ಬೆಂಗಳೂರು: ಬರ ಪರಿಹಾರಕ್ಕೆ ಎನ್‌ಡಿಆರ್‌ಎಫ್ ನಿಧಿಯಿಂದ ಶೀಘ್ರ ಅನುದಾನ ಬಿಡುಗಡೆಗೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.
ಬರ ಪರಿಹಾರಕ್ಕೆ ಸ್ಪಂದಿಸದ ಕೇಂದ್ರ ಸರಕಾರದ ವಿರುದ್ಧ ನಿರ್ಣಯ ತೆಗೆದುಕೊಳ್ಳುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾದ ಬೆನ್ನಲ್ಲೇ ಸಿದ್ದರಾಮಯ್ಯ ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಆದರೆ ಈ ಪತ್ರದಲ್ಲಿ ಅವರು ಕೇಂದ್ರ ಸರಕಾರವನ್ನು ಎದುರು ಹಾಕಿಕೊಳ್ಳುವ ಪ್ರಯತ್ನ ನಡೆಸದೆ ಪರಿಸ್ಥಿತಿಯನ್ನು ಸುಮಾರು ನಾಲ್ಕು ಪುಟಗಳಲ್ಲಿ ವಿವರಿಸಿದ್ದಾರೆ.
122 ವರ್ಷಗಳಲ್ಲಿ ಹಿಂದೆಂದು ಕಾಣದ ಬರವನ್ನು ಕರ್ನಾಟಕ ಈ ವರ್ಷ ಎದುರಿಸುತ್ತಿದೆ. ಮುಂಗಾರು ಸಂಪೂರ್ಣ ಕೈಕೊಟ್ಟಿದ್ದರಿಂದ 223 ತಾಲೂಕುಗಳನ್ನು ರಾಜ್ಯ ಸರಕಾರ ಈಗಾಗಲೇ ಬರ ಪೀಡಿತ ಎಂದು ಘೋಷಿಸಿದ್ದು, ಈ ಪೈಕಿ 196 ತಾಲೂಕುಗಳಲ್ಲಿ ಭೀಕರ ಕ್ಷಾಮ ತಲೆದೋರಿದೆ. ಕೇಂದ್ರ ಸರಕಾರದ ತಂಡವೂ ರಾಜ್ಯದಲ್ಲಿ ಪ್ರವಾಸ ನಡೆಸಿದ್ದು ವಾಸ್ತವ ಸ್ಥಿತಿಗತಿಗಳು ಈಗಾಗಲೇ ನಿಮ್ಮ ಅವಗಾಹನೆಯಲ್ಲಿ ಇದೆ. 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದ್ದು, ಬರದಿಂದಾಗಿ 35,162 ಕೋಟಿ ರೂ. ನಷ್ಟ ಅಂದಾಜಿಸಲಾಗಿದೆ. ತತ್‌ಕ್ಷಣಕ್ಕೆ 1,817.44 ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಿದ್ದೇವೆ. ರಾಜ್ಯದ 52.73 ಲಕ್ಷ ರೈತರು 2 ಹೆಕ್ಟೇರ್‌ಗಿಂತ ಕಡಿಮೆ ಜಾಗವನ್ನು ಹೊಂದಿರುವ ಸಣ್ಣ ಹಿಡುವಳಿದಾರರಾಗಿದ್ದು, ಅವರಿಗೆ ಇನ್‌ಪುಟ್ ಸಬ್ಸಿಡಿ ನೀಡುವ ಕರ್ತವ್ಯ ಸರಕಾರದ್ದಾಗಿದೆ. ಇದಕ್ಕಾಗಿ ಸುಮಾರು 12,577.9 ಕೋಟಿ ರೂ. ಅನುದಾನದ ಅಗತ್ಯವಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ನೈಸರ್ಗಿಕ ವಿಕೋಪಕ್ಕೆ ಸಂಬಂಧಪಟ್ಟ ರಾಜ್ಯ ಸರ್ಕಾರದ ಸಂಪುಟ ಉಪಸಮಿತಿ ಅಧ್ಯಕ್ಷರು ಹಾಗೂ ಕಂದಾಯ ಸಚಿವರಾಗಿರುವ ಕೃಷ್ಣ ಬೈರೇಗೌಡ ಬರ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಲು ನಿಮ್ಮ ಭೇಟಿ ಬಯಸಿ ಈಗಾಗಲೇ ಹಲವು ಬಾರಿ ಪತ್ರ ವ್ಯವಹಾರ ನಡೆಸಿದ್ದಾರೆ. ಆದರೆ ಈ ಬಗ್ಗೆ ನಿಮ್ಮ ಸಚಿವಾಲಯದಿಂದ ಸೂಕ್ತ ಸಂವಹನ ವ್ಯಕ್ತವಾಗದಿರುವುದು ದುರಾದೃಷ್ಟಕರ. ಅದೇ ರೀತಿ ಇನ್‌ಪುಟ್ ಸಬ್ಸಿಡಿ ನೀಡುವುದಕ್ಕೆ 2015ರ ಕೃಷಿ ಗಣತಿ ಆಧರಿತ ದತ್ತಾಂಶದ ಬದಲು ರಾಜ್ಯ ಸರ್ಕಾರದ ಫ್ರುಟ್ಸ್ ತಂತ್ರಾಂಶ ಆಧರಿತ ದತ್ತಾಂಶದ ಪ್ರಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆಗಾಗಿ ಕೇಂದ್ರದ ಕಾರ್ಯಕಾರಿಣಿ ಸಮಿತಿಗೆ ತಕ್ಷಣ ವರದಿ ಸಲ್ಲಿಸುವಂತೆ ತಾವು ನಿರ್ದೇಶನ ನೀಡಬೇಕು. ಎನ್‌ಡಿಆರ್‌ಎಫ್ ನಿಧಿಯಿಂದ ಶೀಘ್ರ ಅನುದಾನ ಬಿಡುಗಡೆ ಮಾಡಿದರೆ ರೈತರಿಗೆ ಇನ್ ಫುಟ್ ಸಬ್ಸಿಡಿ ವಿತರಣೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.