Advertisement
ಮಿಶ್ರ ತ್ಯಾಜ್ಯ ವಿಲೇವಾರಿ ಪರಿಣಾಮ ಮಿಥೇನ್ ರೀತಿಯ ಅಪಾಯಕಾರಿ ಅಂಶಗಳಿಂದಾಗಿ ಬಿಂಗೀಪುರದ ಜನರಲ್ಲಿ ಉಸಿರಾಟ ಸಂಬಂಧಿ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಮೂಗು ಮುಚ್ಚಿಕೊಂಡೇ ನಡೆದಾಡುವ ಪರಿಸ್ಥಿತಿ ಜತೆಗೆ, ಕಸ ಹಾಕಿದ ಪ್ರದೇಶದಲ್ಲಿ ಕುದಿಯುವ ಮಿಥೇನ್ ಅಂಶ, ಎಲ್ಲಿ ಮೈಮೇಲೆ ಬೀಳುವುದೋ ಎಂಬ ಭಯದಿಂದ ಓಡಾಡುತ್ತಿದ್ದ ಜಾಗ, ಈಗ ಉದ್ಯಾನವಾಗಿ ಬದಲಾಗುತ್ತಿರುವುದು ಸ್ಥಳೀಯರಲ್ಲಿ ಮಂದಹಾಸ ಸಿಟಿ ಪುಟ -2- ಲೀಡ್- ಡಂಪಿಂಗ್ ಯಾರ್ಡ್ ಈಗ ಉದ್ಯಾನವನಮೂಡಿಸಿದೆ.
Related Articles
Advertisement
ಕೆಲಸ ವೈಜ್ಞಾನಿಕವಾಗಿದೆಯೇ ಎಂಬುದೇ ಪ್ರಶ್ನೆ: ಈ ಪ್ರದೇಶವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎರಡೂವರೆ ವರ್ಷಗಳ ಹಿಂದೆ ತ್ಯಾಜ್ಯ ನಿರ್ವಾಹಣೆಗೆ ಮತ್ತು ಅಭಿವೃದ್ಧಿಗೆ ವರದಿ ಸಿದ್ಧಪಡಿಸಲಾಗಿತ್ತು. ಈ ವರದಿಯಂತೆ 15 ವರ್ಷಗಳ ಅವಧಿಯಲ್ಲಿ 25 ಸಾವಿರ ಲೀ. ತ್ಯಾಜ್ಯ ದ್ರಾವಣ ಶುದ್ಧೀಕರಣ ಘಟಕ ನಿರ್ಮಿಸಬೇಕು ಮತ್ತು ತ್ಯಾಜ್ಯ ದ್ರಾವಣ ಹೊರತೆಗೆಯಲು 15 ಮೀ. ಆಳ ಹಾಗೂ 0.60 ಮೀ ಸುತ್ತಳತೆಯಲ್ಲಿ ಬಾವಿ ತೆರೆಯುವುದು ಮತ್ತು ಪ್ರತಿ ಎಕರೆಗೆ ಒಂದರಂತೆ ಕನಿಷ್ಠ 20 ಬಾವಿ ನಿರ್ಮಿಸುವುದು ಆ ಮೂಲಕ ಮಿಥೇಲ್ ಅನಿಲ ಹೊರತೆಗೆವುದು ಹಾಗೂ ಪ್ರತ್ಯೇಕ ಚರಂಡಿ ನಿರ್ಮಿಸಿ ತ್ಯಾಜ್ಯ ನೀರು ಹೊರತೆಗೆಯಬೇಕು ಎಂದು ವರದಿಯಲ್ಲಿ ಉಲ್ಲೇಖೀಸಲಾಗಿತ್ತು ಎನ್ನಲಾಗಿದೆ.
ಆದರೆ, ಈ ವರದಿಯಂತೆ ಬಿಬಿಎಂಪಿ ವೈಜ್ಞಾನಿಕವಾಗಿ ಯಾವುದೇ ಕ್ರಮ ಕೈಗೊಂಡ ಕುರುಹು ಸ್ಥಳದಲ್ಲಿ ಕಾಣಿಸುತ್ತಿಲ್ಲ. ಈಗಲೂ ಉಳಿದಿರುವ ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತಿದೆ. ತ್ಯಾಜ್ಯ ಯಾರ್ಡ್ ಅನ್ನು ಮಣ್ಣು ಹಾಕಿ ಮುಚ್ಚುತ್ತಿದ್ದು, ಕೆರೆಗೆ ಕಲುಷಿತ ನೀರು ಸೇರುವುದು ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಕಾಮಗಾರಿ ಎಷ್ಟು ವೈಜ್ಞಾನಿಕವಾಗಿ ನಡೆದಿದೆ ಎಂಬ ಪ್ರಶ್ನೆ ಉದ್ಭವಿಸಿದೆ.
ನಾಲ್ಕು ಎಕರೆ ಒತ್ತುವರಿ: 24 ಎಕರೆ ವಿಸ್ತೀರ್ಣದ ಬಿಂಗೀಪುರದ ತ್ಯಾಜ್ಯ ಯಾರ್ಡ್‌ನಲ್ಲಿ 4 ಎಕರೆ ಪ್ರದೇಶ ಒತ್ತುವರಿಯಾಗಿತ್ತು. ಅದನ್ನು ಪೊಲೀಸರ ನೆರವಿನೊಂದಿಗೆ ಮರಳಿ ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶದ ಸುತ್ತ ತಡೆಗೋಡೆ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಬಿಂಗೀಪುರ ಜನರ ನೀರಿನ ದಾಹ ನೀಗಿಲ್ಲ!: ತ್ಯಾಜ್ಯ ಘಟಕ ಮುಚ್ಚಿದರೂ ಬಿಂಗೀಪುರದ ಅಂತರ್ಜಲ ಶುದ್ಧವಾಗಿಲ್ಲ. ತ್ಯಾಜ್ಯ ಘಟಕದಿಂದ ಇಲ್ಲಿನ ಕೆರೆ ಮತ್ತು ಬೋರ್‌ವೆಲ್‌ಗಳ ಮೇಲೆ ನೇರ ಪರಿಣಾಮ ಉಂಟಾಗಿದ್ದು, ಈ ಭಾಗದ ಹಲವು ಗ್ರಾಮದ ಜನ ಇಂದಿಗೂ ಅಂತರ್ಜಲ ಬಿಟ್ಟು ಬೇರೆ ಮಾರ್ಗಗಳ ಆಸರೆ ಪಡೆಯಬೇಕಾಗಿದೆ. “ಕಾವೇರಿ ನೀರು ಕೊಡ್ತೀವಿ, ಬೋರ್‌ವೆಲ್ ಕೊರೆಸ್ತೀವಿ ಎಂದು ಭರವಸೆ ನೀಡಿದ್ದರು. ಯಾವುದೂ ಈಡೇರಿಲ್ಲ. ಕೆರೆಗೆ ಒಳಚರಂಡಿ ನೀರೂ ಸೇರುತ್ತಿದೆ. ಹಸುಗಳಿಗೆ ನೀರು ಸಿಗುತ್ತಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ಕವಿತಾ.
“ಒಂದು ಕಾಲದಲ್ಲಿ ಈ ಕೆರೆಯಲ್ಲಿ ಸಾವಿರಾರು ಮೀನುಗಳಿದ್ದವು. ತ್ಯಾಜ್ಯ ಸುರಿಯುವುದು ಪ್ರಾರಂಭವಾದ ನಂತರ ಕೆರೆಗೆ ಇಳಿಯುವುದಕ್ಕೇ ಭಯ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಈಗ ಜಾನುವಾರುಗಳ ಮೈ ತೊಳೆಯುವುದಕ್ಕಷ್ಟೇ ಕೆರೆ ನೀರನ್ನು ಬಳಸಲಾಗುತ್ತಿದೆ. ಮಳೆ ಬಂದಾಗ ಕೆರೆಗೆ ಇಳಿದರೆ ಚರ್ಮ ರೋಗಗಳು ಕಾಣಿಸಿಕೊಳ್ಳುತ್ತವೆ’ ಎನ್ನುತ್ತಾರೆ ಇಮ್ತಿಯಾಜ್.
ತ್ಯಾಜ್ಯ ನೀರು ಕೆರೆಗೆ ಸೇರದಂತೆ ತಡೆಗೋಡೆ ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಇಂದಿಗೂ ಕೆರೆಗೆ ಕಲುಷಿತ ನೀರು ಸೇರುವುದು ತಪ್ಪುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಅನುದಾನ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
* ಹಿತೇಶ್ ವೈ