ಬೆಂಗಳೂರು: “ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಕೇಂದ್ರ ಕಚೇರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಉಳಿಯಲು ಪದ್ಮವಿಭೂಷಣ ಪ್ರೊ.ಸತೀಶ್ ಧವನ್ ಮೂಲ ಕಾರಣಕರ್ತರು’ ಎಂದು ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಬಣ್ಣಿಸಿದರು.
ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಆವರಣದಲ್ಲಿ ಗುರುವಾರ “ಪ್ರಸ್ತುತ’ ಸಂಸ್ಥೆ ಹಮ್ಮಿಕೊಂಡಿದ್ದ “ಪ್ರೊ. ಸತೀಶ್ ಧವನ್ ಸ್ಮರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕ್ರಂ ಸಾರಾಭಾಯಿ ಅವರ ದಿಢೀರ್ ನಿರ್ಗಮನದಿಂದ ಬಾಹ್ಯಾಕಾಶ ಕ್ಷೇತ್ರ ಅನಾಥವಾಯಿತು. ಅದನ್ನು ಮುನ್ನಡೆಸಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆಯ್ಕೆ ಮಾಡಿದ್ದು ಪ್ರೊ.ಸತೀಶ್ ಧವನ್ ಅವರನ್ನು.
ಆದರೆ, ಈ ಜವಾಬ್ದಾರಿಯನ್ನು ಸ್ವೀಕರಿಸಲು ಅಂದು ಪ್ರಧಾನಿ ಅವರಿಗೇ ಸತೀಶ್ ಮೂರು ಷರತ್ತುಗಳನ್ನು ವಿಧಿಸಿದ್ದರು. ಆ ಷರತ್ತುಗಳಲ್ಲಿ ಇಸ್ರೋ ಕೇಂದ್ರ ಕಚೇರಿಯು ಬೆಂಗಳೂರಿನಲ್ಲೇ ಮುಂದುವರಿಯಬೇಕು ಎನ್ನುವುದು ಕೂಡ ಆಗಿತ್ತು. ಇದು ನಂತರದ ದಿನಗಳಲ್ಲಿ ಈ ಕೇಂದ್ರ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮೈಲುಗಲ್ಲುಗಳಿಗೆ ಪ್ರೇರಣೆಯಾಯಿತು ಎಂದು ಸ್ಮರಿಸಿದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ನಾವು ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಬಾಹ್ಯಾಕಾಶ ವಿಭಾಗದ ಕೇಂದ್ರ ಕಚೇರಿ ಬೆಂಗಳೂರಿನಲ್ಲಿರುವುದು ಎಂಬುದು ಬಹುತೇಕ ವಿಜ್ಞಾನಿಗಳ ಅಭಿಪ್ರಾಯ. ಇಂದು ದೇಶ ಎದುರಿಸುತ್ತಿರುವ ಹಲವು ಗಂಭೀರ ಸಮಸ್ಯೆಗಳಿಗೆ ಬಾಹ್ಯಾಕಾಶ ತಂತ್ರಜ್ಞಾನ ಪರಿಹಾರ ಕಲ್ಪಿಸುತ್ತಿದೆ. ಪ್ರಸ್ತುತ ಬಾಹ್ಯಾಕಾಶದಲ್ಲಿ ಭಾರತದ ಸಾಧನೆ ನೋಡಿದರೆ ಪ್ರೊ.ಧವನ್ ಅವರಿಗೆ ನಿಜವಾಗಿಯೂ ಖುಷಿಯಾಗುತ್ತಿತ್ತು ಎಂದು ಹೇಳಿದರು.
ಪಿಎಸ್‌ಎಲ್‌ವಿ ವಿಫಲಗೊಂಡಾಗ ಪ್ರೊ.ಧವನ್ ಸ್ವತಃ ಮಾಧ್ಯಮಗಳ ಮುಂದೆ ಹೋಗಿ ಅದರ ಹೊಣೆ ಹೊತ್ತಿದ್ದರು. ಇದು ನಾಯಕತ್ವದ ಗುಣ. ಮುಂದೆ ಯಶಸ್ಸು ಸಾಧಿಸಿದಾಗ ಡಾ.ಅಬ್ದುಲ್ ಕಲಾಂ, ಆ ಯಶಸ್ಸಿನ ರೂವಾರಿ ಪ್ರೊ. ಧವನ್ ಎಂದರು. ಇದು ಇಸ್ರೋ ಸಂಸ್ಕೃತಿಗೆ ಒಂದು ಉದಾಹರಣೆ ಎಂದು ಕಿರಣ್ ಕುಮಾರ್ ತಿಳಿಸಿದರು.
ಸತೀಶ್ ಧವನ್ ಅವರ ಪುತ್ರಿ ಹಾಗೂ ವಿಜ್ಞಾನಿ ಪ್ರೊ.ಜೋತ್ಸಾಧವನ್ ಮಾತನಾಡಿ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲೇ ಹುಟ್ಟಿಬೆಳೆದ ನನಗೆ ತವರು ಮನೆಗೆ ಬಂದಂತೆ ಭಾಸವಾಗುತ್ತಿದೆ ಎಂದು ಮೆಲುಕುಹಾಕಿದರು. ನನ್ನ ತಂದೆ ಕೇವಲ ದ್ವಿತೀಯ ದರ್ಜೆಯಲ್ಲಿ ಬಿಎ ಪಾಸಾಗಿದ್ದರು.
ನಂತರ ಅವರು ತಮ್ಮದೇ ಆದ ಹಾದಿಯಲ್ಲಿ ಮಹಾ ಸಾಧನೆ ಮಾಡಿದರು. ಇದಕ್ಕೆ ಅವಕಾಶಗಳೂ ಸಿಕ್ಕವು. ಆಗಷ್ಟೇ ಸ್ವತಂತ್ರಗೊಂಡ ರಾಷ್ಟ್ರಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಭಿನ್ನ ಹಾದಿಯಿಂದ ಇದು ಅವರಿಗೆ ಸಾಧ್ಯವಾಯಿತು ಎಂದರು. ಪದ್ಮವಿಭೂಷಣ ಪ್ರೊ.ರೊದ್ದಂ ನರಸಿಂಹ, ಪದಾಧಿಕಾರಿ ಅನುರಾಗ್‌ಕುಮಾರ್ ಉಪಸ್ಥಿತರಿದ್ದರು.