ಚಿತ್ರದುರ್ಗ: 14 ಜಿಲ್ಲೆಗಳ ವ್ಯಾಪ್ತಿ ಹಾಗೂ ಚಿತ್ರದುರ್ಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರೆಯಬಹುದು ಎಂಬ ಆಸೆ ಗರಿಗೆದರಿದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಹಾಗೂ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರಗಳು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿದ್ದು ಈ
ಬಾರಿ ಅನುದಾನದ ಮಹಾಪೂರವೇ ಹರಿದು ಬರಬಹುದು ಎಂಬ ಲೆಕ್ಕಾಚಾರ ಹಾಕಲಾಗುತ್ತಿದೆ.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಬಿಳಿಯಾನೆ ಇದ್ದಂತೆ ಎಂಬ ಭಾವನೆ ಇದ್ದಿದ್ದರಿಂದ ಹಿಂದಿನ ಸರ್ಕಾರಗಳು ಮಂಡಳಿಗೆ ಅತ್ಯಲ್ಪ ಅನುದಾನ ನಿಗದಿಪಡಿಸುತ್ತಿದ್ದವು. ಚಿತ್ರದುರ್ಗ, ದಾವಣಗೆರೆ, ರಾಮನಗರ, ಬೆಳಗಾವಿ, ತುಮಕೂರು, ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ ಸೇರಿದಂತೆ ಒಟ್ಟು 14 ಜಿಲ್ಲೆಗಳ 57 ತಾಲೂಕುಗಳು ಮಂಡಳಿ ವ್ಯಾಪ್ತಿಯಲ್ಲಿವೆ. ಮಂಡಳಿಗೆ 70 ವಿಧಾನಸಭಾ ಕ್ಷೇತ್ರಗಳ ಶಾಸಕರು, 14 ಸಂಸದರು, ಜಿಪಂ ಅಧ್ಯಕ್ಷರು, ಜಿಲ್ಲಾಧಿಕಾರಿಗಳು, ವಿಧಾನ ಪರಿಷತ್‌ನ 24 ಸದಸ್ಯರು, 9 ಜನ ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನೊಳಗೊಂಡು ಒಟ್ಟೂ 147 ಸದಸ್ಯರಿದ್ದಾರೆ. ಇಷ್ಟೊಂದು ಬೃಹತ್ ವ್ಯಾಪ್ತಿ ಹೊಂದಿದ್ದರೂ ಪ್ರತಿ ವರ್ಷವೂ ಈ ಮಂಡಳಿಗೆ ಅನುದಾನ ಮಾತ್ರ ‘ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತಾಗಿದೆ. ಸಿಗುವ ಅಲ್ಪಸ್ವಲ್ಪ ಅನುದಾನವನ್ನೇ ಶಾಸಕರು ಹಾಗೂ ಸಂಸದರಿಗೆ ಹಂಚಿಕೆ ಮಾಡಬೇಕಿದೆ.
ಪ್ರತಿ ವರ್ಷ ಅನುದಾನ ಸಾಲದು ಎಂಬ ಕೂಗು ಕೇಳಿ ಬರುತ್ತದೆಯಾದರೂ ಆ ಕೂಗು ಕೇಳ್ಳೋರಿಲ್ಲದೆ ಅಲ್ಲಿಯೇ ಕ್ಷೀಣವಾಗುತ್ತದೆ. ಅನುದಾನ ಹೆಚ್ಚಳದ ಬಗ್ಗೆ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹೇರಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಈ ಬಾರಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾದಿಯಾಗಿ ಉಪಮುಖ್ಯಮಂತ್ರಿ, ಪ್ರಭಾವಿ ಸಚಿವರು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಸದಸ್ಯರಾಗಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿನಿಧಿ ಸುವ ರಾಮನಗರ, ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಕ್ಷೇತ್ರ ಕೊರಟಗೆರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಬಾದಾಮಿ ಪ್ರಭಾವಿ ಸಚಿವರಾಗಿರುವ ಡಿ.ಕೆ. ಶಿವಕುಮಾರ್, ರಮೇಶ್ ಜಾರಕಿಹೊಳಿ, ಎಸ್. ಆರ್. ಶ್ರೀನಿವಾಸ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ವಿಧಾನಸಭಾಧ್ಯಕ್ಷ ರಮೇಶ್‌ಕುಮಾರ್ ಸೇರಿದಂತೆ ಸಾಕಷ್ಟು ಸಚಿವರು ಪ್ರತಿನಿಧಿ ಸುವ ಕ್ಷೇತ್ರಗಳು ಮಂಡಳಿ ವ್ಯಾಪ್ತಿಯಲ್ಲಿವೆ. ಹಾಗಾಗಿ ಈ ಬಾರಿ ಬಜೆಟ್‌ನಲ್ಲಿ ಅನುದಾನ ಹೆಚ್ಚಳವಾಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಹಿಂದೆ ಎಷ್ಟು ಸಿಕ್ಕಿತ್ತು?
2012-13ನೇ ಸಾಲಿನಲ್ಲಿ 17 ಕೋಟಿ ರೂ. ಮಂಜೂರಾತಿ ಪೈಕಿ 12.75 ಕೋಟಿ, 2013-14ನೇ ಸಾಲಿನಲ್ಲಿ 17.30 ಕೋಟಿ ರೂ. ಪೈಕಿ 12.98 ಕೋಟಿ ಬಿಡುಗಡೆಯಾಗಿದೆ. 2014-15ನೇ ಸಾಲಿನಲ್ಲಿ 20 ಕೋಟಿ, 2015-16ನೇ ಸಾಲಿನ ಬಜೆಟ್‌ನಲ್ಲಿ 35 ಕೋಟಿ, 2016-17ನೇ ಸಾಲಿನಲ್ಲಿ 45 ಕೋಟಿ ಹಾಗೂ 2017-18ನೇ ಸಾಲಿನ ಬಜೆಟ್‌ನಲ್ಲಿ 27 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿತ್ತು. ಈ ಅನುದಾನವನ್ನು ಚೆಕ್‌ಡ್ಯಾಂ, ಪಿಕ್‌ಅಪ್‌ಗ್ಳು, ರಸ್ತೆಗಳು, ಸಮುದಾಯ ಭವನಗಳ ನಿರ್ಮಾಣ, ಜಲಸಂಪನ್ಮೂಲ ಅಭಿವೃದ್ಧಿ, ಭೂಸಾರ ಸಂರಕ್ಷಣೆ, ಅರಣ್ಯಾಭಿವೃದ್ದಿ, ತೋಟಗಾರಿಕೆ, ಪಶುಸಂಗೋಪನೆ ಹಾಗೂ ಕೃಷಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ.
ಇಷ್ಟು ಕಡಿಮೆ ಮೊತ್ತದ ಅನುದಾನವನ್ನು 14 ಜಿಲ್ಲೆಗಳ 57 ತಾಲೂಕುಗಳ 70 ವಿಧಾನಸಭೆ ಕ್ಷೇತ್ರದ ಶಾಸಕರಿಗೆ ವಿಂಗಡಿಸಿದರೆ ಕೇವಲ 10-20 ಲಕ್ಷ ರೂ. ನೀಡಬೇಕಾಗುತ್ತದೆ. ಈ ಅನುದಾನದಲ್ಲಿ ಒಂದೆರಡು ಚೆಕ್ ಡ್ಯಾಂ ನಿರ್ಮಾಣ ಮಾಡಬಹುದು. ಆದ್ದರಿಂದ ಬೇರೆ ನಿಗಮ ಮಂಡಳಿಗಳಿಗಿಂತ ಅತಿ ಹೆಚ್ಚು ವ್ಯಾಪ್ತಿ ಹೊಂದಿರುವ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಲು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನಸ್ಸು ಮಾಡಬೇಕಿದೆ.
ಹರಿಯಬ್ಬೆ ಹೆಂಜಾರಪ್ಪ