ನವದೆಹಲಿ: ರಾಜಕೀಯದಲ್ಲಿ ತನ್ನ ಅದೃಷ್ಟ ಪರೀಕ್ಷೆಗೆ ಇಳಿದಿರುವ ಮಾಜೀ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ನರೇಂದ್ರ ಮೋದಿ ಅವರ ಕೆಲಸಗಳಿಂದ ಪ್ರಭಾವಿತರಾಗಿ ಮಾರ್ಚ್ 22ರಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಇದೀಗ ಗಂಭೀರ್ ಅವರು ಪೂರ್ವ ದೆಹಲಿ ಲೋಕಸಭಾ ಕ್ಷೇತ್ರದಿಂದ ಕೇಸರಿ ಪಕ್ಷದ ಹುರಿಯಾಳಾಗಿ ಕಣಕ್ಕಿಳಿದಿದ್ದಾರೆ.
ರಾಜಕೀಯ ರಂಗಕ್ಕೆ ಕಾಲಿಟ್ಟ ತಕ್ಷಣವೇ ಗಂಭೀರ್‌ಅವರಿಗೆ ‘ಗೂಗ್ಲಿ’ಯೊಂದು ಎದುರಾಗಿದೆ. ಗಂಭೀರ್ ಎರಡು ಕಡೆಗಳಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ ಮತ್ತು ಅವರ ಬಳಿ ಎರಡೆರಡು ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಇದೆ ಎಂದು ಆಮ್ ಆದ್ಮಿ ಪಕ್ಷವು ಆರೋಪ ಮಾಡಿತ್ತು.
ಇಷ್ಟು ಮಾತ್ರವಲ್ಲದೇ ಈ ಕ್ಷೇತ್ರದಲ್ಲಿ ಗಂಭೀರ್ ಅವರ ಎದುರಾಳಿ ಆಪ್ ಪಕ್ಷದ ಅತಿಶಿ ಮಾರ್ಲೆನ್ ಅವರು ಗುರುವಾರದಂದು ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣವೊಂದನ್ನೂ ಸಹ ದಾಖಲಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಗೌತಮ್ ಗಂಭೀರ್ ಅವರು ತಮ್ಮ ಪ್ರತಿಸ್ಪರ್ಧಿ ಹಾಗೂ ಆಮ್ ಆದ್ಮಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
‘ನಿಮಗೊಂದು ಸ್ಪಷ್ಟ ದೂರದರ್ಶಿತ್ವ ಇಲ್ಲದೇ ಇದ್ದಾಗ ಹಾಗೂ ಕಳೆದ ನಾಲ್ಕೂವರೆ ವರ್ಷಗಳಲ್ಲಿ ದೆಹಲಿಯ ಜನರಿಗಾಗಿ ನೀವು ಏನೂ ಮಾಡದೇ ಇದ್ದಾಗ ನೀವು ಇಂತಹ ಆರೋಪಗಳನ್ನು ಮಾಡುತ್ತಾ ಎದುರಾಳಿಯನ್ನ ಮಣಿಸುವ ಕೆಲಸ ಮಾಡುತ್ತೀರಿ. ದೂರದರ್ಶಿ ಗುಣವಿದ್ದವರೂ ಯಾರೂ ಈ ರೀತಿಯ ನಕಾರಾತ್ಮಕ ರಾಜಕಾರಣ ಮಾಡುವುದಿಲ್ಲ’ ಎಂದು ಗೌತಮ್ ಗಂಭೀರ್ ಅವರು ತಿರುಗೇಟು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಸೂಕ್ತ ನಿರ್ಧಾರ ತೆಗೆದುಕೊಳ್ಳಲಿ ಎಂದೂ ಸಹ ಈ ಮಾಜೀ ಕ್ರಿಕೆಟಿಗ ಅಭಿಪ್ರಾಯಪಟ್ಟಿದ್ದಾರೆ.
ಪೂರ್ವ ದೆಹಲಿಯ ಲೋಕಸಮರ ಇದೀಗ ತಾರಕಕ್ಕೇರಿದ್ದು ಗಂಭೀರ್ ಮತ್ತು ಮಾರ್ಲೆನ್ ಅವರು ಪ್ರಚಾರ ಸಭೆಗಳನ್ನು ನಡೆಸುತ್ತಾ ಮತದಾರರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದಾರೆ. ಗಂಭೀರ್ ಅವರಿಗೆ ನರೇಂದ್ರ ಮೋದಿ ಅವರ ಸಾಧನೆಯ ಆಶೀರ್ವಾದವಿದ್ದರೆ ಮಾರ್ಲೆನ್ ಅವರು ತಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಸರಕಾರದ ಸಾಧನೆಯ ಆಧಾರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಿಂದ ಮಾಜೀ ಶಿಕ್ಷಣ ಸಚಿವ ಅರ್ವಿಂದರ್ ಸಿಂಗ್ ಲವ್ಲಿ ಸಹ ಸ್ಪರ್ಧಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಿಗೆ ಮೇ 12ರಂದು ಆರನೇ ಹಂತದಲ್ಲಿ ಮತದಾನ ನಡೆಯಲಿದೆ.