ಯಾದಗಿರಿ : ಜಿಲ್ಲೆಯ ಸುರಪುರ ತಹಶೀಲ್ದಾರ ಕಚೇರಿಯ ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೊವೀಡ್ 19 ಖರ್ಚು ನಿರ್ವಹಣೆ ಖಾತೆಯಿಂದ 75 ಲಕ್ಷ ರೂಪಾಯಿ ಮಾಯವಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಮಂಗಳವಾರ ಸಂಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಜಿಲ್ಲೆಯ ಸುರಪುರ ನಗರದ ಆಕ್ಸಿಸ್ ಬ್ಯಾಂಕ್‌ನಲ್ಲಿ ತಹಸೀಲ್ದಾರ ಕಚೇರಿಯ ಖಾತೆ ಸಂಖ್ಯೆ 91901008033954 ದಿಂದ ಜೂನ್ 1ರಂದು ಬರೋಬ್ಬರಿ 75,59,900 ರೂಪಾಯಿ ವಂಚಿಸಿರುವ ಘಟನೆ ನಡೆದಿದ್ದು, ಖಾತೆಗೆ ಜಿಲ್ಲಾಧಿಕಾರಿಗಳ ನೈಸರ್ಗಿಕ ವಿಕೋಪ ಖಾತೆಯಿಂದ ಹಂತ ಹಂತವಾಗಿ ಒಟ್ಟು 3.55 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿತ್ತು.
ತಹಶೀಲ್ದಾರರು ಕೋವಿಡ್‌ಗೆ ತುತ್ತಾಗಿ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಗುಣಮುಖಗೊಂಡು ಮರಳಿದ ವೇಳೆ ಹೆಚ್ಚುವರಿ ಹಣ ಬೇಕಿದ್ದಲ್ಲಿ ಕೋರಿಕೆ ಪತ್ರ ಸಲ್ಲಿಸಲು ಜಿಲ್ಲಾಧಿಕಾರಿಗಳ ಕಚೇರಿಯಿಂದ ತಿಳಿಸಿದ್ದರಿಂದ ಸೆ.22ರಂದು ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಮತ್ತು ವಿಷಯ ನಿರ್ವಹಕರನ್ನು ವಿವರಣೆ ಕೇಳಿದ್ದರಿಂದ ಬ್ಯಾಂಕ್‌ಗೆ ತೆರಳಿ ಖಾತೆಯ ಸ್ಟೇಟ್ ಮೆಂಟ್ ಪಡೆಯಲು ಹೋದ ಸಂದರ್ಭದಲ್ಲಿ 2020ರ ಜೂನ್ 1ರಂದು ಖಾತೆಯಿಂದ ಹಣ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಹೆಸರಿಗೆ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ.
ತಹಸೀಲ್ದಾರರು ನೀಡಿರುವ ದೂರಿನಲ್ಲಿ ತಾವು ಶ್ರೀ ಮಹಾಲಕ್ಷ್ಮಿ ಎಂಟರ್ ಪ್ರೈಸಸ್ ಇವರ ಹೆಸರಿನಲ್ಲಿ ಯಾವುದೇ ಚೆಕ್ ನೀಡದೆ ಇದ್ದರು ಹಣ ವರ್ಗಾವಣೆ ಆಗಿದೆ ಎಂದು ಹೇಳಿದ್ದು, ಈ ಕುರಿತು ಬ್ಯಾಂಕ್ ವ್ಯವಸ್ಥಾಪಕರನ್ನು ವಿಚಾರಿಸಿದಾಗ ಚೆಕ್ ನಂ.’000080′ 585211302: 000190’31 ತೋರಿಸಿದ್ದಾರೆ.
ಚೆಕ್ ಪರಿಶೀಲನೆ ವೇಳೆ ಅದರ ಮೇಲೆ ತಹಸೀಲ್ದಾರರ ನಕಲಿ ಸಹಿ ಮತ್ತು ಮೋಹರು ಹಾಕಲಾಗಿದ್ದು ಜತೆಗೆ ವಿಷಯ ನಿರ್ವಹಕರ ಕೈಬರಹದಂತೆ ಚೆಕ್ ಮೇಲೆ ಅಕ್ಷರ ಮತ್ತು ಅಂಕಿ ಸಂಖ್ಯೆ ಬರೆದು ವಿಷಯ ನಿರ್ವಹಕರ ನಕಲಿ ಸಹಿ ಮಾಡಿ ಬ್ಯಾಂಕಿಗೆ ಚೆಕ್ ನೀಡಿ ವಂಚನೆಯಿಂದ ಹಣ ವರ್ಗವಾಗಿರುವುದು ಬಯಲಿಗೆ ಬಂದಿದೆ. ತಾಳಿಕೋಟೆಯ ಶ್ರೀ ಮಹಾಲಕ್ಷ್ಮಿ ಎಂಟರ ಪ್ರೈಸಸ್ ತಾಳಿಕೋಟಿ ಮಾಲಿಕರು ಹುಣಸಗಿ ತಾಲೂಕಿನ ವಜ್ಜಲ್ ಗ್ರಾಮದ ಲಕ್ಷ್ಮಿ ಗಂಡ ರಾಜು ಕಟ್ಟಮನಿ ಎಂದು ತಿಳಿದು ಬಂದಿದೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.