ಬೆಳ್ತಂಗಡಿ: ಮನುಷ್ಯನ ಸಮಗ್ರ ಪ್ರಾರ್ಥನೆಯೇ ಆರೋಗ್ಯ ಹಾಗೂ ಜೀವನದ ಕಾಳಜಿಯಾಗಿದೆ. ಒತ್ತಡದ ಜೀವನ ಕ್ರಮದಿಂದ ಇಂದ್ರಿಯಗಳನ್ನು ನಿಗ್ರಹಿಸದೆ ಇರುವುದು ಅಶಾಂತಿಗೆ ಕಾರಣ. ಹೀಗಾಗಿ ವ್ಯಕ್ತಿಯ ಉದ್ಯೋಗ, ವೃತ್ತಿ, ಕಾಯಿಲೆಗೆ ಅನುಗುಣವಾಗಿ ಔಷಧ ರಹಿತ ಚಿಕಿತ್ಸೆ ಒದಗಿಸುವುದೇ ಪ್ರಕೃತಿ ಚಿಕಿತ್ಸೆಯ ಉದ್ದೇಶ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಶಾಂತಿವನ ಟ್ರಸ್ಟ್ ಅಧ್ಯಕ್ಷರಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಶಾಂತಿವನದಲ್ಲಿ ಸೋಮವಾರ ವಿಶೇಷ ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಾಂತಿವನ ಟ್ರಸ್ಟ್‌ನ ಟ್ರಸ್ಟಿ ಹೇಮಾವತಿ ವೀ. ಹೆಗ್ಗಡೆ ಮಾತನಾಡಿ, ಮನುಷ್ಯನ ಶಾರೀರಿಕ ಚೈತನ್ಯವೇ ಆತ್ಮ. ಸಾವಿರ ಚಿಂತನೆಗಳ ನಡುವೆ ನಾವು ಚೈತನ್ಯ ಮರೆತಲ್ಲಿ ದೇಹ ಮೌನಕ್ಕೆ ಶರಣಾಗುತ್ತದೆ. ಹಾಗಾಗಿ ದೇಹ ನಿರಂತರ ಚೈತನ್ಯದಿಂದ ಕೂಡಿರಲು ಯೋಗ, ಸತ್ಸಂಗ ಚಿಕಿತ್ಸೆಯನ್ನೊಳಗೊಂಡ ಪ್ರಕೃತಿ ಚಿಕಿತ್ಸೆ ಮಹತ್ವ ಪಡೆದಿದೆ ಎಂದು ಹೇಳಿದರು.
ಇದನ್ನೂ ಓದಿ:ಹಣಕಾಸಿನ ಒಳಗೊಳ್ಳುವಿಕೆ : ಚೀನಾವನ್ನೇ ಹಿಂದಿಕ್ಕಿದ ಭಾರತ
ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಡಿತ್ತಾಯ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ನಿರ್ದೇಶಕ ಡಾ| ಐ. ಶಶಿಕಾಂತ ಜೈನ್, ಆಡಳಿತಾಧಿಕಾರಿ ಜಗನ್ನಾಥ್, ನ್ಯಾಚುರೋಪತಿ ಕಾಲೇಜಿನ ಡೀನ್‌ಗಳಾದ ಡಾ| ಸುಜಾತಾ, ಡಾ| ಗೀತಾ ಶೆಟ್ಟಿ ಉಪಸ್ಥಿತರಿದ್ದರು.
ಎಸ್‌ಡಿಎಂ ಯೋಗ ವಿಜ್ಞಾನ ಮತ್ತು ಪ್ರಕೃತಿ ಚಿಕಿತ್ಸಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಯೋಗ ಡೀನ್ ಡಾ| ಶಿವಪ್ರಸಾದ್ ಶೆಟ್ಟಿ ವಂದಿಸಿದರು.