ದಾವಣಗೆರೆ: ಹಳೆಯ ದ್ವೇಷದಿಂದ ಗೆಳೆಯನನ್ನ ಕೊಲೆ ಮಾಡಿದ್ದ ಆರೋಪಿಗೆ ದಾವಣಗೆರೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ದಾವಣಗೆರೆಯ ಶ್ರೀರಾಮನಗರದ ಆರ್. ಪ್ರತಾಪ್ ಅಲಿಯಾಸ್ ಗುಂಡ ಶಿಕ್ಷೆಗೆ ಒಳಗಾದ ಆರೋಪಿ.
ದಾವಣಗೆರೆಯ ಇಂಡಸ್ಟ್ರಿಯಲ್ ಏರಿಯಾದ ಖಾತುಂಬಿ ಎಂಬುವರು ಮಕ್ಕಳಿಲ್ಲದ ಕಾರಣಕ್ಕೆ ಅರುಣ ಎಂಬ ಅನಾಥನನ್ನು ಸಾಕಿಕೊಂಡಿದ್ದರು. ಆಟೋರಿಕ್ಷಾ ಚಾಲನೆ ಕೆಲಸ ಮಾಡುತ್ತಿದ್ದ ಅರುಣ ಮತ್ತು ಗೆಳೆಯ ಪ್ರತಾಪ್ ನಡುವೆ ಹಳೆಯ ದ್ವೇಷ ಇತ್ತು. ಇದೇ ಕಾರಣದಿಂದ 2019ರ ಜೂ. 1 ರಂದು ಜಯದೇವ ವೃತ್ತದ ಬಳಿ ಬಾರ್ ಮುಂದೆ ವಾಗ್ವಾದ ನಡೆದ ಸಂದರ್ಭದಲ್ಲಿ ಪ್ರತಾಪ್ ಚಾಕುವಿನಿಂದ ಅರುಣನ ಕುತ್ತಿಗೆಗೆ ಇರಿದಿದ್ದ ಗಂಭೀರ ಗಾಯಗೊಂಡಿದ್ದ ಅರುಣನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅರುಣ ಮೃತಪಟ್ಟಿದ್ದ.
ಪ್ರಕರಣ ದಾಖಲಿಸಿಕೊಂಡಿದ್ದ ಕೆಟಿಜೆ ನಗರ ಪೊಲೀಸರು ಪ್ರತಾಪ್ನನ್ನು ಬಂಧಿಸಿದ್ದರು. ತನಿಖಾಧಿಕಾರಿ ತಿಮ್ಮಣ್ಣ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ಎನ್. ಪ್ರವೀಣ್ಕುಮಾರ್ ಆರೋಪಿ ಪ್ರತಾಪ್ಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಸರ್ಕಾರದ ಪರ ಕೆ.ಜಿ. ಜಯ್ಯಪ್ಪ ವಾದ ಮಂಡಿಸಿದ್ದರು.
ಇದನ್ನೂ ಓದಿ: Belthangady: ಸ್ನಾನಕ್ಕಾಗಿ ನದಿಗೆ ತೆರಳಿದ್ದ ಮೂವರು ಯುವಕರು ನೀರುಪಾಲು!