ಯಾದಗಿರಿ: ನಿರಂತರ ಸುರಿಯುತ್ತಿರುವ ಮಳೆಯಿಂದ ಹೆಡಗಿಮದ್ರಾ ಗ್ರಾಮದಲ್ಲಿ ಬೆಳೆದ ಕಬ್ಬು ನೆಲಕಚ್ಚಿದ್ದರಿಂದ ರೈತರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಹೆಡಗಿಮದ್ರಾ ಗ್ರಾಮದ ರೈತರಾದ ಮಲ್ಲಪ್ಪ ಹಾಗೂ ಶಿವಪ್ಪ ತಮ್ಮ ಜಮೀನಿನಲ್ಲಿ2ಲಕ್ಷ ರೂ. ಹಣ ಖರ್ಚು ಮಾಡಿ ಈ ಬಾರಿ ಕಬ್ಬು ಬೆಳೆ ಬೆಳೆದಿದ್ದರು. ಇನ್ನೇನು ಕಬ್ಬು ತೆಗೆದು ಸಕ್ಕರೆ ಕಾರ್ಖಾನೆಗೆ ಮಾರಾಟ ಮಾಡಿ ನೆಮ್ಮದಿಯ ಜೀವನ ನಡೆಸುವ ಕನಸಿನಲ್ಲಿದ್ದರು. ಆದರೆ ನಿರಂತರವಾಗಿ ಸುರಿದ ಮಳೆಯಬ್ಬರಕ್ಕೆ 5 ಎಕರೆ ಕಬ್ಬು ಬೆಳೆ ನೆಲಕಚ್ಚಿ ಲಕ್ಷಾಂತರ ರೂ. ನಷ್ಟವಾಗಿದೆ.
ಹೆಡಗಿಮದ್ರಾ, ನಾಯ್ಕಲ್, ಮನಗನಾಳ, ವಡಗೇರಾ, ಹಾಲಗೇರಾ, ಕುಮನೂರು, ಅರ್ಜುಣಗಿ, ಕೊಡೇಕಲ್, ಗೆದ್ದಲಮರಿ, ಬಲಶೆಟ್ಟಿಹಾಳ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಮಳೆಯಿಂದ ಭತ್ತ, ಹತ್ತಿ, ಕಬ್ಬು ಬೆಳೆ ತೀವ್ರ ಹಾನಿಯಾಗಿದೆ.
ಕಳೆದ ವರ್ಷ ಪ್ರವಾಹ ಹಾಗೂ ಮಳೆಯಬ್ಬರಕ್ಕೆ ಜಿಲ್ಲೆಯ ರೈತರ ಬೆಳೆ ಹಾನಿಗೊಳಗಾಗಿತ್ತು. ಈ ವರ್ಷ ಉತ್ತಮ ಬೆಳೆ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದ ರೈತರನ್ನು ವರುಣ ಕಂಗಾಲಾಗಿಸಿದ್ದಾನೆ. ಕೊಡೇಕಲ್,ಹುಣಸಗಿ, ಯಾದಗಿರಿ, ಸುರಪುರ, ಗುರುಮಠಕಲ್ ಹಾಗೂ ಇನ್ನಿತರೆ ಭಾಗದಲ್ಲಿ ಬೆಳೆ ಹಾನಿಯಾದ ಜಮೀನು ಪ್ರದೇಶಗಳಲ್ಲಿಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಜಂಟಿ ಸಮೀಕ್ಷೆ ನಡೆಸುವ ಕಾರ್ಯ ಮಾಡುತ್ತಿದ್ದಾರೆ.
5 ಎಕರೆ ಭೂಮಿಯಲ್ಲಿಕಬ್ಬು ಬೆಳೆ ಬೆಳೆದಿದ್ದೇವೆ. ಇಲ್ಲಿಯವರೆಗೆ 2ಲಕ್ಷ ರೂ. ಹಣಖರ್ಚು ಮಾಡಿದ್ದೇವೆ. ಈಗ ಮಳೆ ಬಂದುಕಬ್ಬು ನೆಲಕಚ್ಚಿ ಹಾನಿಯಾಗಿದೆ. ಸರಕಾರ ಸೂಕ್ತ ಪರಿಹಾರ ನೀಡಿ ನಮಗೆ ಸಹಾಯ ಮಾಡದಿದ್ದರೆ ನಾವು ಹೈರಾಣಾಗುತ್ತೇವೆ.
ಮಲ್ಲಪ್ಪ, ಹೆಡಗಿಮದ್ರಾ ಗ್ರಾಮದ ರೈತ
ಯಾದಗಿರಿ ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿ ಬೆಳೆಹಾನಿಯಾಗಿದ್ದು, ಜಂಟಿಸಮೀಕ್ಷೆ ನಡೆಸಲಾಗುತ್ತಿದೆ. ರೈತರು ಕೂಡ ಬೆಳೆಹಾನಿ ಬಗ್ಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳಿಅಗತ್ಯ ದಾಖಲೆಗಳೊಂದಿಗೆ ಮಾಹಿತಿ ನೀಡಬೇಕು.ಇದರಿಂದ ಸಂಕಷ್ಟಕ್ಕೀಡಾದ ರೈತರಿಗೆ ಪರಿಹಾರ ದೊರಕಿಸಿಕೊಡಲು ನೆರವಾಗಲಿದೆ.
ಅಬೀದ್, ಜಂಟಿ ನಿರ್ದೇಶಕ, ಕೃಷಿ ಇಲಾಖೆ ಯಾದಗಿರಿ
*ಮಹೇಶ ಕಲಾಲ