ಹೊಸ ಕನಸುಗಳೊಂದಿಗೆ ಸಿನಿಮಾರಂಗಕ್ಕೆ ಕಾಲಿಡುತ್ತಿರುವ ಪ್ರತಿಭೆಗಳು ನಿರಂತರ. ಆ ಸಾಲಿಗೆ ಈಗ “ಗೋಸಿಗ್ಯಾಂಗ್’ ಕೂಡ ಸೇರಿದೆ. ಚಿತ್ರ ಪೂರ್ಣಗೊಂಡು, ಪ್ರೇಕ್ಷಕರ ಮುಂದೆ ಬರಲು ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಫೆಬ್ರವರಿಯಲ್ಲಿ ಚಿತ್ರ ಬಿಡುಗಡೆಯಾಗಲಿದೆ. ತಮ್ಮ ಸಿನಿಮಾ ಬಗ್ಗೆ ಹೇಳಿಕೊಳ್ಳಲೆಂದೇ ನಿರ್ದೇಶಕ ರಾಜು ದೇವಸಂದ್ರ ಪತ್ರಕರ್ತರ ಮುಂದೆ ಆಗಮಿಸಿದ್ದರು. ಮೊದಲಿಗೆ ಮಾತಿಗಿಳಿದಿದ್ದು ಅವರೇ. “ಇದು ನನ್ನ ನಿರ್ದೇಶನದ ಎರಡನೇ ಚಿತ್ರ. ಒಂದು ಮನರಂಜನೆಯ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲವೂ ಇಲ್ಲಿದೆ. ಒಂದು ಕಾಲೇಜ್ ಹುಡುಗರ ಕಥೆ ಇಲ್ಲಿದೆ. ಮುಗ್ಧ ಹುಡುಗರನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ಳಲಾಗುತ್ತದೆ, ಗೊತ್ತಿಲ್ಲದೆಯೇ ಒಂದು ಡ್ರಗ್ಸ್ ಮಾಫಿಯಾಗೆ ಸಿಲುಕಿ ಒದ್ದಾಡುವ ಹುಡುಗರು, ಕೊನೆಗೆ ಹೇಗೆಲ್ಲಾ ಹೋರಾಡಿ ಅದರಿಂದ ಹೊರಗೆ ಬರುತ್ತಾರೆ ಎಂಬ ಅಂಶ ಇಲ್ಲಿದೆ. ಜೊತೆಗೆ ಗೆಳೆತನ, ಪ್ರೀತಿ, ಎಮೋಷನಲ್ ಇತ್ಯಾದಿ ಚಿತ್ರದ ಹೂರಣ’ ಎನ್ನುವ ನಿರ್ದೇಶಕರು, “ಇಲ್ಲಿ ಬರೀ ಮನರಂಜನೆ ಮಾತ್ರವಲ್ಲ, ನೀತಿ ಪಾಠವೂ ಇದೆ. ಹಾಗಾಗಿ, ಯೂತ್ಸ್ ಅಷ್ಟೇ ಅಲ್ಲ, ಪೋಷಕರು ನೋಡಿ ತಿಳಿದುಕೊಳ್ಳಬೇಕಾದ ಚಿತ್ರ’ ಎಂದರು.
ನಿರ್ಮಾಪಕ ಕೆ.ಶಿವಕುಮಾರ್ ಅವರಿಗೆ ಒಳ್ಳೆಯ ಕಥೆ ಅನಿಸಿದ್ದರಿಂದ ಈ ಚಿತ್ರಕ್ಕೆ ಹಣ ಹಾಕಿದ್ದಾರಂತೆ. “ಕಾಲೇಜ್ ಹುಡುಗರ ಸುತ್ತ ನಡೆಯುವ ಕಥೆಯಲ್ಲಿ ಎಲ್ಲವೂ ಇದೆ. ಆ್ಯಕ್ಷನ್, ಲವ್, ಸೆಂಟಿಮೆಂಟ್ ಜೊತೆಗೆ ತಿಳಿದುಕೊಳ್ಳಬೇಕಾದ ಸಾಕಷ್ಟು ಸಾರ ಒಳಗೊಂಡಿದೆ. ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ಇದೆ’ ಎಂಬುದು ನಿರ್ಮಾಪಕರ ಮಾತು.
ಚಿತ್ರದಲ್ಲಿ ಅಜೇಯ್ ಕಾರ್ತಿಕ್ ನಾಯಕರಾಗಿದ್ದಾರೆ. ಅವರಿಗೆ ಇದು ಮೊದಲ ಚಿತ್ರ. ಅವರೊಂದಿಗೆ ಯತಿರಾಜ್ ಜಗ್ಗೇಶ್ ಕೂಡ ನಟಿಸಿದ್ದಾರೆ. ಇದೊಂದು ಹಾಸ್ಯದ ಮೂಲಕವೇ ಸಾಗುವ ಚಿತ್ರವಾದರೂ, ಕಾಲೇಜ್ ಹುಡುಗರು ಒಂದು ಮಾಫಿಯಾಗೆ ಸಿಲುಕಿ ಹೇಗೆ ಸಮಸ್ಯೆ ಎದುರಿಸುತ್ತಾರೆ ಎಂಬ ಅಂಶ ಇಲ್ಲಿದೆ. ಮುಗ್ಧರನ್ನು ಕೆಲವರು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ತೋರಿಸಲಾಗಿದೆ. ಒಳ್ಳೆಯ ಕಥೆ, ಚಿತ್ರಕಥೆ ಜೊತೆಗೆ ತಾಂತ್ರಿಕವಾಗಿಯೂ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಸಿನಿಮಾ ಎಲ್ಲರಿಗೂ ಗೆಲುವು ಕೊಡುತ್ತೆ ಎಂಬ ನಂಬಿಕೆ ನನ್ನದು’ ಎನ್ನುತ್ತಾರೆ ಅಜೇಯ್ ಕಾರ್ತಿಕ್.
ನಾಯಕಿ ಸೋನು ಪಾಟೀಲ್ ಅಂದು ಮೈಕ್ ಎತ್ತಿಕೊಂಡಿದ್ದೇ ತಡ, ನಾನ್‌ಸ್ಟಾಪ್ ಮಾತುದುರಿಸಿದರು. “ಹಳ್ಳಿಯಿಂದ ಬಂದ ಹುಡುಗರು ಡ್ರಗ್ಸ್ ಏನೆಂಬುದು ಗೊತ್ತಿರಲ್ಲ. ಅಂತಹ ಹುಡುಗರು ಆ ಮಾಫಿಯಾಗೆ ಸಿಲುಕಿದಾಗ, ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶದೊಂದಿಗೆ ಇಡೀ ಚಿತ್ರ ಕುತೂಹಲವಾಗಿ ಸಾಗುತ್ತದೆ. ಇಲ್ಲಿ ಗೆಳೆತನಕ್ಕೆ ಅರ್ಥವಿದೆ. ಪ್ರೀತಿಯ ಸೆಳೆತವೂ ಇದೆ. ಮುಗ್ಧ ಜೀವಗಳ ನಡುವಿನ ತೊಳಲಾಟ ಸಿನಿಮಾದ ಹೈಲೈಟ್’ ಅಂದರು ಸೋನುಪಾಟೀಲ್.
ಮೋನಿಕಾ ಕೂಡ ಚಿತ್ರದಲ್ಲಿ ನಟಿಸಿದ್ದು, ತಮ್ಮ ಪಾತ್ರ, ಅನುಭವ ಹಂಚಿಕೊಂಡರು. ಅವರೊಂದಿಗೆ ಅನುಷಾ ರೈ ಕೂಡ “ಇದು ನನ್ನ ನಾಲ್ಕನೇ ಚಿತ್ರ. ಪಕ್ಕಾ ಯೂಥ್ ಚಿತ್ರವಿದು’ ಚಿತ್ರಕ್ಕೆ “ಯು/ಎ’ಪ್ರಮಾಣ ಪತ್ರ ಸಿಕ್ಕಿದ್ದು, ಎಲ್ಲರೂ ಪ್ರೋತ್ಸಾಹಿಸಿ’ ಎಂದಷ್ಟೇ ಹೇಳಿದರು. ಅನಿರುದ್ಧ ಇತರರು ವೇದಿಕೆಯಲ್ಲಿದ್ದು ಮಾತನಾಡಿದರು.
ವಿಜಯ್ ಭರಮಸಾಗರ