Advertisement

ಡ್ರಗ್ಸ್‌ ದಂಧೆಯಲ್ಲಿ ಯಾರನ್ನೂ ಬಚಾವ್‌ ಮಾಡುವುದು ಬೇಡ

12:36 AM Oct 04, 2021 | Team Udayavani |

ಒಂದಷ್ಟು ದಿನಗಳ ಕಾಲ ಸದ್ದು ಕಳೆದುಕೊಂಡಿದ್ದ ಬಾಲಿವುಡ್‌ ಮಂದಿಯ ಡ್ರಗ್ಸ್‌ ಸೇವನೆ ಪ್ರಕರಣಕ್ಕೆ ಮತ್ತೆ ಜೀವ ಬಂದಿದ್ದು, ಸ್ವತಃ ಕಿಂಗ್‌ ಖಾನ್‌ ಎಂದೇ ಖ್ಯಾತರಾಗಿರುವ ನಟ ಶಾರೂಖ್‌ ಖಾನ್‌ ಅವರ ಪುತ್ರ ಇದರಲ್ಲಿ ಭಾಗಿಯಾಗಿರುವುದು ಸಾಬೀತಾಗಿದೆ. ಈಗಾಗಲೇ ಶಾರೂಖ್‌ ಪುತ್ರ ಆರ್ಯನ್‌ ಖಾನ್‌ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಇದು ಹೈಪ್ರೊಫೈಲ್‌ ಕೇಸ್‌ ಆಗಿರುವುದರಿಂದ ತನಿಖೆಯ ದಿಕ್ಕು ತಪ್ಪಬಹುದು ಎಂಬ ಆತಂಕವೂ ಜನರಲ್ಲಿ ಸುಳಿದಿದೆ.

Advertisement

ಬಾಲಿವುಡ್‌, ಸ್ಯಾಂಡಲ್‌ವುಡ್‌ ಅಥವಾ ಇತರ ರಾಜ್ಯಗಳ ಸಿನೆಮಾ ರಂಗ ಡ್ರಗ್ಸ್‌ ದಂಧೆಯಲ್ಲಿ ಸಿಲುಕಿರುವುದು ಹೊಸದೇನಲ್ಲ. ಈ ಹಿಂದೆ ಉದಯೋನ್ಮುಖ ನಟ ಸುಶಾಂತ್‌ ಸಿಂಗ್‌ ರಾಜಪೂತ್‌ ಅವರ ಆತ್ಮಹತ್ಯೆ ಸಂದರ್ಭದಲ್ಲೇ ಬಾಲಿವುಡ್‌ ಅಂಗಳದಲ್ಲಿ ಡ್ರಗ್ಸ್‌ನ ಕಮಟು ವಾಸನೆ ಕೇಳಿಬಂದಿತ್ತು. ಇದಾದ ಬಳಿಕ ಕೆಲವರನ್ನು ಬಂಧಿಸಿ ವಿಚಾರಣೆಯನ್ನೂ ನಡೆಸಲಾಗಿತ್ತು. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌ ಜಾಲದಲ್ಲಿ ಸಿಲುಕಿದ್ದ ಇಬ್ಬರು ನಟಿಯರನ್ನು ಬಂಧಿಸಿ ಅನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಅತ್ತ ಟಾಲಿವುಡ್‌ನಲ್ಲೂ ಡ್ರಗ್ಸ್‌ ದಂಧೆಯ ವಾಸನೆ ಕೇಳಿಬರುತ್ತಿದೆ. ಕೆಲವರ ವಿಚಾರಣೆಯೂ ಆಗಿದೆ. ಇಷ್ಟೆಲ್ಲ ಪ್ರಕರಣಗಳ ನಡುವೆ, ಎಷ್ಟು ಮಂದಿ ದೊಡ್ಡ ಸ್ಟಾರ್‌ಗಳು ಬಂಧಿತರಾಗಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಸಾರ್ವಜನಿಕ ವಲಯದಲ್ಲಿ ಕೇಳಿರುವ ಮಾತುಗಳೆಂದರೆ, ಈ ಡ್ರಗ್ಸ್‌ ದಂಧೆಯಲ್ಲಿ ಇಲ್ಲಿಯವರೆಗೂ ಕೇವಲ ಸಣ್ಣಪುಟ್ಟವರಷ್ಟೇ ಬಂಧಿತರಾಗಿದ್ದಾರೆ. ದೊಡ್ಡವರು ಆರಾಮವಾಗಿದ್ದಾರೆ ಎಂಬುದು. ಹೀಗಾಗಿ ಎನ್‌ಸಿಬಿ ಅಧಿಕಾರಿಗಳು ಅಥವಾ ಆಯಾ ಸರಕಾರಗಳು ಡ್ರಗ್ಸ್‌ ದಂಧೆಯಲ್ಲಿ ಹೆಸರು ಕೇಳಿಬಂದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಇವರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಬೇಕು. ಈ ಮೂಲಕವಾದರೂ  ನಿಜವಾಗಿಯೂ ಡ್ರಗ್ಸ್‌ ಪೂರೈಕೆ, ಡ್ರಗ್ಸ್‌ ಸೇವನೆಯನ್ನು ತಪ್ಪಿಸುವ ಕೆಲಸವನ್ನು ಮಾಡಬೇಕು.

ಇದನ್ನೂ ಓದಿ:ಯುಎಇಗಿಂತ ಮುನ್ನ ಭಾರತದಲ್ಲಿ ಹೈಪರ್‌ಲೂಪ್‌? ಸುಲ್ತಾನ್‌ ಅಹ್ಮದ್‌ ಸುಳಿವು

Advertisement

ಇನ್ನು ಮುಂಬಯಿಯಲ್ಲಿನ ಶಾರೂಖ್‌ ಪುತ್ರ ಭಾಗಿಯಾಗಿರುವ ಈ ಪ್ರಕರಣ ಅತ್ಯಂತ ದೊಡ್ಡದು. ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾದವರೆಲ್ಲರೂ ಹೈಪ್ರೊಫೈಲ್‌ ಮಂದಿಯೇ. ಹೀಗಾಗಿ ಎನ್‌ಸಿಬಿ ಅಧಿಕಾರಿಗಳಾಗಲಿ, ಪೊಲೀಸರಾಗಲಿ ಯಾವುದೇ ಒತ್ತಡ, ಆಮಿಷಗಳಿಗೆ ಮಣಿಯದೇ ಪ್ರಕರಣದ ಬಗ್ಗೆ ತನಿಖೆ ನಡೆಸಬೇಕು. ಇವರ ಕೈಗೆ ಡ್ರಗ್ಸ್‌ ಬಂದಿದ್ದು ಹೇಗೆ? ಪೂರೈಕೆ ಮಾಡಿದವರು ಯಾರು? ಸೇವನೆ ಮಾಡಿದವರನ್ನೂ ಬಿಡದೆ ಅವರನ್ನು ಕಾನೂನಿನ ಹಿಡಿತಕ್ಕೆ ತರಬೇಕು. ಡ್ರಗ್ಸ್‌ ತೆಗೆದುಕೊಂಡರೆ ಕಠಿನ ಶಿಕ್ಷೆಯಾಗುತ್ತದೆ ಎಂಬುದು ಮನವರಿಕೆಯಾಗಬೇಕು.

ವಿಚಿತ್ರವೆಂದರೆ ಎಲ್ಲೋ ಒಂದು ಕಡೆ, ಜನರ ಪಾಲಿಗೆ ಹೀರೋಗಳು ಎನಿಸಿಕೊಂಡವರೇ ಇಂಥ ಡ್ರಗ್ಸ್‌ ರಾಕೆಟ್‌ನಲ್ಲಿ ಭಾಗಿಯಾಗುವುದು ಸರಿಯಾದುದಲ್ಲ. ದೇಶದಲ್ಲಿ ಮೆಗಾಸ್ಟಾರ್‌ ಎನ್ನಿಸಿಕೊಂಡಿರುವ ಶಾರೂಖ್‌ ಖಾನ್‌ ಪುತ್ರ ಈ ದಂಧೆಯಲ್ಲಿ ಸಿಲುಕಿರುವುದು ಅಷ್ಟೇ ಪರಿಣಾಮಕಾರಿ. ಈ ಕೇಸಿನ ಮೂಲಕ ಜನರಿಗೂ ತಪ್ಪು ಭಾವನೆ ಹೋಗಬಾರದು. ಅಲ್ಲದೆ ದೊಡ್ಡವರೇ ಹೀಗೆ ಎಂಬ ಮಾತಿಗೆ ಸಿಲುಕದಂತೆಯೂ ಸ್ಟಾರ್‌ಗಳು ನಡೆದುಕೊಳ್ಳಬೇಕಾದುದು ಅವರ ಕರ್ತವ್ಯ.

Advertisement

Udayavani is now on Telegram. Click here to join our channel and stay updated with the latest news.

Next