ಲಂಡನ್: ವೆಸ್ಟ್ ಇಂಡೀಸ್‌ನ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೊ ಅಮೋಘ ಬೌಲಿಂಗ್ ಪರಾಕ್ರಮವೊಂದಕ್ಕೆ ಸಾಕ್ಷಿಯಾಗಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 600 ವಿಕೆಟ್ ಉರುಳಿಸಿದ ವಿಶ್ವದ ಮೊದಲ ಬೌಲರ್ ಎಂಬ ದಾಖಲೆ ಸ್ಥಾಪಿಸಿದ್ದಾರೆ.
“ದಿ ಹಂಡ್ರೆಡ್” ಕ್ರಿಕೆಟ್ ಸರಣಿಯಲ್ಲಿ ನಾರ್ದರ್ನ್ ಸೂಪರ್‌ಚಾರ್ಜರ್ ತಂಡವನ್ನು ಪ್ರತಿನಿಧಿಸುತ್ತಿರುವ ಡ್ವೇನ್ ಬ್ರಾವೊ ಓವಲ್ ಇನ್ವಿನ್ಸಿಬಲ್ಸ್ ತಂಡದೆದುರಿನ ಪಂದ್ಯದ ವೇಳೆ ಈ ಮೈಲುಗಲ್ಲು ನೆಟ್ಟರು.
ಸ್ಯಾಮ್ ಕರನ್ ಅವರನ್ನು ಔಟ್ ಮಾಡುವ ಮೂಲಕ 600 ವಿಕೆಟ್ ಬೇಟೆಯನ್ನು ಪೂರ್ತಿಗೊಳಿಸಿದರು. ಬ್ರಾವೊ ಮತ್ತು ಕರನ್ ಐಪಿಎಲ್‌ನಲ್ಲಿ ಚೆನ್ನೈ ತಂಡದ ಆಟಗಾರರೆಂಬುದು ವಿಶೇಷ.
ರಶೀದ್ ಖಾನ್ 339 ಪಂದ್ಯಗಳಿಂದ 466 ವಿಕೆಟ್ ಉರುಳಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಡ್ವೇನ್ ಬ್ರಾವೊ ಟಿ20 ಇತಿಹಾಸದಲ್ಲಿ 25ಕ್ಕೂ ಹೆಚ್ಚು ತಂಡಗಳನ್ನು ಪ್ರತಿನಿಧಿಸಿರುವುದು ಕೂಡ ದಾಖಲೆಯೇ ಆಗಿದೆ. ಅವರು 2006ರ ಫೆ. 16ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡುವುದರೊಂದಿಗೆ ಟಿ20 ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. ವೆಸ್ಟ್ ಇಂಡೀಸ್ ಪರ 91 ಪಂದ್ಯಗಳಿಂದ 78 ವಿಕೆಟ್ ಕೆಡವಿದ್ದಾರೆ.
ಐಪಿಎಲ್ ಬೌಲಿಂಗ್ ದಾಖಲೆ ಕೂಡ ಡ್ವೇನ್ ಬ್ರಾವೊ ಹೆಸರಲ್ಲೇ ಇದೆ. 161 ಪಂದ್ಯಗಳಿಂದ ಸರ್ವಾಧಿಕ 183 ವಿಕೆಟ್ ಕೆಡವಿದ್ದಾರೆ.