ಬೆಂಗಳೂರು: “ನನ್ನ ಹೆಸರಿನಲ್ಲಿ ಗೌಡ ಇದ್ದುದ್ದರಿಂದ ಮುಖ್ಯಮಂತ್ರಿ, ಕೇಂದ್ರ ಸಚಿವನಾದೆ’ ಎಂದು ಡಿ.ವಿ.ಸದಾನಂದ ಗೌಡ ಅವರು ಶುಕ್ರವಾರ ನೀಡಿದ್ದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪಕ್ಕೆ ಗುರಿಯಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೂಮ್ಮೆ ಪ್ರಧಾನಿಯಾಗಬೇಕು ಎಂದು ಟೀಂ ಮೋದಿ ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸಿದ್ದ ಚಕ್ರವರ್ತಿ ಸೂಲಿಬೆಲೆ ಸಹಿತವಾಗಿ ಬಿಜೆಪಿ ಕಾರ್ಯರ್ತರು, ಅಭಿಮಾನಿಗಳು ಫೇಸ್‌ಬುಕ್, ವಾಟ್ಸ್‌ಆಪ್ ಹಾಗೂ ಟ್ವೀಟರ್‌ನಲ್ಲಿ ಸಚಿವ ಸದಾನಂದ ಗೌಡರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನವಭಾರತದಲ್ಲಿದ್ದೇವೆ. ಜಾತಿ ಬಿಟ್ಟು, ಜಾತ್ಯಾತೀತರಾಗಿ ದೇಶಕ್ಕಾಗಿ ಕೆಲಸ ಮಾಡಿ ಎಂಬ ಸೂಚನೆಯನ್ನು ನೆಟ್ಟಿಗರು ನೀಡಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿ,” ಪ್ರೀತಿಯ ಬಿಜೆಪಿ ಡಿವಿಎಸ್, ನಿಮ್ಮ ಆ ಪದಗಳು ಕ್ಷಮಿಸಲು ಸಾಧ್ಯವಾಗದ್ದಾಗಿದೆ. ಈ ಚುನಾವಣೆ ರಾಷ್ಟ್ರೀಯ ಭದ್ರತೆಯ ವಿಚಾರವಾಗಿ ನಡೆದಿದೆ. ರಾಷ್ಟ್ರವನ್ನು ಮೋದಿ ಸಮರ್ಥವಾಗಿ ನಿಭಾಯಿಸುತ್ತಾರೆ ಎಂಬ ಕಾರಣಕ್ಕಾಗಿ ಗೆಲ್ಲಿಸಿದ್ದಾರೆ. ಅಚಾನಕ್ ಆಗಿ ನೀವು ಗೆದ್ದಿದ್ದೀರಿ ಮತ್ತು ಮಂತ್ರಿ ಸ್ಥಾನ ಕೂಡ ಪಡೆದಿದ್ದೀರಿ. ಕಳೆದ ಬಾರಿ ರೈಲ್ವೆ ಖಾತೆಯನ್ನು ಹೇಗೆ ಕಳೆದುಕೊಂಡಿರಿ?’.
ಹೀಗೆ ಮಂಗಳೂರು, ಉಡುಪಿ ಸೇರಿದಂತೆ ರಾಜ್ಯದ ವಿವಿಧ ಭಾಗದ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಾಟ್ಸ್‌ಆ್ಯಪ್ ಗ್ರೂಪ್, ಫೇಸ್‌ಬುಕ್ ಹಾಗೂ ಟ್ವೀಟರ್‌ಗಳಲ್ಲಿ ಸದಾನಂದಗೌಡರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ತಲೆ ತಗ್ಗಿಸುವಂತಹ ಹೇಳಿಕೆ ಇದಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಸಚಿವರ ವಿರುದ್ಧ ಕಿಡಿಕಾರಿದ್ದರು.
ತಮ್ಮ ಹೇಳಿಕೆ ತೀವ್ರ ಸ್ವರೂಪ ಪಡೆಯುತ್ತಿರುವುದನ್ನು ತಿಳಿದ ಸಚಿವರು ಭಾನುವಾರ ಸಂಜೆ ವೇಳೆಗೆ ಟ್ವೀಟ್‌ನಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. “ನನ್ನ ಬಿಜೆಪಿ ಪಕ್ಷ, ನನ್ನ ಹೆತ್ತ ತಾಯಿ ಸಮಾನ. ಕುಗ್ರಾಮ ಮಂಡೆಕೋಲಿನಿಂದ ಬಂದ ಈ ಹುಡುಗನಿಗೆ ಪಕ್ಷ ಎಲ್ಲವನ್ನು ಕೊಟ್ಟಿದೆ. ನನ್ನ ಪಕ್ಷ ಒಕ್ಕಲಿಗ ಸಮಾಜಕ್ಕೆ ಉತ್ತಮ ಸ್ಥಾನಮಾನ, ಪ್ರಾತಿನಿಧಿತ್ವವನ್ನು ನನ್ನ ಮೂಲಕ ಕೊಟ್ಟಿದೆ ಎನ್ನುವ ಮಾತನ್ನು ನಾನು ಹೆಮ್ಮೆಯಿಂದ ಹೇಳಿಕೊಂಡಿದ್ದನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ.
ನಾನಿಂದು ನಿರಂತರ ಚುನಾವಣೆಗಳನ್ನು ಗೆಲ್ಲಲು ಜಾತ್ಯಾತೀತವಾಗಿ, ಪಕ್ಷಾತೀತವಾಗಿ ನನ್ನನ್ನು ಜನರು ಆಯ್ಕೆ ಮಾಡಲು ನನ್ನ ಪಕ್ಷ ಮತ್ತು ಮೋದಿಯವರ ನಾಯಕತ್ವವೇ ಕಾರಣ. ಮುಂದೆ ಜನ ನಮ್ಮನ್ನು ಗುರುತಿಸುವುದು, ಗೌರವಿಸುವುದು ಮೋದಿಯವರ ನೇತೃತ್ವದಲ್ಲಿ ನಾವು ಮಾಡುವ ಕೆಲಸದಿಂದ’ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಸಚಿವರ ಸ್ಪಷ್ಟೀಕರಣದ ಟ್ವೀಟ್‌ಗೂ ಅನೇಕರು ರೀ ಟ್ವೀಟ್ ಮಾಡಿ, ಜಾತಿ ಗುಂಗಿನಿಂದ ಆಚೆ ಬಂದು ದೇಶದ ಕೆಲಸ ಮಾಡಿ. ಪ್ರಧಾನಿ ನರೇಂದ್ರ ಮೋದಿಯವರು ಎಂದಾದರೂ ಜಾತಿ, ಉಪಜಾತಿಯ ಬಗ್ಗೆ ಮಾತನಾಡಿದ್ದಾರೆಯೇ ಎಂದು ಸಚಿವರನ್ನು ಪ್ರಶ್ನಿಸಿದ್ದಾರೆ.