟೆಗೆ ಝಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ಮಾಡಿದ ರಥ ಬಂಡಿಯಲ್ಲಿ ಗ್ರಾಮ ದೇವತೆ ಉತ್ಸವ ಮೂರ್ತಿಯನ್ನು ನೂತನ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಡೊಳ್ಳು, ಬಾಜಾ ಭಜಂತ್ರಿ, ಸುಮಂಗಲೆಯರ ಕಳಸ, ಭಕ್ತರ ಭಜನೆಯೊಂದಿಗೆ ಮೆರವಣಿಗೆ ಮಾಡಲಾಗುತ್ತದೆ. ಬಸವೇಶ್ವರ ವೃತ್ತ, ಟಿಪ್ಪುಸುಲ್ತಾನ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ಬಸವಣ್ಣ ದೇವರ ದೇವಸ್ಥಾನದ ಬಾವಿ ಬಳಿ ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ ಗ್ರಾಮದೇವತೆಯ ಗಂಗಾ ಸ್ನಾನವಾದ ನಂತರ ಪುರ ಪ್ರವೇಶವಾಗುವುದು.
ಹಳೆ ಬಜಾರ್‌ನಲ್ಲಿರುವ ಲಕ್ಕಮ್ಮ ದೇವಿ ದೇವಸ್ಥಾನದ ಬಳಿ ಸ್ಥಾಪಿತವಾಗುವಳು. ತದನಂತರ ಪಟ್ಟಣದ ಸರ್ವ ಜನಾಂಗದವರೂ ದೇವತೆಗೆ ಉಡಿ ತುಂಬಿ, ನೈವೇದ್ಯ ಅರ್ಪಿಸಿ, ಬರುವ ವರ್ಷದಲ್ಲಿ ಉತ್ತಮ ಮಳೆ, ಬೆಳೆ ಆಗುವಂತೆ ಕೋರುವರು. ಮಧ್ಯಾಹ್ನದ ವೇಳೆ ಮೆರವಣಿಗೆ ಮೂಲಕ ನೂತನ ಮಂದಿರದ ಗರ್ಭಗುಡಿ ಪ್ರವೇಶಿಸಿ, ಮಹಾಮಂಗಲದೊಂದಿಗೆ ಉತ್ಸವ ಸಂಪನ್ನಗೊಳ್ಳುತ್ತದೆ. ಜಾತ್ರೆ ನಿಮಿತ್ತವಾಗಿ ಸ್ಥಳೀಯ ಕಲಾವಿದರಿಂದ ಶುಕ್ರವಾರ ರಾತ್ರಿ ಸಾಮಾಜಿಕ ನಾಟಕ ಪ್ರದರ್ಶನ ನಡೆಯುವುದು.
ನಮ್ಮ ಹಿರಿಯರ ಕಾಲದಿಂದಲೂ ಗ್ರಾಮದೇವತೆ ಜಾತ್ರೆ ಆಚರಿಸಲಾಗುತ್ತಿದೆ. ಆಯಿ (ಶ್ರೀ ಗ್ರಾಮದೇವತೆ) ಜಾತ್ರೆಯಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲ ಜನಾಂಗದವರು ಭಕ್ತಿ ಸಮರ್ಪಿಸುತ್ತಾರೆ. ಇದೊಂದು ಭಾವೈಕ್ಯತೆ ಸಾರುವ ಜಾತ್ರೆಯಾಗಿದೆ.
-ಮಲ್ಹಾರಾವ್ ಕುಲಕರ್ಣಿ, ಮುಖಂಡ
ಗ್ರಾಮದೇವತೆಯನ್ನು ಮುಸ್ಲಿಮ ಸಮಾಜದವರು ಮೊದಲಿನಿಂದ ಆರಾಧಿಸುತ್ತಾರೆ. ನಾವು ಭಕ್ತಿಯಿಂದ ದೇವಿಗೆ ಉಡಿ ತುಂಬಿ, ಗ್ರಾಮದ ಶಾಂತಿ, ಸಮೃದ್ಧಿಗಾಗಿ ಪ್ರಾರ್ಥಿಸುತ್ತೇವೆ. ನಮ್ಮ ಮನೆಯ ಹೆಣ್ಣು ಮಕ್ಕಳನ್ನೆಲ್ಲ ಜಾತ್ರೆಗೆ ಕರೆದುಕೊಂಡು ಬಂದಿದ್ದೇವೆ. ಎಲ್ಲ ಧರ್ಮದವರು ಕೂಡಿ ಸಂಭ್ರಮದಿಂದ ಜಾತ್ರೆ ಆಚರಿಸುತ್ತೇವೆ.
-ಅಬ್ದುಲ್ ರಜಾಕ್ ಮನಿಯಾರ, ಮುಖಂಡ
-ಸಂತೋಷ ಬಿ.ನವಲಗುಂದ