ಹಳೇಬೀಡು: ರಾಷ್ಟ್ರಕೂಟರ ಕಾಲದಲ್ಲಿ ನಿರ್ಮಿಸಲಾದ ದ್ವಾರಸಮುದ್ರ ಕೆರೆ ಏರಿ ಹಲವು ಕಡೆ ಕುಸಿದಿದ್ದು, ಅಕ್ಕಪಕ್ಕದ ಗ್ರಾಮಗಳನಿವಾಸಿಗಳು, ರೈತರ ಆತಂಕಕ್ಕೆ ಕಾರಣವಾಗಿದೆ.
ದ್ವಾರಸಮುದ್ರ ಕೆರೆ 1000 ಹೆಕ್ಟೇರ್ ಪ್ರದೇಶದಲ್ಲಿದ್ದು, 12 ವರ್ಷ ನಂತರ ಭರ್ತಿ ಆಗಿದೆ. ಇದರಿಂದ ಹಳೇಬೀಡು, ಮಾದಿಹಳ್ಳಿ, ಜಾವಗಲ್ ಹೋಬಳಿ ಜನರ ಮೊಗದಲ್ಲಿ ಸಂತಸ ಮೂಡಿಸಿದೆ. ಇಂತಹ ಸಮಯದಲ್ಲಿ ಕೆರೆ ಏರಿ ಎರಡು ಮೂರು ಕಡೆ ಬಿರುಕು ಬಿಟ್ಟು, ಕುಸಿದಿದೆ. ಹೀಗಾಗಿ ಏರಿ ಮೇಲಿನ ರಸ್ತೆಯಲ್ಲಿ ವಾಹನ ಸವಾರರು ಪ್ರಾಣ ಭಯದಲ್ಲಿ ಸಂಚರಿಸಬೇಕಿದೆ.
ನೀರಿನ ಒತ್ತಡ ಹೆಚ್ಚಳ: ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ದ್ವಾರಸಮುದ್ರ ಕೆರೆ 1 ಟಿಎಂಸಿ ನೀರು ಶೇಖರಣೆ ಸಾಮರ್ಥ್ಯ ಹೊಂದಿದೆ. ಏತ ನೀರಾ ವರಿ ಯೋಜನೆ ನೀರು, ರಾಜಗೆರೆ, ಚೀಲ ನಾಯ್ಕನಹಳ್ಳಿ, ಮಲ್ಲಾಪುರ ಮೂರು ಕಡೆ ಯಿಂದ ಭಾರೀ ಪ್ರಮಾಣದಲ್ಲಿ ಕೆರೆಗೆ ನೀರು ಹರಿದು ಬರುತ್ತಿದೆ. ನೀರಿನ ಒತ್ತಡ ಹೆಚ್ಚಾಗಿ ಏರಿ ಕುಸಿಯುತ್ತಿದೆ ಎನ್ನಲಾಗಿದೆ.
ಜಿನುಗುತ್ತಿರುವ ಕೆರೆ ನೀರು: 12 ವರ್ಷ ನಂತರ ಕೆರೆ ಭರ್ತಿ ಆಗಿದೆ. ಏರಿ ಒಡೆದರೆ ನೂರಾರು ಎಕರೆಯಲ್ಲಿ ಬೆಳೆದಿರುವ ತೆಂಗು, ಅಡಕೆ, ಜೋಳದ ಬೆಳೆ ಹಾನಿಯಾಗುತ್ತದೆ. ಕೆರೆ ತಪ್ಪಲಿನ ಬೂದಿಗುಂಡಿಯಲ್ಲಿ ವಾಸಿಸುವ 200 ಕುಟುಂಬಗಳ ಬದುಕು ಕೊಚ್ಚಿ ಹೋಗುತ್ತದೆ. ಹಾಗೆಯೇ ಹಳೇಬೀಡಿನಿಂದ ಹಾಸನಕ್ಕೆ ಹೋಗುವ ಕೆರೆ ಏರಿ ರಸ್ತೆಯ ಎಡಭಾಗದ ಗದ್ದೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಜಿನುಗುತ್ತಿದ್ದು, ಸಣ್ಣ ನೀರಾವರಿ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು.
ಅಪಘಾತಕ್ಕೂ ದಾರಿ: ಹಳೇಬೀಡು ವಿಶ್ವ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಹೊಯ್ಸಳೇಶ್ವರ ದೇಗುಲ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ, ಹಾಗೆಯೇ ಗೋಣಿಸೋಮನ ಹಳ್ಳಿ, ಸೊಪ್ಪಿನಹಳ್ಳಿ ಘಟ್ಟದಹಳ್ಳಿ, ಸಾಣೇನಹಳ್ಳಿ, ಗಂಗೂರು, ರಾಜಗೆರೆ ತಟ್ಟೆಹಳ್ಳಿ, ರಾಜಗೆರೆ, ಕ್ಯಾತನಕೆರೆ ಸೇರಿ ಹತ್ತಾರು ಹಳ್ಳಿಯ ಜನರು ಹಳೇಬೀಡಿಗೆ ಬರಲು ಈ ಏರಿ ಮೇಲಿನ ರಸ್ತೆ ಅವಲಂಬಿಸಿದ್ದಾರೆ. ಇಂತಹ ಕೆರೆ ಏರಿ ಮೇಲಿನರಸ್ತೆ ಕೆಲವು ಕಡೆ ಅರ್ಧಭಾಗ ಕುಸಿದಿರುವು ದರಿಂದ ವಾಹನ ಚಾಲಕರ ಆತಂಕವನ್ನು ಹೆಚ್ಚಿಸಿದೆ. ಕುಸಿದಿರುವ ಜಾಗದಲ್ಲಿ ಓವರ್ ಟೇಕ್ ಮಾಡಲು ಮುಂದಾದರೆ ಅಪಘಾತಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.
ಕೆರೆ ಭರ್ತಿ ಆಗಿ ಕೋಡಿ ಹರಿಯುತ್ತಿದೆ. ಇಂತಹ ಸಮಯದಲ್ಲಿ ಏರಿ ಕುಸಿಯುತ್ತಿರುವುದು ಆತಂಕಕಾರಿ ವಿಷಯ. ಒಂದು ವೇಳೆ ಏರಿ ಒಡೆದರೆ ಮೊದಲು ಸಮಸ್ಯೆ ಎದುರಾಗುವುದು ಬೂದಿಗುಂಡಿ ನಿವಾಸಿಗಳಿಗೆ. ಕೂಡಲೇ ಕುಸಿಯುತ್ತಿರುವ ಕೆರೆ ಏರಿ ದುರಸ್ತಿ ಮಾಡಬೇಕಿದೆ.
–ದೇವರಾಜು, ಬೂದಿಗುಂಡಿ ನಿವಾಸಿ.
ಕೆರೆ ಏರಿ ಕುಸಿಯುತ್ತಿರುವುದು ಆಘಾತಕಾರಿ ವಿಷಯ. ಇದನ್ನು ಜಿಲ್ಲಾ ಉಸ್ತುವಾರಿ ಸಚಿವಗೋಪಾಲಯ್ಯ ಗಮನಕ್ಕೂ ತಂದು, ಶೀಘ್ರ ಕೆರೆ ಏರಿ ದುರಸ್ತಿಗೆ ಒತ್ತಡ ಹಾಕುತ್ತೇವೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದ್ರೆ ಮುಂದೆ ಆಗುವ ಅನಾಹುತಕ್ಕೆ ಅವರೇ ಹೊಣೆ ಹೊರಬೇಕು.
–ಹುಲ್ಲಳ್ಳಿ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ
ಕೆರೆ ಏರಿ ಕುಸಿದಿರುವುದನ್ನು ಖುದ್ದು ಪರಿಶೀಲನೆ ನಡೆಸಿದ್ದೇನೆ. ಸಣ್ಣ ನೀರಾವರಿಇಲಾಖೆಯಿಂದ ಬಿಡುಗಡೆ ಆಗಿದ್ದ 2 ಕೋಟಿ ರೂ. ಕೋವಿಡ್ ಹಾಗೂ ತಾಂತ್ರಿಕ ಕಾರಣದಿಂದ ವಾಪಸ್ ಹೋಗಿದೆ. ಪ್ರಸಕ್ತ ಸಾಲಿನಲ್ಲಿ ಬಿಡುಗಡೆ ಮಾಡಿಸಿ, ದುರಸ್ತಿ ಕಾರ್ಯ ಮಾಡುತ್ತೇನೆ.
–ಕೆ.ಎಸ್.ಲಿಂಗೇಶ್, ಶಾಸಕ.
–ಡಾ.ಎಂ.ಸಿ.ಕುಮಾರ್