ಚಿತ್ರದುರ್ಗ: ರೈತರನ್ನು ಎಡೆಬಿಡದೆ ಕಾಡುತ್ತಿರುವ ಬರ, ಮಳೆ ಕೊರತೆ ಹಾಗೂ ರೋಗ ಬಾಧೆಯಿಂದಾಗಿ ‘ಹಣ್ಣುಗಳ ರಾಜ’ ಮಾವಿನ ಫಸಲು ಈ ಬಾರಿ ಕಡಿಮೆಯಾಗುವ ಲಕ್ಷಣ ಗೋಚರಿಸುತ್ತಿದೆ. ಅಂತರ್ಜಲ ಕಡಿಮೆಯಾಗಿದ್ದರಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿದೆ. ಉಷ್ಣಾಂಶದಲ್ಲಿ ತೀವ್ರ ಏರಿಕೆಯಾಗುತ್ತಿರುವುದು ಮಾವಿನ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಾವಿನ ಇಳುವರಿ ಕುಸಿತದಿಂದ ಬೇಸತ್ತ ಬೆಳೆಗಾರರು ಫಸಲಿಗೆ ಬಂದಿರುವ ಮಾವಿನಮರಗಳಿಗೆ ಕೊಡಲಿಪೆಟ್ಟು ಹಾಕುತ್ತಿದ್ದಾರೆ. ಅಲ್ಲದೆ ಹವಾಮಾನ ವೈಪರೀತ್ಯದಿಂದ ಮಾವಿನ ಇಳುವರಿ ಶೇ.30ರಿಂದ 50ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ತೋಟಗಾರಿಕಾ ತಜ್ಞರು.
ಮಾವಿನ ಫಸಲು ಅರ್ಧಕ್ಕರ್ಧ ಕಡಿಮೆಯಾದರೆ ಸಹಜವಾಗಿ ಮಾವಿನಹಣ್ಣಿನ ಬೆಲೆ ಗಗನಕ್ಕೇರಲಿದೆ. ಇದರಿಂದ ಗ್ರಾಹಕರ ಜೇಬಿಗೂ ಕತ್ತರಿ ಬೀಳಲಿದೆ. ಹೀಗಾಗಿ ಬೆಳೆಗಾರರು ಹಾಗೂ ಗ್ರಾಹಕರಿಗೆ ಈ ಬಾರಿ ಮಾವು ಕಹಿಯಾದರೆ, ಮಧ್ಯವರ್ತಿಗಳು ಹಾಗೂ ವ್ಯಾಪಾರಿಗಳಿಗೆ ಭರಪೂರ ಲಾಭವಾಗುವ ಸಾಧ್ಯತೆ ಇದೆ. ‘ಹಣ್ಣುಗಳ ರಾಜ’ ಮಾವು ಕಡಿಮೆ ನೀರು ಬೇಡುವ ಬೆಳೆ. ಬಯಲುಸೀಮೆಯಲ್ಲಿ ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಮಾವು ಬೆಳೆಯಲಾಗುತ್ತಿದೆ. ಪ್ರಪಂಚದ ಒಟ್ಟು ಮಾವು ಬೆಳೆ ಕ್ಷೇತ್ರದ ಶೇ.63ರಷ್ಟನ್ನು ಭಾರತೀಯ ರೈತರೇ ಬೆಳೆಯುತ್ತಿದ್ದಾರೆ.
ಕರ್ನಾಟಕದ ಸುಮಾರು 1,73,080 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, ವಾರ್ಷಿಕ ಸುಮಾರು 16,41,165 ಟನ್ ಹಣ್ಣು ಉತ್ಪಾದನೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಪ್ರಮುಖವಾಗಿ ಕೋಲಾರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಧಾರವಾಡ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಮಾವು ಬೆಳೆಯಲಾಗುತ್ತಿದೆ. ಅತ್ಯುತ್ತಮ ತಳಿಗಳಾದ ಆಪೂಸ್ (ಬಾದಾಮಿ), ಪೈರಿ (ರಸಪೂರಿ), ತೋತಾಪುರಿ, ನೀಲಂ, ಮಲಗೋವಾ, ಮಲ್ಲಿಕಾ, ಬಂಗನಪಲ್ಲಿ, ಅಮರಪಲ್ಲಿ, ಅರ್ಕಾಪುನೀತ್, ಅರ್ಕಾನೀಲ್ ಕಿರಣ್, ಸಿಂಧೂ, ರತ್ನ ತಳಿಗಳನ್ನು ರೈತರು ಬೆಳೆಯುತ್ತಿದ್ದಾರೆ.
ಮಾವಿನ ಹೂವು ಕಾಯಿ ಕಟ್ಟಲಿಲ್ಲ: ರಾಜ್ಯವನ್ನು ಕಾಡುತ್ತಿರುವ ಬರ, ಮುಂಗಾರು- ಹಿಂಗಾರು ಮಳೆ ಕೊರತೆ, ವಾತಾವರಣದಲ್ಲಿ ತೇವಾಂಶ ಇಲ್ಲದಿರುವುದು ಮಾವಿನ ಫಸಲು ಕಡಿಮೆಯಾಗಲು ಪ್ರಮುಖ ಕಾರಣ ಎನ್ನಲಾಗುತ್ತಿದೆ. ಭೂಮಿಯಲ್ಲಿ ತೇವಾಂಶ ಕೊರತೆಯಿಂದಾಗಿ ಮಾವಿನ ಹೂವು ಬಿಡುವ ಸಂದರ್ಭದಲ್ಲಿ ಹೆಚ್ಚು ಬಿಡಲಿಲ್ಲ. ನಿಂತ ಹೂವುಗಳು ಕೂಡ ಕಾಯಿ ಕಟ್ಟಲಿಲ್ಲ. ಮಾವಿನ ಬೆಳೆಗೆ ಕೀಟ, ರೋಗಗಳ ಬಾಧೆ ಮತ್ತು ಪೋಷಕಾಂಶಗಳ ಕೊರತೆಯಿಂದಲೂ ಸಹ ಇಳುವರಿ ಕಡಿಮೆಯಾಗಿದೆ. ಜೊತೆಗೆ ಕಾಂಡಕೊರಕ ರೋಗವೂ ಕಾಣಿಸಿಕೊಂಡು ಬೆಳೆಗಾರರ ನಿದ್ದೆಗೆಡಿಸಿದೆ. ಬರ, ತೇವಾಂಶ ಕೊರತೆ,ವಾತಾವರಣದಲ್ಲಿ ಉಷ್ಣಾಂಶ ಏರಿಕೆ, ಮಾವಿನ ಮರಗಳಿಗೆ ಕಾಡಿದ ರೋಗ, ಕೀಟ ಬಾಧೆಯಿಂದಾಗಿ ಮಾವಿನ ಇಳುವರಿ ಶೇ.50ರಷ್ಟು ಕಡಿಮೆಯಾಗಿದೆ. ಮರವನ್ನು ಕಾಡುತ್ತಿರುವ ಕಾಂಡ ಕೊರಕ ರೋಗದಿಂದ ಮಾವಿನ ಮರಗಳನ್ನು ಕಡಿದು ಹಾಕಲಾಗುತ್ತಿದೆ.
ವಿಜಯಕುಮಾರ್, ಮಾವು ಬೆಳೆಗಾರ, ಹಿರೇಎಮ್ಮಿಗನೂರು
ಕಾಂಡಕೊರಕ ರೋಗದಿಂದ ಬೆಳೆಗಾರರು ಮಾವಿನ ಮರಗಳನ್ನು ಕಡಿದು ಹಾಕುತ್ತಿದ್ದಾರೆ. ಮಾವಿನ ಮರಗಳ ಪುನಶ್ಚೇತನಕ್ಕೆ ಪ್ರತ್ಯೇಕ ಯೋಜನೆ ಇದೆ. ಯಾವುದೇ ಕಾರಣಕ್ಕೂ ಮರವನ್ನು ಕಡಿಯದೆ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಮಾವು ಇಳುವರಿ ಹೆಚ್ಚಿಸಲು ಮುಂದಾಗಬೇಕು.
– ಡಾ| ಬಾಲಕೃಷ್ಣ, ತೋಟಗಾರಿಕೆ ಇಲಾಖೆ ಉಪನಿರ್ದೇಶ
– ಹರಿಯಬ್ಬೆ ಹೆಂಜಾರಪ್ಪ