Advertisement
ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.ಪ್ರಮಾಣ ಸ್ವೀಕಾರಕ್ಕಾಗಿ ಎಲ್ಲ ಸಿದ್ಧತೆಗಳೂ ಆರಂಭವಾಗಿದ್ದು, ಅಂದು ಕೆಲವು ಸರಕಾರಿ ಕಚೇರಿಗಳನ್ನು ಭಾಗಶಃ ಬಂದ್ ಮಾಡುವಂತೆ ಕೇಂದ್ರ ಸಿಬಂದಿ ಸಚಿವಾಲಯ ಶುಕ್ರವಾರ ಆದೇಶ ಹೊರಡಿಸಿದೆ.
Related Articles
Advertisement
ಒಡಿಶಾ ಸಿಎಂ ನವೀನ್ ಪಾಟ್ನಾಯಕ್ ಅವರೂ ಮುರ್ಮು ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ.
ರಾಜ್ಯಸಭೆ ಅವಧಿ ಬದಲು: ಸಾಮಾನ್ಯವಾಗಿ ರಾಜ್ಯಸಭಾ ಕಲಾಪವು ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತದೆ. ಆದರೆ, ಮುರ್ಮು ಅವರ ಪ್ರಮಾಣ ವಚನ ಹಿನ್ನೆಲೆಯಲ್ಲಿ ಜು. 25ರಂದು ಕಲಾಪವು ಮಧ್ಯಾಹ್ನ 2 ಗಂಟೆಯಿಂದ ಆರಂಭಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ರಾಜ್‌ಭರ್‌ಗೆ ಭದ್ರತೆ ಹೆಚ್ಚಳ: ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ ಬೆನ್ನಲ್ಲೇ ಉತ್ತರಪ್ರದೇಶದ ಸುಹೇಲ್‌ದೇವ್ ಭಾರತೀಯ ಸಮಾಜ್ ಪಾರ್ಟಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಅವರಿಗೆ ರಾಜ್ಯ ಸರಕಾರ “ವೈ’ ಕೆಟಗರಿ ಭದ್ರತೆ ಒದಗಿಸಿದೆ. ಅಲ್ಲದೇ, ಉ.ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಮುರ್ಮು ಅವರ ಗೌರವಾರ್ಥ ಆಯೋಜಿಸಿದ್ದ ಔತಣಕೂಟ ದಲ್ಲೂ ರಾಜ್‌ಭರ್ ಭಾಗಿಯಾಗಿದ್ದಾರೆ.
ರಾಜ್‌ಭರ್ ಅವರ ಎಸ್‌ಬಿಎಸ್‌ಪಿ ಈ ಹಿಂದೆ ಸಮಾಜವಾದಿ ಪಕ್ಷದ ಮಿತ್ರಪಕ್ಷವಾಗಿತ್ತು. ಅನಂತರದಲ್ಲಿ ಎರಡೂ ಪಕ್ಷಗಳ ನಡುವೆ ಅಸಮಾಧಾನ ಹೊಗೆಯಾಡಿತ್ತು.
ಆಕ್ಷೇಪಾರ್ಹ ಪೋಸ್ಟ್: ಉದ್ಯೋಗಿ ವಜಾ: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದಕ್ಕಾಗಿ ಖಾಸಗಿ ಮಾಧ್ಯಮವೊಂದು ತನ್ನ ಕಂಪನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ ಇಂದ್ರಾಣಿ ಚಟರ್ಜಿ ಎಂಬ ವ್ಯಕ್ತಿಯನ್ನು ಆ ಹುದ್ದೆಯಿಂದ ವಜಾಗೊಳಿಸಿದೆ.
“ಫೇಸ್‌ಬುಕ್‌ನಲ್ಲಿ ಅವರು ಮಾಡಿದ ಪೋಸ್ಟ್ ಭಾರೀ ವೈರಲ್ ಆಗಿತ್ತು. ಆ ಪೋಸ್ಟ್ ತಮ್ಮ ಗಮನಕ್ಕೂ ಬಂದಿದ್ದು ಅದು ಸಂಯಮವನ್ನು ಮೀರುವಂತಿದೆ. ಹಾಗಾಗಿ, ಈ ಕ್ರಮ ಕೈಗೊಂಡಿದ್ದೇವೆ’ ಎಂದು ಕಂಪನಿ ತಿಳಿಸಿದೆ.
ಚರ್ಚೆಗೆ ಗ್ರಾಸವಾದ ಕೇರಳದ “ಒಂದು ಮತ’: ಕೇರಳದಲ್ಲಿ ಬಿಜೆಪಿಯು ಯಾವುದೇ ಶಾಸಕರನ್ನು ಹೊಂದಿಲ್ಲ. ಆದರೂ, ಅಲ್ಲಿಂದ ಒಂದು ಮತ, ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬಂದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕೆ ಕಾರಣವಾಗಿದ್ದು ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಅವರ ಟ್ವೀಟ್. “ಒಬ್ಬರೂ ಬಿಜೆಪಿ ಶಾಸಕರಿಲ್ಲದ ಕೇರಳದಿಂದ ಒಂದು ಮತ ಮುರ್ಮು ಅವರಿಗೆ ಬಂದಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ’ ಎಂದಿದ್ದರು. ಕೇರಳದ ಯಾವುದಾದರೂ ಶಾಸಕರು ಅಥವಾ ಸಂಸದರು ಅಡ್ಡ ಮತದಾನ ಹಾಕಿದರೇ ಅಥವಾ ಕಣ್ತಪ್ಪಿನಿಂದ ಒಂದು ಮತ ಮುರ್ಮು ಅವರಿಗೆ ಬಿದ್ದಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿದ್ದವು. ಅತ್ತ, ಆಡಳಿತಾರೂಢ ಸಿಪಿಎಂ- ಕಾಂಗ್ರೆಸ್ ಮೈತ್ರಿ ಕೂಟ ಸರಕಾರಕ್ಕೂ ಕೊಂಚ ತಲೆಬಿಸಿಯಾಗಿತ್ತು. ತೀವ್ರ ಚರ್ಚೆಯ ಅನಂತರ ಒಂದು ವಿಚಾರ ಬೆಳಕಿಗೆ ಬಂದು ಈ ಕುತೂಹಲಕ್ಕೆ ತೆರೆಬಿದ್ದಿತು.
ಉತ್ತರ ಪ್ರದೇಶದ ಬಿಜೆಪಿ ಸಂಸದ ನೀಲ್ ರತನ್ ಸಿಂಗ್ ಪಟೇಲ್ ಅವರು ಅನಾರೋಗ್ಯದಿಂದಾಗಿ ಕೇರ ಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಕೇರಳದಿಂದಲೇ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿತ್ತು. ಇದು ಗೊತ್ತಾದ ಅನಂತರ ಸಿಪಿಎಂ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಕೊಂಚ ಸಮಾಧಾನವಾಗಿರಬಹುದು.
“ಸೆಡ್ಡು, ಅಹಮಿಕೆಗೆ ಇದು ಸಮಯವಲ್ಲ’ದೇಶದ ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಎಲ್ಲ ವಿಪಕ್ಷಗಳು ಒಗ್ಗಟ್ಟಾಗಿರಬೇಕಿದೆ. ಯಾವುದೇ ವಿಪಕ್ಷಗಳು ಪರಸ್ಪರ ಸಡ್ಡು ಹೊಡೆಯುವುದು, ಅಹಂ ಕಾರ, ಕೋಪಗಳನ್ನು ತೋರ್ಪಡಿಸುವ ಕಾಲ ಇದಲ್ಲ ಎಂದು ಉಪ ರಾಷ್ಟ್ರಪತಿ ಚುನಾವಣೆಗೆ ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾರ್ಗರೆಟ್ ಆಳ್ವ ಕಿವಿಮಾತು ಹೇಳಿದ್ದಾರೆ. ಉಪರಾಷ್ಟ್ರಪತಿ ಚುನಾವಣೆಗೆ ಸೂಕ್ತ ಅಭ್ಯರ್ಥಿಯನ್ನು ಆರಿಸುವಾಗ ವಿಪಕ್ಷಗಳು ತನ್ನ ಅಭಿಪ್ರಾಯವನ್ನು ಪಡೆದಿಲ್ಲ ಎಂಬ ಕಾರಣಕ್ಕಾಗಿ ಟಿಎಂಸಿ ಚುನಾವಣೆಯಿಂದ ದೂರ ಉಳಿಯವುದಾಗಿ ಗುರುವಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಆಳ್ವರವರು ಮೇಲಿನಂತೆ ಹೇಳಿದ್ದಾರೆ. “ಟಿಎಂಸಿಯ ನಿರ್ಧಾರ ಬೇಸರ ತರಿಸಿದೆ. ಈ ಸಂದರ್ಭದಲ್ಲಿ ಎಲ್ಲ ವಿಪಕ್ಷಗಳು ತಮ್ಮ ನಡುವಿನ ಅಸಮಾಧಾನಗಳನ್ನು ಬದಿಗೊತ್ತಿ, ಧೈರ್ಯ, ನಾಯಕತ್ವ ಹಾಗೂ ಏಕತೆಯನ್ನು ತೋರಬೇಕು. ಧೈರ್ಯವಂತ ಮಹಿಳೆ ಎಂದೇ ಪ್ರಸಿದ್ಧಿಯಾಗಿರುವ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿಯವರು ಎಲ್ಲ ವಿಪಕ್ಷಗಳ ಜತೆಗೆ ನಿಲ್ಲುವ ಭರವಸೆಯಿದೆ’ ಎಂದು ಆಳ್ವ ಟ್ವೀಟ್ ಮಾಡಿದ್ದಾರೆ.