ಹೊಸದಿಲ್ಲಿ : ಕೇಂದ್ರ ವಿಶ್ವವಿದ್ಯಾಲಯಗಳಿಗೆ ಮತ ನಿರಪೇಕ್ಷತೆಯ ಸ್ವರೂಪ ನೀಡುವ ಅಗತ್ಯ ಇರುವುದರಿಂದ, ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹೆಸರಿನಲ್ಲಿರುವ “ಮುಸ್ಲಿಂ” ಪದವನ್ನು ಮತ್ತು ಬನಾರ್ ಹಿಂದು ವಿಶ್ವವಿದ್ಯಾಲಯದ ಹೆಸರಿನಲ್ಲಿರುವ “ಹಿಂದು” ಪದವನ್ನು ಕೈಬಿಡಬೇಕೆಂದು ವಿಶ್ವವಿದ್ಯಾಲಯಗಳ ಅನುದಾನ ಆಯೋಗ (ಯುಜಿಸಿ) ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಅಕ್ರಮಗಳ ಬಗೆಗಿನ ದೂರುಗಳನ್ನು ಅವಲೋಕಿಸಲು ಕಳೆದ ಎಪ್ರಿಲ್ 25ರಂದು ಯುಜಿಸಿಯಿಂದ ನೇಮಕಗೊಂಡಿದ್ದ ಐದು ಸಮಿತಿಗಳಲ್ಲಿ ಒಂದಾಗಿರುವ ಈ ಸಮಿತಿಯು ಈ ಶಿಫಾರಸು ಮಾಡಿದೆ.
ಕೇಂದ್ರ ವಿಶ್ವವಿದ್ಯಾಲಯಗಳಲ್ಲಿನ ಮೂಲ ಸೌಕರ್ಯ, ಶೈಕ್ಷಣಿಕ ಗುಣ ಮಟ್ಟ, ಸಂಶೋಧನೆ ಮತ್ತು ಹಣಕಾಸು ನಿರ್ವಹಣೆಗಳ ಕುರಿತಾಗಿ ಅಧ್ಯಯನ ನಡೆಸಿ ಅಲ್ಲಿನ ಲೋಪದೋಷಗಳ ಬಗ್ಗೆ ವರದಿ ಸಲ್ಲಿಸುವುದಕ್ಕಾಗಿ ನೇಮಿಸಲ್ಪಟ್ಟ ಈ ಸಮಿತಿಯು “ಮತ ನಿರಪೇಕ್ಷತೆಯ ಸ್ವರೂಪವನ್ನು ಬಿಎಚ್‌ಯು ಮತ್ತು ಎಎಂಯು ವಿವಿಎ ಕೊಡಬೇಕು” ಎಂದು ಶಿಫಾರಸು ಮಾಡಿರುವುದು ಅಚ್ಚರಿಯ ಸಂಗತಿಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಎಎಂಯು ಅನ್ನು ಆಲಿಘಡ ವಿಶ್ವವಿದ್ಯಾಲಯವೆಂದೂ ಬಿಎಚ್‌ಯು ಅನ್ನು ಬನಾರಸ್ ವಿಶ್ವವಿದ್ಯಾಲಯವೆಂದೂ ಪುನರ್ ನಾಮಕರಣ ಮಾಡಬಹುದು ಎಂಬ ಸಲಹೆಯನ್ನು ಈ ಸಮಿತಿ ನೀಡಿದೆ.
ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಸರ್ ಸಯ್ಯದ್ ಅಹ್ಮದ್ ಖಾನ್; ಹಿಂದೂ ಬನಾರಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಮದನ ಮೋಹನ ಮಾಳವೀಯ ಅವರು.
ಈ ಎರಡೂ ವಿಶ್ವವಿದ್ಯಾಲಯಗಳು ಕೇಂದ್ರ ಸರಕಾರದಿಂದ ಒದಗುವ ಹಣದಿಂದ ನಡೆಯುತ್ತಿರುವುದರಿಂದ ಅವುಗಳಿಗೆ “ಮತನಿರಪೇಕ್ಷತೆಯ ಸ್ವರೂಪ” ನೀಡಬೇಕು ಎಂಬುದು ಸಮಿತಿಯ ಶಿಫಾರಸಾಗಿದೆ.
ಯುಜಿಸಿ ನೇಮಿಸಿದ ಸಮಿತಿಗಳಿಂದ ಕಾರ್ಯಾವಲೋಕನಕ್ಕೆ ಗುರಿಯಾಗಿರುವ ಇತರ ವಿಶ್ವವಿದ್ಯಾಲಯಗಳೆಂದರೆ ಪಾಂಡಿಚೇರಿ ವಿವಿ, ಹೇಮಾವತಿ ನಂದನ್ ಬಹುಗುಣ ಗಢವಾಲ್ ವಿವಿ (ಉತ್ತರಾಖಂಡ), ಸೆಂಟ್ರಲ ಯುನಿವರ್ಸಿಟಿ ಜಾರ್ಖಂಡ್, ಅಲಹಾಬಾದ್ ಯುನಿವರ್ಸಿಟಿ, ಸೆಂಟ್ರಲ್ ಯುನಿವರ್ಸಿಟಿ ಆಫ್ ರಾಜಸ್ಥಾನ್, ಮಹಾತ್ಮಾ ಗಾಂಧಿ ಯುನಿವರ್ಸಿಟಿ ಆಫ್ ಜಮ್ಮು, ಹರಿ ಸಿಂಗ್ ಗೌರ್ ಯುನಿವರ್ಸಿಟಿ (ಮಧ್ಯ ಪ್ರದೇಶ) ಮತ್ತು ತ್ರಿಪುರ ಯುನಿವರ್ಸಿಟಿ.