Advertisement

ಮಳೆಗೆ ವಾಹನಗಳ ಹಾವಳಿಯೂ ಕಾರಣ

11:57 AM Sep 11, 2017 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದೊಂದು ತಿಂಗಳಿಂದ ಧೋ ಎಂದು ಸುರಿಯುತ್ತಿರುವ ಭಾರಿ ಮಳೆಗೆ ಬಹುಮಹಡಿ ಬೃಹತ್‌ ಕಟ್ಟಡಗಳೂ ಕಾರಣ ಎಂಬ ಸಂಗತಿಯೊಂದು ಬಯಲಾಗಿದೆ.  ಕಳೆದ 45 ದಿನಗಳಿಂದ ಮಳೆ ನಗರವನ್ನು ಬಿಟ್ಟು ಬಿಡದೆ ಕಾಡುತ್ತಿದ್ದು, ಮಳೆಗೆ ನಗರದ ಹಲವಾರು ಪ್ರದೇಶಗಳು ಈಗಾಗಲೇ ಹಾನಿಗೀಡಾಗಿವೆ. ಜತೆಗೆ ನೂರಾರು ಮರಗಳು ಧರೆಗುರುಳಿವೆ, ಹಲವು ಸಾವು ನೋವುಗಳು ಸಂಭವಿಸಿವೆ.

Advertisement

ಇದರ ಜತೆಗೆ ನಗರದ ಜನಜೀವನ ಅಸ್ತವ್ಯಸ್ಥಗೊಳ್ಳುವಂತೆ ಮಾಡಿದೆ. ಆದರೆ, ವಿಶೇಷವಾಗಿ ಬೆಂಗಳೂರಿನಲ್ಲೇ ಹೆಚ್ಚು ಮಳೆಯಾಗಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಇಲ್ಲಿನ ಬಹುಮಹಡಿ ಬೃಹತ್‌ ಕಟ್ಟಡಗಳು, ಮಿತಿ ಮೀರದ ವಾಹನಗಳು, ಜನಸಂಖ್ಯೆಯಿಂದ ಉಂಟಾಗುತ್ತಿರುವ ಉಷ್ಣಾಂಶ ಈ ಮಳೆಗೆ ಕಾರಣವಾಗಿದೆ ಎನ್ನುತ್ತಾರೆ ತಜ್ಞರು. 

ಸಾಮಾನ್ಯವಾಗಿ ಬೆಂಗಳೂರಿನ ಉಷ್ಣಾಂಶ ಉಳಿದ ಪ್ರದೇಶಗಳಿಗಿಂತ ಒಂದೆರಡು ಡಿಗ್ರಿ ಹೆಚ್ಚಿರುವುದರಿಂದ ತೇವಾಂಶಭರಿತ ಮೋಡಗಳು ನಗರದಲ್ಲಿ ಹೆಚ್ಚಿನ ಮಳೆ ಸುರಿಸುತ್ತಿವೆ. ನಗರದಲ್ಲಿ ಬಹುಮಹಡಿ ಬೃಹತ್‌ ಕಟ್ಟಡಗಳು, ಗಾಜಿನ ಕಟ್ಟಡಗಳು ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಳಕ್ಕೆ ಕಾರಣವಾಗಿವೆ.

ಕಟ್ಟಡಗಳ ಗಾಜಿನ ಮೇಲೆ ಸೂರ್ಯನ ಕಿರಣಗಳು ಪ್ರತಿಫ‌ಲಿಸಿ ವಾತಾವರಣದಲ್ಲಿನ ಉಷ್ಣಾಂಶ ಹೆಚ್ಚಿಸುತ್ತದೆ. ಇದರಿಂದಾಗಿ ವಾತಾವರಣದಲ್ಲಿನ ಗಾಳಿಯ ಭಾರ ಕಡಿಮೆಯಾಗಲಿದ್ದು, ತೇವಾಂಶಭರಿತ ಮೋಡಗಳು ಇಂತಹ ಪ್ರದೇಶಗಳಿಗೆ ಬರುವುದೇ ಮಳೆಗೆ ಕಾರಣವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಾಹನಗಳಿಂದಲೂ ಉಷ್ಣಾಂಶ ಹೆಚ್ಚಳ 
ನಗರೀಕರಣದಿಂದ ಹವಾಮಾನದಲ್ಲಿ ಏರುಪೇರಾಗುವುದು ಸಾಮಾನ್ಯವಾಗಿರುತ್ತದೆ. ನಗರದಲ್ಲಿ ಸುಮಾರು 70ಲಕ್ಷಕ್ಕೂ ಹೆಚ್ಚಿನ ವಾಹನಗಳಿದ್ದು ಅವುಗಳಿಂದಲೂ ತಾಪಮಾನ ಏರಿಕೆಯಾಗುತ್ತಿದೆ. ಹೆಚ್ಚಿನ ಜನಸಂಖ್ಯೆಯಿಂದಲೂ ನಗರದಲ್ಲಿ ಉಷ್ಣಾಂಶ ಪ್ರಮಾಣ ಹೆಚ್ಚಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

Advertisement

ಸಂಜೆ, ರಾತ್ರಿ ಮಳೆಯಾಗುವುದೇಕೆ?
ಕಳೆದ ಕೆಲ ದಿನಗಳಿಂದ ನಗರದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಹೆಚ್ಚಿನ ಬಿಲಿಸಿದ್ದು, ಸಂಜೆ ಅಥವಾ ಮಧ್ಯರಾತ್ರಿಯ ವೇಳೆ ಮಳೆಯಾಗುತ್ತಿದೆ. ನಗರದಲ್ಲಿ ಸೂರ್ಯ ತಾಪಮಾನ ಹೆಚ್ಚಿದ್ದಾಗ ಉಷ್ಣಾಂಶವೂ ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮೋಡಗಳು ಮೇಲೆ ಹೋಗಿರುತ್ತವೆ. ಉಷ್ಣಾಂಶ ಕಡಿಮೆಯಾಗಿ ವಾತಾವರಣ ತಂಪಾದಾಗ ಒತ್ತಡ ಕಡಿಮೆಯಾಗಿ ಮಳೆಯಾಗುತ್ತದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ಅಧಿಕಾರಿ ತಿಳಿಸಿದ್ದಾರೆ. 

ಸರ್ಕಾರ, ಬಿಬಿಎಂಪಿಯ ಕಾರ್ಯವೈಖರಿ ಜಗಜ್ಜಾಹೀರು
ಕೇಂದ್ರ ಸಚಿವ ಅನಂತಕುಮಾರ್‌ ಅವರು ಗವೀಪುರಂ ಗುಟ್ಟಹಳ್ಳಿ, ಸುಕೇನಹಳ್ಳಿ ವಾರ್ಡ್‌, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶಗಳು ಹಾಗೂ ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರ ವಾರ್ಡ್‌ ಪ್ರದೇಶಗಳಿಗೆ ಭೇಟಿ ನೀಡಿ ಆ ಭಾಗದಲ್ಲಿ ಮಳೆಯಿಂದ ಆಗಿರುವ ಹಾನಿ ಬಗ್ಗೆ ಪರಿಶೀಲಿಸಿದರು. ಅಲ್ಲದೆ, ತೊಂದರೆಗೊಳಗಾದ ಕುಟುಂಬಗಳಿಗೆ ನೆರವಾಗುವಂತೆ ಜತೆಗಿದ್ದ ಪಾಲಿಕೆ ಸದಸ್ಯರಿಗೆ ಸೂಚಿಸಿದರು. 

ನಂತರ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅನಂತ್‌ಕುಮಾರ್‌, ನಗರದಲ್ಲಿ ಮಳೆಯಿಂದ ಆಗಿರುವ ಹಾನಿ ಸರಿಪಡಿಸುವಲ್ಲಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫ‌ಲವಾಗಿದೆ ಎಂದು ಗುಡುಗಿದರು. ಮಳೆ ಅಥವಾ ಬೇರ್ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ಸರ್ಕಾರವು ತನ್ನಲ್ಲಿರುವ ಸಂಪನ್ಮೂಲದ ಹೆಚ್ಚಿನ ಭಾಗವನ್ನು ಪರಿಹಾರ ಕಾರ್ಯಕ್ಕೆ ವಿನಿಯೋಗ ಮಾಡಬೇಕು. ಪರಿಹಾರಕ್ಕಾಗಿ ಅನ್ಯನೆಪ ಹೇಳುವುದು ಸರಿಯಲ್ಲ ಎಂದರು.

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಪ್ರಭಾವ ಬೆಂಗಳೂರಿನ ಮೇಲೆ ಹೆಚ್ಚಾಗಿರುತ್ತದೆ. ಇದರೊಂದಿಗೆ ನಗರದಲ್ಲಿ ಬಹುಮಹಡಿ ಬೃಹತ್‌ ಕಟ್ಟಡಗಳು, ವಾಹನಗಳು ಮತ್ತು ಜನಸಂಖ್ಯೆಯಿಂದ ವಾತಾವರಣದಲ್ಲಿ ಏರುಪೇರು ಉಂಟಾಗುತ್ತದೆ. ಉಷ್ಣಾಂಶ ಹೆಚ್ಚಿದ್ದಾಗ ವಾತಾವರಣದಲ್ಲಿನ ಒತ್ತಡ ಕಡಿಮೆಯಾಗಲಿದ್ದು, ತೇವಾಂಶಭರಿತ ಮೋಡಲು ಇಂತಹ ಪ್ರದೇಶಗಳ ಕಡೆಗೆ ಆಕರ್ಷಿತವಾಗಿ ಮಳೆಯಾಗಲಿದೆ. 
-ಡಾ. ಜಿ.ಎನ್‌.ಶ್ರೀನಿವಾಸ ರೆಡ್ಡಿ, ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ

* ವೆಂ ಸುನೀಲ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next