Advertisement

ಬರ ನಿರ್ವಹಣೆ ಸಮರ್ಪಕವಾಗಿರಲಿ

01:14 PM Feb 21, 2017 | |

ದಾವಣಗೆರೆ: ಬರ ಪರಿಸ್ಥಿತಿ ಸಮರ್ಪಕ ನಿರ್ವಹಣೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ ಎಂದು ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದ್ದಾರೆ. ಸೋಮವಾರ ಜಿಲ್ಲಾ ಪಂಚಾಯತ್‌ ಕಚೇರಿ ಆವರಣದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿ ಮತ್ತು ನೌಕರರ ಸಮಾವೇಶ, ಬರ ಮತ್ತು ವಿಪತ್ತು ನಿರ್ವಹಣೆ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ಬರ ನಿರ್ವಹಣೆಗೆ ಸರ್ಕಾರ ಬೇಕಾದಷ್ಟು ದುಡ್ಡು ಕೊಡಬಹುದು. ಆದರೆ, ಅದು ಸಮರ್ಪಕವಾಗಿ ಬಳಕೆಯಾಗುವುದು ಪಂಚಾಯತ್‌ ರಾಜ್‌ ನೌಕರ, ಅಧಿಕಾರಿ ವರ್ಗದ ಮೇಲೆ ಅವಲಂಬಿತವಾಗಿರುತ್ತದೆ ಎಂದರು. ಈ ಬಾರಿ ರಾಜ್ಯದಲ್ಲಿ ಹಿಂದೆಂದೂ ಕಾಣದ ಬರ ಪರಿಸ್ಥಿತಿ ತಲೆದೋರಿದೆ. ಇದನ್ನು ನಿಭಾಯಿಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದೆ. ಆದರೆ, ಅನುದಾನ ನೀಡಿದ ತಕ್ಷಣ ಜನರ ಸಮಸ್ಯೆ ಪರಿಹಾರವಾಗುವುದಿಲ್ಲ. 

ಅನುದಾನವನ್ನು ಕುಡಿಯುವ ನೀರು, ಜನರಿಗೆ ಉದ್ಯೋಗ ನೀಡುವಂತಹ ಮಹತ್ವದ ಕಾರ್ಯಗಳಿಗೆ ಬಳಕೆ ಮಾಡುವಲ್ಲಿ ಪಿಡಿಒ, ಕಂದಾಯ ಇಲಾಖೆ ನೌಕರರ ಶ್ರಮ ಸಾಕಷ್ಟಿದೆ ಎಂದು ಅವರು ಹೇಳಿದರು. ಕೆಲವು ಗ್ರಾಮಗಳಲ್ಲಿ ವಿನಾಕಾರಣ ನೀರು ಹರಿದು ಹೋಗಲಿದೆ. ಈ ರೀತಿ ನೀರು ಪೋಲಾಗುವುದನ್ನು ತಡೆಯುವುದು ಕೇವಲ ನೀರುಗಂಟಿ ಅಥವಾ ಪಿಡಿಒ ಕೆಲಸವಲ್ಲ. ಇದರಲ್ಲಿ ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿಯೂ ಇದೆ ಎಂದು ಅವರು ತಿಳಿಸಿದರು. 

ಆಶ್ರಯ ಮನೆಗಳ ಹಂಚಿಕೆ, ಹಿಂದುಳಿದ ಪ್ರದೇಶಾಭಿವೃದ್ಧಿ ನಿಧಿಧಿ ಸೇರಿದಂತೆ ಸರ್ಕಾರದಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾಗುವ ಯಾವುದೇ ಅನುದಾನ ವಾಪಾಸಾಗಬಾರದು. ಸರ್ಕಾರ ಬಿಡುಗಡೆ ಮಾಡುವ ಅನುದಾನ ಸಂಪೂರ್ಣವಾಗಿ ಬಳಕೆಯಾಗಬೇಕು. ಈ ನಿಟ್ಟಿನಲ್ಲಿ ಪಿಡಿಒಗಳು ಕಾರ್ಯಪ್ರವೃತ್ತರಾಗಬೇಕು ಎಂದು ಅವರು ಸಲಹೆ ನೀಡಿದರು. 

ಮಳೆನೀರು ಕೊಯ್ಲು ತಜ್ಞ ದೇವರಾಜ್‌ ರೆಡ್ಡಿ ಮಾತನಾಡಿ, ಇದೀಗ ರಾಜ್ಯದಲ್ಲಿ ತಲೆದೋರಿರುವ ಬರ ಪರಿಸ್ಥಿತಿ 2020 ಇಸವಿವರೆಗೂ ಮುಂದುವರಿಯುವ ಬಗ್ಗೆ ಕೆಲ ವರದಿಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಇಂದಿನಿಂದಲೇ ಹನಿ ಹನಿ ನೀರನ್ನು ಬಹು ಎಚ್ಚರಿಕೆಯಿಂದ ಕಾಪಾಡಿಕೊಳ್ಳಬೇಕಿದೆ. ಕೋಲಾರ ಜಿಲ್ಲೆಯಲ್ಲಿ ಇತ್ತೀಚಿಗೆ ವ್ಯಕ್ತಿಯೊಬ್ಬ 12 ಲಕ್ಷ ರೂ ವೆಚ್ಚ ಮಾಡಿ 2 ಸಾವಿರ ಅಡಿ ಆಳದ ಕೊಳೆವೆ ಬಾವಿ ಕೊರೆಸಿದ್ದು, ಕೇವಲ ಒಂದಿಂಚು ಮಾತ್ರ ಬಿದ್ದಿದೆ.

Advertisement

ಇಂತಹ ನಿದರ್ಶನಗಳನ್ನು ನೋಡಿದರೆ ಭವಿಷ್ಯದಲ್ಲಿ ಮನುಷ್ಯ ಕುಲಕ್ಕೆ ಗಂಡಾಂತರ ತಪ್ಪಿದ್ದಲ್ಲ ಎಂದು ಎಚ್ಚರಿಸಿದರು. ಮಳೆ ನೀರು ಕೊಯ್ಲು ಮತ್ತು ಜಲ ಮರುಪೂರಣದಂತಹ ಕೆಲಸಗಳಿಗೆ ನಾವು ಹೆಚ್ಚು ಒತ್ತು ಕೊಡಬೇಕಿದೆ. ಗ್ರಾಮ ನೀರು ನೈರ್ಮಲ್ಯ ಸಮಿತಿಗಳು ರಚನೆಯಾಗಬೇಕು. ಆಗ ಮಾತ್ರವೇ ನಾವು ಜಲಗಂಡಾಂತರದಿಂದ ಪಾರಾಗಲು ಸಾಧ್ಯ ಎಂದು ಅವರು ತಿಳಿಸಿದರು. 

ಜಿಲ್ಲಾಧಿಕಾರಿ ಡಿ.ಎಸ್‌. ರಮೇಶ್‌, ಜಿಪಂ ಉಪಾಧ್ಯಕ್ಷ ಸಿದ್ದಪ್ಪ, ಸದಸ್ಯೆ ಶೈಲಜಾ ಬಸವರಾಜ್‌, ಉಪಕಾರ್ಯದರ್ಶಿ ಜಿ.ಎಸ್‌. ಷಡಾಕ್ಷರಪ್ಪ, ಮುಖ್ಯ ಲೆಕ್ಕಾಧಿಕಾರಿ ಟಿ. ಆಂಜನೇಯ,ಯೋಜನಾಧಿಕಾರಿ ಬಸವನಗೌಡ, ತಾಪಂ ಇಒ ಪ್ರಬುದೇವ್‌, ಸಂಘಟನೆ ರಾಜ್ಯಾಧ್ಯಕ್ಷ ಶರಣಯ್ಯ, ಜಿಲ್ಲಾಧ್ಯಕ್ಷ ಸಂಗಮೇಶ್‌, ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರ ಒಕ್ಕೂಟದ ಅಧ್ಯಕ್ಷ ಅಣಬೇರು ಶಿವಮೂರ್ತಿ ಇತರರು ವೇದಿಕೆಯಲ್ಲಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next