ಅಬುಧಾಬಿ: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಹಿರಿಯ ಆಲ್ ರೌಂಡರ್ ಡ್ವೇಯ್ನ್ ಬ್ರಾವೋ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ನ ಕೊನೆಯ ಪಂದ್ಯದ ಬಳಿಕ ತಾನು ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ದೂರವಾಗುತ್ತಿರುವುದಾಗಿ ಅವರು ಹೇಳಿದ್ದಾರೆ.
ಲಂಕಾ ವಿರುದ್ಧದ ಗುರುವಾರದ ಪಂದ್ಯದ ಬಳಿಕ ಡ್ವೇಯ್ನ್ ಬ್ರಾವೋ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆಸೀಸ್ ವಿರುದ್ಧ ನಡೆಯಲಿರುವ ಸೂಪರ್ 12ನ ಅಂತಿಮ ಪಂದ್ಯವೇ ಡ್ವೇಯ್ನ್ ಬ್ರಾವೋರ ಅಂತಾರಾಷ್ಟ್ರೀಯ ವೃತ್ತಿ ಜೀವನದ ಕೊನೆಯ ಪಂದ್ಯವಾಗಿರಲಿದೆ.
ಇದನ್ನೂ ಓದಿ:ಎಡವಟ್ಟು ನಿರ್ಧಾರಗಳೇ ಮೊದಲೆರಡು ಸೋಲಿಗೆ ಕಾರಣ: ರೋಹಿತ್
38 ವರ್ಷದ ಬ್ರಾವೋ ಅವರು ಈ ಹಿಂದೆ ನಿವೃತ್ತಿ ಘೋಷಿಸಿದ್ದರು. ಆದರೆ ಟಿ20 ವಿಶ್ವಕಪ್ ಸಲುವಾಗಿ 2019 ರಲ್ಲಿ ನಿವೃತ್ತಿಯಿಂದ ಹೊರಬಂದಿದ್ದರು. ಎಲ್ಲಾ ಏಳು ಟಿ20 ವಿಶ್ವಕಪ್‌ಗಳಲ್ಲಿ ಕಾಣಿಸಿಕೊಂಡಿರುವ ಆಲ್‌ರೌಂಡರ್ ಬ್ರಾವೋ, 2012 ಮತ್ತು 2016 ರಲ್ಲಿ ವೆಸ್ಟ್ ಇಂಡೀಸ್ ಟ್ರೋಫಿಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಂಡೀಸ್ ಪರವಾಗಿ 90 ಟಿ20 ಪಂದ್ಯಗಳನ್ನಾಡಿರುವ ಬ್ರಾವೋ, ಲೀಗ್ ಗಳನ್ನು ಸೇರಿ ಒಟ್ಟಾರೆ 500 ಕ್ಕೂ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.
“ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ” ಎಂದು ಬ್ರಾವೋ ಹೇಳಿದರು. “ನಾನು ಉತ್ತಮ ವೃತ್ತಿಜೀವನವನ್ನು ಅನುಭವಿಸಿದ್ದೇನೆ. 18 ವರ್ಷಗಳ ಕಾಲ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸುವಲ್ಲಿ, ಕೆಲವು ಏರಿಳಿತಗಳನ್ನು ಕಂಡಿದ್ದೇನೆ, ಆದರೆ ನಾನು ಹಿಂತಿರುಗಿ ನೋಡಿದಾಗ ನಾನು ಪ್ರದೇಶವನ್ನು ಮತ್ತು ಕೆರಿಬಿಯನ್ ಜನರನ್ನು ಪ್ರತಿನಿಧಿಸಲು ತುಂಬಾ ಕೃತಜ್ಞನಾಗಿದ್ದೇನೆ” ಎಂದು ಬ್ರಾವೋ ಹೇಳಿದರು.