Advertisement
ಇದು ನಗರದ ಕಬ್ಬನ್ ಪಾರ್ಕ್‌ನ ಚಿತ್ರಣ. ತೋಟಗಾರಿಕೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಸಾರ್ವಜನಿಕರ ಅಸಹಕಾರದಿಂದ ಉದ್ಯಾನ ತನ್ನ ಸಹಜ ಸೌಂದರ್ಯ ಕಳೆದುಕೊಂಡಿದೆ. ಮೂಲ ಸೌಕರ್ಯ ಕೊರತೆ, ಅನೈರ್ಮಲ್ಯ, ಅಭದ್ರತೆ ಹೆಚ್ಚಾಗಿದೆ. ಈ ಕುರಿತು ನಡಿಗೆದಾರರ ಸಂಘ, ಪರಿಸರ ಪ್ರೇಮಿಗಳು ಹಲವು ಬಾರಿ ಮನವಿ ಮಾಡಿದ್ದರೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
Related Articles
Advertisement
ಉದ್ಯಾನದಲ್ಲಿ ಅಭದ್ರತೆ: ಕಬ್ಬನ್ ಪಾರ್ಕ್ ಭದ್ರತೆಗೆ 24 ಮಂದಿ ಗುತ್ತಿಗೆ ಸಿಬ್ಬಂದಿ 100ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳಿವೆ. ಆದರೂ, ಭದ್ರತೆ ಸಮಸ್ಯೆ ಇದೆ. ಉದ್ಯಾನಕ್ಕೆ ಉಚಿತ ಪ್ರವೇಶವಿರುವ ಕಾರಣ ಅಕ್ಕಪಕ್ಕದ ಕಾಲೇಜುಗಳ ವಿದ್ಯಾರ್ಥಿಗಳು ಬೆಳಗ್ಗೆಯಿಂದ ಸಂಜೆವರೆಗೆ ಅಲ್ಲೇ ಕಾಲ ಕಳೆಯುತ್ತಾರೆ.
ಜತೆಗೆ ಕಿಡಿಗೇಡಿಗಳ ಕಾಟದಿಂದ ಮಹಿಳೆ, ಮಕ್ಕಳು ಮುಜುಗರಕ್ಕೊಳಗಾಗುತ್ತಾರೆ. ಪ್ರವಾಸಿಗರ ತರುವ ಅಳಿದುಳಿದ ತಿಂಡಿ ತಿನಿಸು, ಪ್ಲಾಸ್ಟಿಕ್ ಕವರ್‌ಗಳು ಹುಲ್ಲು ಹಾಸಿನ ಮೇಲೆ ಬಿದ್ದಿರುತ್ತವೆ. ಆಹಾರ ಅರಸಿ ಬರುವ ಶ್ವಾನಗಳ ಹಿಂಡು ಪಾರ್ಕ್‌ನಲ್ಲೇ ಠಿಕಾಣಿ ಹೂಡುತ್ತದೆ. ಇದ್ಯಾವುದರ ಬಗ್ಗೆಯೂ ಭದ್ರತಾ ಸಿಬ್ಬಂದಿ ಗಮನಹರಿಸುವುದಿಲ್ಲ.
ವಾಹನ ಓಡಾಟವೇ ಸಂಚಕಾರ: ವಾಹನಗಳ ಸಂಚಾರ, ಉದ್ಯಾನದ ಪರಿಸರಕ್ಕೆ ಸಂಚಕಾರ ತರುತ್ತಿದೆ. ಬಾಲಭವನದ ಸುತ್ತ, ವೆಂಕಟಪ್ಪ ಆರ್ಟ್ ಗ್ಯಾಲರಿ ಹಿಂಭಾಗ, ಸೆಂಟ್ರಲ್ ಲೈಬ್ರರಿ ಸಮೀಪದ ಸ್ಥಳ ಖಾಸಗಿ ವಾಹನಗಳ ತಾಣವಾಗಿದೆ. ಉದ್ಯಾನದ ಹಲವೆಡೆ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆಗೆ ಮಾಡುವುದು ಸಮಸ್ಯೆ ಹೆಚ್ಚಿಸಿದೆ. ಅಲ್ಲದೆ, ಪಾರ್ಕಿಂಗ್ ತಾಣದಲ್ಲಿ ಚೀಟಿ ನೀಡದೆ ಹಣ ಪಡೆಯುತ್ತಾರೆ ಎಂದು ಪ್ರವಾಸಿಗರು ಆರೋಪಿಸುತ್ತಾರೆ.
ಶೌಚಾಲಯಗಳ ಕೊರತೆ: ಪ್ರವಾಸಿಗರು, ವಾಯು ವಿಹಾರಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭೇಟಿ ನೀಡುವ ಕಬ್ಬನ್ ಪಾರ್ಕ್‌ನಲ್ಲಿ ಪ್ರಮುಖವಾಗಿ ಕಾಡುವ ಸಮಸ್ಯೆ ಶೌಚಾಲಯದ್ದು. ಬಾಲಭವನ ಮತ್ತು ವಿಧಾನಸೌಧದ ಕಡೆ ಎರಡು ಮೂಲೆಗಳಲ್ಲಿ ಮಾತ್ರ ಶೌಚಾಲಯಗಳಿವೆ. ಉದ್ಯಾನ ವಿಶಾಲವಾಗಿದ್ದರೂ ಒಳಭಾಗದಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಅನೈರ್ಮಲ್ಯಕ್ಕೆ ಕಾರಣವಾಗಿದೆ.
ಕುಡಿಯಲು ನೀರಿಲ್ಲ: ಪಾರ್ಕ್ ವೀಕ್ಷಣೆಗೆ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಇವರೊಂದಿಗೆ ಮಧ್ಯಾಹ್ನವಾದರೆ ಸ್ಥಳೀಯರು ಉದ್ಯಾನ ಒಳಗೆ ಕುಳಿತು ಊಟ ಮಾಡುತ್ತಾರೆ. ಇವರಿಗೆ ಸ್ವತ್ಛತೆ ಅರಿವು ಮೂಡಿಸುವ ಫಲಕಗಳ ಅವಶ್ಯಕತೆ ಇದೆ. ಇನ್ನು ಪ್ರವಾಸಿಗರು ಕುಡಿಯುವ ನೀರಿಗೆ ಪರದಾಡುವ ಸ್ಥಿತಿಯಿದೆ. ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು ಎಂಬುದು ಪ್ರವಾಸಿಗರ ಪ್ರಮುಖ ಬೇಡಿಕೆ.
ಮೊದಲು ಉದ್ಯಾನದ ಸಮಸ್ಯೆಗಳನ್ನು ಪರಿಶೀಲಿಸಿ, ಬಳಿಕ ಅವುಗಳ ಪರಿಹಾರಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲಾಗುವುದು. -ಕುಸುಮ, ಕಬ್ಬನ್ ಉದ್ಯಾನದ ಉಪ ನಿರ್ದೇಶಕರು * ಪುಷ್ಪಲತಾ ಜೆ.