ಬೆಂಗಳೂರು: ಮಾದಕ ವಸ್ತು ಮಾರಾಟ, ಇ-ಸಿಗರೇಟ್ ಸಂಗ್ರಹದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಯಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೇರಳದಿಂದ ಗಾಂಜಾ ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ನ್ಪೋರ್ಟ್ಸ್ ಕ್ಲಬ್ ವೊಂದರ ಸ್ವಿಮ್ಮಿಂಗ್ ಕೋಚ್ ರಿಜ್ವಾನ್ ರಜಾಕ್(26) ಎಂಬಾತನನ್ನು ಬಂಧಿಸಲಾಗಿದ್ದು, ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 5.5 ಕೆ.ಜಿ. ಗಾಂಜಾ ಮತ್ತು 1 ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಈ ಸಂಬಂಧ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇರಳದಿಂದ 8 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿ ಬೇಗೂರಿನಲ್ಲಿ ವಾಸವಾಗಿದ್ದಾನೆ. ಕೆ.ಆರ್.ಪುರದಲ್ಲಿರುವ ಸ್ಫೋರ್ಟ್ಸ್ ಕ್ಲಬ್‌ವೊಂದರಲ್ಲಿ ಸ್ವಿಮ್ಮಿಂಗ್ ಕೋಚ್ ಆಗಿ ಕೆಲಸ ಮಾಡುತ್ತಿದ್ದ. ಇದರೊಂದಿಗೆ ಐಷಾರಾಮಿ ಜೀವನ ನಡೆಸುವ ಉದ್ದೇಶದಿಂದ ಕೇರಳ ಹಾಗೂ ನಗರದಲ್ಲಿರುವ ಕೇರಳ ಮೂಲದ ಡ್ರಗ್ಸ್ ಪೆಡ್ಲರ್‌ಗಳಿಂದ ಗಾಂಜಾ ಖರೀದಿಸುತ್ತಿದ್ದ. ಬಳಿಕ ನಿರ್ದಿಷ್ಟ ಗ್ರಾಹಕರು, ವಿದ್ಯಾರ್ಥಿಗಳು, ಟೆಕಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಈ ಮಾಹಿತಿ ಮೇರೆಗೆ ಆರೋಪಿ ಮೇಲೆ ದಾಳಿ ನಡೆಸಿ ಮಾಲು ಸಮೇತ ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು.
ಇ-ಸಿಗರೇಟ್ ಮಾರಾಟಗಾರ ಬಂಧನ: ಮತ್ತೂಂದು ಪ್ರಕರಣದಲ್ಲಿ ನಿಷೇಧಿತ ಇ-ಸಿಗರೇಟ್, ವಿದೇಶಿ ಸಿಗರೇಟ್‌ಗಳು ಹಾಗೂ ವಿವಿಧ ಬಗೆಯ ಹುಕ್ಕಾ ಫ್ಲೇವರ್‌ಗಳನ್ನು ಸಂಗ್ರಹ ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಾಗಲಗುಂಟೆ ನಿವಾಸಿ ಸಲ್ಮಾನ್(22) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 22.35 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 291 ಇ-ಸಿಗರೇಟ್, 240 ವಿದೇಶಿ ಸಿಗರೇಟ್ ಪ್ಯಾಕ್ ಗಳು, 360 ವಿವಿಧ ಬಗೆಯ ಹುಕ್ಕಾ ಫ್ಲೇವರ್‌ಗಳು ಮತ್ತು 100 ಹುಕ್ಕಾ ಪಾಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಬಾಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಇ-ಸಿಗರೇಟ್, ಹುಕ್ಕಾ ಫ್ಲೇವರ್‌ಗಳ ದಾಸ್ತಾನು ಮಾಹಿತಿ ಮೇರೆಗೆ ಬಾಗಲಗುಂಟೆಯಲ್ಲಿರುವ ಬಾಡಿಗೆ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿಚಾರಣೆಯಲ್ಲಿ ಈ ಅಕ್ರಮ ದಾಸ್ತಾನ ಮಾಡಿದ ಇಬ್ಬರು ಮಾಲೀಕರು ಹಾಗೂ ಮತ್ತೂಬ್ಬ ಕೆಲಸಗಾರನ ಹೆಸರು ಬಾಯಿಬಿಟ್ಟಿದ್ದಾನೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.
ಅಕ್ರಮವಾಗಿ ನೆಲೆಸಿದ್ದ ನೈಜಿರಿಯಾ ಪ್ರಜೆ ಬಂಧನ: ನಗರದಲ್ಲಿ ಅಕ್ರಮವಾಗಿ ವಾಸವಾಗಿದ್ದ ನೈಜಿರಿಯಾ ಪ್ರಜೆ ಫಿಡಲಿಪ್ ಕ್ಯಾಲಿಬ್ (28) ಎಂಬಾತನ್ನು ಬಂಧಿಸಲಾಗಿದ್ದು, ಆರೋಪಿಯನ್ನು ಸೊಂಡೆಕೊಪ್ಪದಲ್ಲಿರುವ ವಿದೇಶಿಗರ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿ 2014ರಲ್ಲಿ ವಿದ್ಯಾರ್ಥಿ ವೀಸಾ ಪಡೆದು ಬೆಂಗಳೂರಿಗೆ ಬಂದಿದ್ದು, ಮಂಗಳೂರಿನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತಿದ್ದ. 2023ರಲ್ಲಿ ಈತನ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ. ನವೀಕರಣ ಮಾಡಿಕೊಳ್ಳದೆ ಅಕ್ರಮವಾಗಿ ವಾಸವಾಗಿದ್ದ. ಈ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ ಹೇಳಿದರು.