ನಂಜನಗೂಡು: ಕೃಷಿ ಲಾಭದಾಯಕ ವಾಗುವವರೆಗೂ ಹಳ್ಳಿಗಳು ವೃದ್ಧಾಶ್ರಮ ಗಳಾಗುತ್ತಲೇ ಇರುತ್ತವೆ. ಇದನ್ನು ಮನಗಂಡೇ ತಾನು ಕೃಷಿಗೆ ಉತ್ತೇಜನ ನೀಡಿದ್ದೆ. ಪ್ರತಿ ರೈತ ಕುಟುಂಬಕ್ಕೆ 10 ಸಾವಿರ ರೂ. ಸಹಾಯಧನ ನೀಡಲು ತಮ್ಮ ಅವಧಿಯಲ್ಲಿ ಜಾರಿಗೊಳಿಸಿದ್ದ ಯೋಜನೆಯನ್ನು ಎನ್‌ಡಿಎ ಸರ್ಕಾರ ತನ್ನ ಬಜೆಟ್‌ನಲ್ಲಿ ನಕಲು ಮಾಡಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದ ಎರಡನೇ ದಿನ ನಡೆದ ಭಜನಾ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ತಮ್ಮ ಯೋಜನೆ ಗಳನ್ನು ಕಾಪಿ ಮಾಡಿ ರೈತರಿಗೆ 6 ಸಾವಿರ ರೂ. ನೀಡುತ್ತಿದೆ. ತಮ್ಮ ಬಜೆಟನ್ನು ನಕಲು ಮಾಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಲೇವಡಿ ಮಾಡಿದರು.
ಕರ್ಮ ಸಿದ್ಧಾಂತ ತಿರಸ್ಕರಿಸಿ: ಕರ್ಮ ಸಿದ್ಧಾಂತವನ್ನು ತಿರಸ್ಕರಿಸದಿದ್ದರೆ ಯಾರಿ ಗೂ ಭವಿಷ್ಯಲ್ಲ. ಕರ್ಮ ಸಿದ್ಧಾಂತವನ್ನು ನಂಬಿದ್ದರೆ ತಾವು ಶಾಸಕ ಕೂಡ ಆಗುತ್ತಿರಲಿಲ್ಲ. ಇದನ್ನು ತಾನು ಹೇಳಿದರೆ ವಿವಾದವಾಗುತ್ತದೆ. ಇದನ್ನು ಪ್ರತಿಪಾದಿಸಿದವರು ಬಸವಾದಿ ಶರಣರು ಎಂದು ತಿಳಿಸಿದರು.
ಸುತ್ತೂರು ಮಠದ ಹಿಂದಿನ ಶ್ರೀಗಳು ಜ್ಞಾನದಾಸೋಹ, ಅಕ್ಷರ ದಾಸೋಹ ಆರಂಭಿಸಿದರು. ಇಂದಿನ ಶ್ರೀಗಳು ಅದನ್ನು ವಿಶ್ವವ್ಯಾಪಿಯಾಗಿಸಿದರು ಎಂದರು. ನಟ ದರ್ಶನ್ ಮಾತನಾಡಿ, ತಾನು ಇದೇ ಸಂಸ್ಥೆಯ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಯಾಗಿದ್ದೆ ಎಂದು ಸ್ಮರಿಸಿದರು.
ಸಮಾರಂಭದಲ್ಲಿ ಸುತ್ತೂರು ಶ್ರೀ, ಮಲ್ಲನಮೂಲೆಯ ಚೆನ್ನಬಸವ ಸ್ವಾಮೀಜಿ, ಕೋಡಿ ಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ, ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವ ಯು.ಟಿ.ಖಾದರ್, ಮಾಜಿ ಶಾಸಕ ಎಚ್.ಡಿ.ಚೌಡಯ್ಯ, ಸಂಸದ ಧ್ರುವನಾರಾಯಣ, ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ,
ನೀಲಗಿರಿ ಸಂಸದ ಗೋಪಾಲಕೃಷ್ಣನ್, ಮಾಜಿ ಶಾಸಕರಾದ ಧರ್ಮಸೇನ, ಕಳಲೆ ಕೇಶವಮೂರ್ತಿ, ಎಂ.ಕೆ.ಸೋಮಶೇಖರ್, ಶಾಸಕರಾದ ಸಂದೇಶ್ ನಾಗರಾಜ್, ಕೊಂಡಜ್ಜಿ ಮೋಹನ್, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ, ಪ್ರೊ. ಡಿ.ಎಸ್. ಸದಾಶಿವಮೂರ್ತಿ ಇದ್ದರು.
ಸಿದ್ದರಾಮಯ್ಯರನ್ನು ಮಾಜಿ ಸಿಎಂ ಎನ್ನಲಾಗುತ್ತಿಲ್ಲ: ಸಿದ್ದರಾಮಯ್ಯ ಅವರನ್ನು ಮಾಜಿ ಮುಖ್ಯಮಂತ್ರಿ ಎಂದು ಕರೆಯಲು ನಾನೂ ಸೇರಿದಂತೆ ನಮ್ಮವರ್ಯಾರಿಗೂ ಸಾಧ್ಯವಾಗುತ್ತಿಲ್ಲ. ಆದರೆ, ಇದು ಪ್ರಜಾಪ್ರಭುತ್ವ, ಸನ್ನಿವೇಶವನ್ನು ಒಪ್ಪಿಕೊಳ್ಳಲೇಬೇಕು ಎಂದು ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ತಿಳಿಸಿದರು. ಗೃಹ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಸಿದ್ದರಾಮಯ್ಯ ಏನೇ ಮಾತನಾಡಿದರೂ ಅದು ಐತಿಹಾಸಿಕವಾಗಿಯೇ ಇರುತ್ತದೆ ಎಂದು ಹೇಳಿದರು.