Advertisement

Drought ಆಹಾರಕ್ಕೂ ಬರ ಖಚಿತ: ಮುಂಗಾರು-ಹಿಂಗಾರು ವೈಪರೀತ್ಯ; ಆಹಾರೋತ್ಪಾದನೆ ಕುಸಿತ ನಿಶ್ಚಿತ

12:16 AM Nov 13, 2023 | Team Udayavani |

ಬೆಂಗಳೂರು: ರಾಜ್ಯದ 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರಿದ್ದು, ಬರಗಾಲದ ತೀವ್ರತೆ ಹೆಚ್ಚುತ್ತಲೇ ಇದೆ.

Advertisement

ಮುಂಗಾರು ಹಂಗಾಮಿನಲ್ಲಿ ನಿಗದಿತ ಗುರಿಯ ಶೇ. 89ರಷ್ಟು ಬಿತ್ತನೆಯಾಗಿದ್ದರೂ ಇಳುವರಿ ಕೈಗೆ ಬರುವುದು ಖಚಿತವಿಲ್ಲ. ಇನ್ನು ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಲು ರೈತರು ಹಿಂದೇಟು ಹಾಕಿದ್ದಾರೆ. ಪರಿಣಾಮವಾಗಿ ಆಹಾರೋತ್ಪಾದನೆ ಕುಸಿತ ನಿಶ್ಚಿತವಾಗಿದೆ.

ರಾಜ್ಯದಲ್ಲಿ ಒಟ್ಟು ಶೇ. 26ರಷ್ಟು ಮಳೆ ಕೊರತೆ ಆಗಿದೆ. 82.35 ಲಕ್ಷ ಹೆಕ್ಟೇರ್‌ ಬದಲು 73.26 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದು, ಒಟ್ಟು 1.48 ಕೋಟಿ ಟನ್‌ ಆಹಾರ ಧಾನ್ಯ ಹಾಗೂ 13.84 ಲಕ್ಷ ಟನ್‌ ಎಣ್ಣೆಕಾಳುಗಳ ಉತ್ಪಾದನೆ ಗುರಿ ಇತ್ತು. ಆದರೆ ಸುಮಾರು 45 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿ ಆಗಿದೆ.

ಬರದಿಂದ 33,770.10 ಕೋ.ರೂ. ನಷ್ಟ ಸಂಭವಿಸಿದ್ದು, 17.901.73 ಕೋ.ರೂ. ಪರಿಹಾರ ನೀಡುವಂತೆ ಕೇಂದ್ರಕ್ಕೆ ರಾಜ್ಯ ಸರಕಾರವು ಬೇಡಿಕೆ ಸಲ್ಲಿಸಿದೆ. ಹಿಂಗಾರಿನಲ್ಲಿ 25.38 ಲಕ್ಷ ಹೆ. ಹಾಗೂ ಬೇಸಗೆ ಹಂಗಾಮಿನಲ್ಲಿ 6.54 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಗುರಿ ಇದೆ. ಆದರೆ ಹಿಂಗಾರು ಮಳೆಯೂ ಆಗದೆ ರೈತರು ಬಿತ್ತನೆ ಮಾಡಲು ಹಿಂಜರಿಯುತ್ತಿದ್ದಾರೆ. ತತ್‌ಕ್ಷಣಕ್ಕೆ ಇದರ ಪರಿಣಾಮ ಗೊತ್ತಾಗದಿದ್ದರೂ ಮುಂದಿನ ದಿನಗಳಲ್ಲಿ ಆಹಾರೋತ್ಪಾದನೆ ಕುಸಿಯುವ ಆತಂಕವಿದೆ.

ಬೇಳೆ ಕಾಳು ಉತ್ಪಾದನೆ ಕುಸಿತ
ಉತ್ತರ ಕರ್ನಾಟಕದಲ್ಲಿ ರೈತರು ಹೆಚ್ಚಾಗಿ ಬೇಳೆ ಕಾಳುಗಳಾದ ತೊಗರಿ, ಕಡಲೆ ಬೆಳೆಯುತ್ತಾರೆ. ಆದರೆ ಈ ಬಾರಿ ತೊಗರಿ ಬೆಳೆ ಮೇಲೆ ಮಳೆ ಕೊರ ತೆ ಪ್ರತಿಕೂಲ ಪರಿಣಾಮ ಬೀರಿದೆ. ಕಲಬುರಗಿ ಜಿಲ್ಲೆಯಲ್ಲಿಯೇ 5 ಲಕ್ಷ ಹೆಕ್ಟೇರ್‌ ತೊಗರಿ ಬೆಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಇಲ್ಲಿ ಪ್ರತೀ ವರ್ಷ 35ರಿಂದ 45 ಲಕ್ಷ ಕ್ವಿಂಟಾಲ್‌ ತೊಗರಿ ಬರು ತ್ತಿತ್ತು. ಈ ಬಾರಿ 7ರಿಂದ 8 ಲಕ್ಷ ಕ್ವಿಂಟಾಲ್‌ ಮಾತ್ರ ಸಿಗುವ ಸಾಧ್ಯತೆ ಇದೆ. ರಾಯಚೂರು, ಬಾಗಲ ಕೋಟೆ ಜಿಲ್ಲೆಗಳಲ್ಲಿ ಒಣಗಿರುವ ಬೆಳೆ ಉಳಿಸಿ ಕೊಳ್ಳಲು ರೈತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದಾರೆ. ಅತ್ತ ದಾವಣಗೆರೆ, ಹಾವೇರಿ ಮತ್ತಿತರ ಕೆಲವು ಜಿಲ್ಲೆಗಳಲ್ಲಿ ಮೆಕ್ಕೆ ಜೋಳವೂ ಸರಿಯಾಗಿ ಬಂದಿಲ್ಲ.

Advertisement

ಎರಡನೇ ಬೆಳೆಗೆ ಹಿಂಜರಿಕೆ
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ 2ನೇ ಬೆಳೆಯತ್ತ ರೈತರು ಮನಸ್ಸು ಮಾಡಿಯೇ ಇಲ್ಲ. ಎರಡನೇ ಬೆಳೆಗಾಗಿ ಬಿತ್ತನೆ ಮಾಡಿ ನಷ್ಟಕ್ಕೆ ಒಳಗಾಗುವುದು ಬೇಡ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ. ಹೀಗಾಗಿ ಹಿಂಗಾರು ಹಂಗಾಮಿನಲ್ಲಿ ಕೃಷಿ ಉತ್ಪಾ ದನೆ ಬಹಳಷ್ಟು ಕುಸಿಯುವ ಸಾಧ್ಯತೆ ಇದೆ.

ಮಂಡ್ಯ, ಬೆಳಗಾವಿಯಲ್ಲಿ ಕಬ್ಬಿಗೆ ಹಾನಿ
ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಕಬ್ಬು ಬೆಳೆಯುತ್ತಾರೆ. ಆದರೆ ಈ ಬಾರಿ ಮಂಡ್ಯದಲ್ಲಿ ಕಬ್ಬಿಗಿಂತ ರಾಗಿಯನ್ನು ಹೆಚ್ಚಾಗಿ ಬೆಳೆಯಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‌ ಕಬ್ಬಿಗೆ ಹಾನಿಯಾಗಿದೆ. ಚಿತ್ರ ದುರ್ಗ ಜಿಲ್ಲೆಯಲ್ಲಿ ಮೇವು ಮತ್ತು ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next