Advertisement

ಪರಂಪರೆಗೆ ಚ್ಯುತಿ ಬಾರದಂತೆ ದಸರಾ ಆಚರಣೆ

09:56 PM Aug 30, 2019 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪರಂಪರೆಗೆ ಚ್ಯುತಿ ಬಾರದಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾಡಹಬ್ಬದ ಯಶಸ್ಸಿಗೆ ಶ್ರಮಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐತಿಹಾಸಿಕ ಪರಂಪರೆಯ ನಾಡಹಬ್ಬ ದಸರಾ ಮಹೋತ್ಸವವು ತನ್ನದೇ ಆದ ಇತಿಹಾಸ ಹೊಂದಿದೆ. ಈ ಪರಂಪರೆಗೆ ಲೋಪವಾಗದಂತೆ, ದಸರಾ ಮಹೋತ್ಸವದಲ್ಲಿ ಯಾವುದೇ ಗೊಂದಲ, ಸಣ್ಣಪುಟ್ಟ ವ್ಯತ್ಯಾಸ ಇಲ್ಲದಂತೆ ನೋಡಿಕೊಳ್ಳಲಾಗುವುದು. ಈ ಬಗ್ಗೆ ಅಧಿಕಾರಿಗಳು, ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೈಸೂರು ನಗರದಲ್ಲಿ ಮನೆ ಮನೆ ದಸರಾ ಮತ್ತೆ ಆಯೋಜಿಸುವ ಜತೆಗೆ ಗ್ರಾಮೀಣ ದಸರಾವನ್ನೂ ಉತ್ತಮವಾಗಿ ನಡೆಸಲಾಗುವುದು. ವಲಯಮಟ್ಟದ ಕ್ರೀಡಾಕೂಟದಿಂದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ನಡೆಯಲಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು.

ದಸರಾ ವೆಬ್‌ಸೈಟ್‌: ನಾಡಹಬ್ಬ ದಸರಾ ಮಹೋತ್ಸವದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ದೊರೆಯುವಂತೆ 24/7 ಕಾರ್ಯ ನಿರ್ವಹಿಸುವ ಸಹಾಯವಾಣಿ ಹಾಗೂ ದಸರಾ ವೆಬ್‌ಸೈಟ್‌ ಅನ್ನು ಶೀಘ್ರ ಚಾಲನೆ ಮಾಡಲಾಗುವುದು ಎಂದು ತಿಳಿಸಿದರು.

ಪಾರದರ್ಶಕ ದಸರಾ: ದಸರಾ ಮಹೋತ್ಸವದ ಎಲ್ಲಾ ಖರ್ಚು-ವೆಚ್ಚಗಳನ್ನು ಪಾರದರ್ಶಕವಾಗಿ ಇರುವಂತೆ ನೋಡಿಕೊಳ್ಳಲು ಕಲಾವಿದರಿಗೆ ಗೌರವಧನ ಸೇರಿದಂತೆ ಎಲ್ಲ ರೀತಿಯ ಖರ್ಚುಗಳಿಗೂ ಚೆಕ್‌,ಆರ್‌ಟಿಜಿಎಸ್‌ ಮೂಲಕವೇ ಹಣ ಪಾವತಿಯಾಗಲಿದೆ. ಹತ್ತು ರೂಪಾಯಿ ಖರ್ಚು ಮಾಡಿದರೂ ಲೆಕ್ಕ ಇರುವಂತೆ ನೋಡಿಕೊಳ್ಳಲಾಗುವುದು ಎಂದರು.

Advertisement

ದಸರಾ ಮಹೋತ್ಸವದ ಉಪ ಸಮಿತಿಗಳಿಗೆ ಅಧ್ಯಕ್ಷರು,ಸದಸ್ಯರನ್ನು ಐದಾರು ದಿನಗಳಲ್ಲಿ ನೇಮಕ ಮಾಡಲಾಗುವುದು. ಈ ಜವಾಬ್ದಾರಿಯನ್ನು ಸಂಸದ ಪ್ರತಾಪ್‌ಸಿಂಹ ಅವರಿಗೆ ವಹಿಸಿ ಅವರನ್ನು ದಸರಾ ಮಹೋತ್ಸವ ಸಮಿತಿಯ ಸಂಚಾಲಕರನ್ನಾಗಿ ನೇಮಿಸಲಾಗಿದೆ.

ಪ್ರತಿ ಸಮಿತಿಗೂ ನಗರಪಾಲಿಕೆ,ಜಿಪಂ ಸದಸ್ಯರನ್ನು ಸೇರಿಸಿಕೊಳ್ಳುವ ಜತೆಗೆ ಎಲ್ಲ ಪಕ್ಷದವರಿಗೂ ಅವಕಾಶ ಕೊಡಲಾಗುವುದು. ಮುಂದಿನ ಗುರುವಾರ ಕಾಂಗ್ರೆಸ್‌- ಜೆಡಿಎಸ್‌ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿ ಅವರಿಂದಲೂ ಸಲಹೆ ಪಡೆಯುವುದಾಗಿ ಹೇಳಿದರು. ಆಹ್ವಾನ ಪತ್ರಿಕೆ,ಪಾಸ್‌ ವಿತರಣೆಯಲ್ಲೂ ಲೋಪವಾಗದಂತೆ ಅಚ್ಚುಕಟ್ಟಾಗಿ ವಿತರಣೆಗೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ ಎಂದರು.

ರಾಮದಾಸ್‌ ಬರ್ತಾರೆ: ಶಾಸಕ ಎಸ್‌.ಎ.ರಾಮದಾಸ್‌ ನಮ್ಮವರೇ, ನಿನ್ನೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಂದಾಗ ನಮ್ಮ ಜೊತೆಗೇ ಇದ್ದರು, ಒಂದು ಸಭೆಗೆ ಬರದಿದ್ದರೆ, ಮತ್ತೂಂದು ಸಭೆಗೆ ಬರ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next