Advertisement

ಡಸ್ಟ್‌  ಬಿನ್‌ ತೆರವು, ರಸ್ತೆ ಬದಿಯೇ ತ್ಯಾಜ್ಯ

03:17 PM Nov 03, 2018 | |

ನಗರ: ತ್ಯಾಜ್ಯ ನಿರ್ವಹಣೆ ವಿಷಯದಲ್ಲಿ ಮನೆ ಮನೆಗೆ ಬಕೆಟ್‌ ವಿತರಿಸುವ ಕೆಲಸ ನಡೆಯುತ್ತಿರುವ ನಡುವೆಯೇ ರಸ್ತೆ ಬದಿ ಕಸ ಎಸೆಯುತ್ತಿರುವ ಪ್ರಸಂಗವೂ ನಡೆಯುತ್ತಿದೆ. ಇದಕ್ಕೆ ಕಾರಣ ಹುಡುಕಿದಾಗ, ರಸ್ತೆ ಬದಿ ಇಟ್ಟಿದ್ದ ಕೆಲ ಡಸ್ಟ್‌ಬಿನ್‌ಗಳನ್ನು ತೆರವು ಮಾಡಿರುವುದು ಬೆಳಕಿಗೆ ಬಂದಿದೆ.

Advertisement

ಬನ್ನೂರು ಡಂಪಿಂಗ್‌ ಯಾರ್ಡ್‌ನಿಂದ ಹಿಡಿದು ಪೇಟೆಯ ಪ್ರತಿ ಮನೆಗಳಲ್ಲಿಯೂ ತ್ಯಾಜ್ಯ ಸಮಸ್ಯೆ ಬಿಗಡಾಯಿಸಿರುವುದು ಹೊಸ ವಿಷಯವೇನಲ್ಲ. ಇದನ್ನು ನಿವಾರಿಸುವ ಉದ್ದೇಶದಿಂದ ತ್ಯಾಜ್ಯ ಸಂಗ್ರಹಣೆಯ ಸವಾಲನ್ನು ಹೊರಗುತ್ತಿಗೆಯ ವ್ಯಕ್ತಿಯೊಬ್ಬರ ಹೆಗಲಿಗೆ ವಹಿಸಲಾಯಿತು. ಅಷ್ಟಕ್ಕೆ ಸಮಸ್ಯೆ ಪರಿಹಾರ ಕಾಣಬಹುದು ಎಂದು ಭಾವಿಸುವುದು ತಪ್ಪು. ಏಕೆಂದರೆ ಸಮಸ್ಯೆಯ ನಿಜ ಸ್ವರೂಪ ಬಯಲಾದದ್ದೇ ಆಗ.

ಪ್ಲಾಸ್ಟಿಕ್‌ ಬಳಕೆ ಹೆಚ್ಚಿದಂತೆ ಕರಗದ ತ್ಯಾಜ್ಯ ಹೆಚ್ಚಾಯಿತು. ಇದಕ್ಕೆ ಮುಕ್ತಿ ನೀಡುವುದೇ ಅಸಾಧ್ಯ ಎಂಬಂತಾಯಿತು. ಡಂಪಿಂಗ್‌ ಯಾರ್ಡ್‌ನಂತೆ ಮನೆ, ಅಂಗಡಿಗಳಲ್ಲಿಯೂ ಪ್ಲಾಸ್ಟಿಕ್‌ ಪ್ಲಾಸ್ಟಿಕ್‌ ರಾಶಿ ಬಿದ್ದಿದೆ. ಇದನ್ನು ಮಾಡುವುದಾದರೂ ಏನು? ಮನೆಗಳಲ್ಲಿ ಶುಚಿಗೊಳಿಸಿ, ಕಟ್ಟಿ ಇಡಬಹುದು. ಆದರೆ, ಅಂಗಡಿಗಳವರು ಬೀದಿಗೆ ಬಿಸಾಡುತ್ತಾರೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಶಿಸ್ತಿನ ಕ್ರಮಕ್ಕೆ ಮುಂದಾಗಿದ್ದಾರೆ.

ಕೊಂಬೆಟ್ಟು ವಾರ್ಡ್‌ನ ಕೆಲವು ಪ್ರದೇಶಗಳಲ್ಲಿ, ಬೊಳುವಾರು ಮೊದಲಾದ ಕಡೆಗಳಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆಯುತ್ತಿರುವುದು ಒಂದೆರಡು ದಿನಗಳಿಂದ ನಡೆಯುತ್ತಿತ್ತು. ಕಸ ಎಸೆಯುತ್ತಿರುವ ವ್ಯಕ್ತಿಗಳ ಪತ್ತೆಗೆ ನಗರಸಭೆ, ವಾರ್ಡ್‌ ಸದಸ್ಯರ ನೆರವು ಕೇಳಲಾಯಿತು. ಸಿಸಿ ಟಿವಿ ಫೂಟೇಜ್‌ ಪರಿಶೀಲಿಸುವಾಗ ತ್ಯಾಜ್ಯ ಎಸೆದ ವ್ಯಕ್ತಿಗಳು ಪತ್ತೆಯಾದರು. ಅವರಿಗೆ ಎಚ್ಚರಿಕೆ ನೀಡಿ, ಮುಂದೆ ಹೀಗೆ ತ್ಯಾಜ್ಯ ಎಸೆಯದಂತೆ ಮನವರಿಕೆ ಮಾಡಲಾಗಿದೆ. ಮುಂದೆಯೂ ಪುನರಾವರ್ತನೆ ಆದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಸಾವಿರ ಡಬ್ಬಿ ಹಂಚಿಕೆ
ತ್ಯಾಜ್ಯವನ್ನು ವಿಂಗಡಿಸಿ ನೀಡದೇ ಇರುವುದೇ ತ್ಯಾಜ್ಯ ವಿಲೇವಾರಿಗೆ ದೊಡ್ಡ ಹೊಡೆತ. ಇದನ್ನು ನಿವಾರಿಸುವ ಉದ್ದೇಶದಿಂದ ಹಿಂದಿನ ಆಡಳಿತದ ಸಂದರ್ಭ 11 ಸಾವಿರದಷ್ಟು ಡಸ್ಟ್‌ ಬಿನ್‌ಗಳನ್ನು ತರಿಸಿಕೊಳ್ಳಲಾಗಿತ್ತು. ಪ್ರತಿ ಮನೆ, ಅಂಗಡಿಗಳಿಗೆ ಇವನ್ನು ಹಂಚುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿತ್ತು. ಇದುವರೆಗೆ 1 ಸಾವಿರದಷ್ಟು ಡಸ್ಟ್‌ಬಿನ್‌ ಗಳನ್ನು ಮಾತ್ರ ಹಂಚಲಾಗಿದೆ. ಉಳಿದ 10 ಸಾವಿರದಷ್ಟು ಡಸ್ಟ್‌ಬಿನ್‌ಗಳು ಇನ್ನೂ ನಗರಸಭೆ ಗೋಡೌನ್‌ನಲ್ಲೇ ಇದೆ. ಪ್ರತಿ ಮನೆಗೆ ಎರಡು ಡಸ್ಟ್‌ಬಿನ್‌ ಗಳನ್ನು ನೀಡಲಾಗುತ್ತಿದೆ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕಿಸಿ ನೀಡಬೇಕು. ಆಗ ಹಸಿ ಕಸವನ್ನು ಗೊಬ್ಬರವಾಗಿ ರ್ಬಳಕೆ ಮಾಡಬಹುದು. ಒಣ ಕಸಗಳನ್ನು ಸಂಗ್ರಹಿಸಿ ಪುನರ್ಬಳಕೆ ವಸ್ತುವಾಗಿ ರೂಪಾಂತರ ಮಾಡಬಹುದು ಎಂಬ ಆಲೋಚನೆ ಇದೆ. ಆದರೆ ಡಸ್ಟ್‌ಬಿನ್‌ ಹಂಚಿಕೆಯಲ್ಲಿ ವಿಳಂಬ ಆಗುತ್ತಿರುವುದರಿಂದ, ತ್ಯಾಜ್ಯ ಪುನರ್ಬಳಕೆ ವಿಚಾರವೂ ಗಗನಕುಸುಮವೇ ಆಗುತ್ತಿದೆ. ತ್ಯಾಜ್ಯ ಸಮಸ್ಯೆಯನ್ನು ಸಮರ್ಥ ವಾಗಿ ಹತ್ತಿಕ್ಕಬೇಕಾದರೆ, ಕೆಲಸಗಳು ಸಮರ್ಥವಾಗಿ ನಡೆಯಬೇಕು. ಡಸ್ಟ್‌ಬಿನ್‌ಗಳನ್ನು ಹಂಚಿಕೆ ಮಾಡಿ, ಸೂಕ್ತ ರೀತಿಯಲ್ಲಿ ತ್ಯಾಜ್ಯ ಸಂಗ್ರಹಕ್ಕೆ ಶೀಘ್ರ ಕ್ರಮ ಕೈಗೊಂಡರೆ ಉತ್ತಮ.

Advertisement

ಡಬ್ಬಿ ತೆರವು
ಪುತ್ತೂರು ನಗರಸಭೆ ವ್ಯಾಪ್ತಿಯ ಹಲವು ಕಡೆಗಳಲ್ಲಿದ್ದ ತ್ಯಾಜ್ಯ ಡಬ್ಬಿಯನ್ನು ತೆರವು ಮಾಡಲಾಗಿದೆ. ಗುತ್ತಿಗೆದಾರರು ತ್ಯಾಜ್ಯ ಸಂಗ್ರಹ ಮಾಡುತ್ತಿದ್ದರೂ ಕೆಲವರು ಡಬ್ಬಿಗೇ ತ್ಯಾಜ್ಯ ಸುರಿಯುತ್ತಿದ್ದರು. ಇದರಿಂದ ಗುತ್ತಿಗೆದಾರರಿಗೆ ಸ್ವಲ್ಪ ಹಿನ್ನಡೆ ಆದದ್ದು ಸುಳ್ಳಲ್ಲ. ಈ ಹಿನ್ನೆಲೆಯಲ್ಲಿ ತ್ಯಾಜ್ಯ ಡಬ್ಬಿಯನ್ನು ತೆರವು ಮಾಡಲಾಯಿತು. ಆದರೂ ತ್ಯಾಜ್ಯವನ್ನು ಅದೇ ಸ್ಥಳದಲ್ಲಿ ಎಸೆಯಲಾಗುತ್ತಿತ್ತು. ಡಬ್ಬಿ ಇಲ್ಲದ ಕಾರಣ ಜನರು ತ್ಯಾಜ್ಯವನ್ನು ನೆಲಕ್ಕೆಸೆದು ತೆರಳುತ್ತಿದ್ದರು. ಇದನ್ನು ಗಮನಿಸಿದ ನಗರಸಭೆ ಅಧಿಕಾರಿಗಳು ಫ‌ಲಕಗಳನ್ನು ಅಳವಡಿಸಿದ್ದಾರೆ. ಅದುವರೆಗೆ ರಾಶಿ ಬಿದ್ದಿದ್ದ ತ್ಯಾಜ್ಯವನ್ನು ತೆರವು ಮಾಡಿಸಿ, ಮುಂದೆ ಕಸ ಹಾಕದಂತೆ ಸೂಚನೆ ನೀಡಿದ್ದಾರೆ. ಸ್ಥಳದಲ್ಲಿ ದುರ್ನಾತ ಬೀರದಂತೆ ಕ್ರಮ ಕೈಗೊಳ್ಳಲಾಗಿದೆ. ಇದೀಗ ತ್ಯಾಜ್ಯ ಡಬ್ಬಿ ಇದ್ದ ಪ್ರದೇಶದಲ್ಲಿ ಕಸ ಕಾಣಿಸುತ್ತಿಲ್ಲ.

ಎಚ್ಚರಿಕೆ ನೀಡಿದ್ದೇವೆ
ಯಾವೆಲ್ಲ ಪ್ರದೇಶದಲ್ಲಿ ತ್ಯಾಜ್ಯ ರಾಶಿ ಹಾಕಲಾಗುತ್ತಿದೆ ಎಂಬ ಮಾಹಿತಿಯನ್ನು ವಾರ್ಡ್‌ ಸದಸ್ಯರಿಂದ ಪಡೆದುಕೊಳ್ಳಲಾಗಿದೆ. ರಸ್ತೆ ಬದಿ ತ್ಯಾಜ್ಯ ಎಸೆಯುವವರ ಮಾಹಿತಿ ತೆಗೆದುಕೊಂಡು ಎಚ್ಚರಿಕೆಯನ್ನು ನೀಡಿದ್ದೇವೆ. ತ್ಯಾಜ್ಯ ಸಮಸ್ಯೆಯನ್ನು ಪರಿಹಾರ ಮಾಡುವ ಹಿನ್ನೆಲೆಯಲ್ಲಿ ಈಗಾಗಲೇ 1 ಸಾವಿರದಷ್ಟು ಡಸ್ಟ್‌ ಬಿನ್‌ಗಳನ್ನು ಹಂಚಲಾಗಿದೆ. ಒಟ್ಟು 11000ದಷ್ಟು ಡಸ್ಟ್‌ಬಿನ್‌ ತರಿಸಿಕೊಳ್ಳಲಾಗಿತ್ತು.
 - ರೂಪಾ ಶೆಟ್ಟಿ ಪೌರಾಯುಕ್ತೆ, ಪುತ್ತೂರು ನಗರಸಭೆ 

Advertisement

Udayavani is now on Telegram. Click here to join our channel and stay updated with the latest news.

Next