ಡರ್ಬಾನ್: ಫಾ ಡು ಪ್ಲೆಸಿಸ್ ಮತ್ತು ಡೇವಿಡ್ ಮಿಲ್ಲರ್ ಅವರ ಆಕರ್ಷಕ ಶತಕ ಮತ್ತು ಬೌಲರ್‌ಗಳ ನಿಖರ ದಾಳಿಯಿಂದಾಗಿ ದಕ್ಷಿಣ ಆಫ್ರಿಕಾ ತಂಡವು ದ್ವಿತೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 121 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಈ ಗೆಲುವಿನಿಂದ ದಕ್ಷಿಣ ಆಫ್ರಿಕಾವು ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಸರಣಿಯ ಮೂರನೇ ಪಂದ್ಯ ಫೆ. 4ರಂದು ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯಲಿದೆ.
ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡಕ್ಕೆ ಪ್ಲೆಸಿಸ್ ಮತ್ತು ಮಿಲ್ಲರ್ ಆಸರೆಯಾದರು. ಆಮ್ಲ, ಕಾಕ್, ಡಿ’ವಿಲಿಯರ್ ಮತ್ತು ಡ್ಯುಮಿನಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಬಳಿಕ ಪ್ಲೆಸಿಸ್ ಅವರನ್ನು ಸೇರಿಕೊಂಡ ಮಿಲ್ಲರ್ ಜವಾಬ್ದಾರಿಯಿಂದ ಆಡಿ ತಂಡವನ್ನು ಕುಸಿತದಿಂದ ಪಾರು ಮಾಡಿದರು. ಐದನೇ ವಿಕೆಟಿಗೆ 117 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ತಂಡವನ್ನು ಆಧರಿಸಿದರು.
ಒಂದು ಕಡೆ ವಿಕೆಟ್ ಉರುಳುತ್ತಿದ್ದರೂ ತಾಳ್ಮೆಯ ಆಟವಾಡಿದ ಪ್ಲೆಸಿಸ್ 120 ಎಸೆತ ಎದುರಿಸಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 105 ರನ್ ಗಳಿಸಿ ಔಟಾದರು. ಪ್ಲೆಸಿಸ್‌ಗೆ ಹೋಲಿಸಿದರೆ ಮಿಲ್ಲರ್ ಅವರ ಆಟ ಬಿರುಸಿನಿಂದ ಕೂಡಿತ್ತು. 98 ಎಸೆತ ಎದುರಿಸಿದ್ದ ಅವರು 3 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ 117 ರನ್ ಗಳಿಸಿ ಔಟಾಗದೆ ಉಳಿದರು. ಅವರು ಕ್ರಿಸ್ ಮೊರಿಸ್ ಜತೆ ಆರನೇ ವಿಕೆಟಿಗೆ 60 ರನ್ ಪೇರಿಸಿದ್ದರು.
ಗೆಲ್ಲಲು 308 ರನ್ ಗಳಿಸುವ ಕಠಿನ ಗುರಿ ಪಡೆದ ಶ್ರೀಲಂಕಾ ತಂಡವು ಹರಿಣಗಳ ಶಿಸ್ತುಬದ್ಧ ಬೌಲಿಂಗ್‌ನಿಂದಾಗಿ ರನ್ ಗಳಿಸಲು ಒದ್ದಾಡಿತು. ಆಗಾಗ್ಗೆ ವಿಕೆಟ್ ಕಳೆದುಕೊಂಡ ಪ್ರವಾಸಿ ತಂಡ 37.5 ಓವರ್‌ಗಳಲ್ಲಿ 186 ರನ್ನಿಗೆ ಆಲೌಟಾಯಿತು.
ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ 6 ವಿಕೆಟಿಗೆ 307 (ಪ್ಲೆಸಿಸ್ 105, ಮಿಲ್ಲರ್ 117 ಔಟಾಗದೆ, ಕ್ರಿಸ್ ಮೊರಿಸ್ 26, ಸುರಂಗ ಲಕ್ಮಲ್ 54ಕ್ಕೆ 2; ಶ್ರೀಲಂಕಾ 37.5 ಓವರ್‌ಗಳಲ್ಲಿ 186 ಆಲೌಟ್ (ನಿರೋಶನ್ ಡಿಕ್ವೆಲ್ಲ 25, ಉಪುಲ್ ತರಂಗ 26, ಕುಸಲ್ ಮೆಂಡಿಸ್ 20, ದಿನೇಶ್ ಚಂಡಿಮಾಲ್ 36, ಸಚಿತ್ ಪತಿರಣ 26, ವೇಯ್ನ ಪಾರ್ನೆಲ್ 34ಕ್ಕೆ 2, ಇಮ್ರಾನ್ ತಾಹಿರ್ 26ಕ್ಕೆ 2, ಜೀನ್‌ಪಾಲ್ ಡ್ಯುಮಿನಿ 30ಕ್ಕೆ 2). ಪಂದ್ಯಶ್ರೇಷ್ಠ: ಫಾ ಡು ಪ್ಲೆಸಿಸ್