ಬೆಂಗಳೂರು: ಎಸೆಸೆಲ್ಸಿ ಅಂತಿಮ ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳಿಗೆ ಲಗಾಮು ಹಾಕಲು ಶಿಕ್ಷಣ ಇಲಾಖೆ ಡ್ರೋನ್ ಕೆಮರಾಗಳ ಮೊರೆ ಹೋಗಲಿದೆ! ಇನ್ನು ಮುಂದೆ ಹತ್ತನೇ ತರಗತಿ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳ ಸುತ್ತ ಡ್ರೋನ್ ಕೆಮರಾ, ಪರೀಕ್ಷಾ ಕೊಠಡಿಯೊಳಗೆ ಸಿಸಿ ಕೆಮರಾ, ಡಿವಿಆರ್ ಚಿತ್ರಣದ ಕಣ್ಗಾವಲು ಇಡಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸುವ ಪರೀಕ್ಷೆಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿ ಶಾಲಾ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಸೂಚನೆ ನೀಡಲಾಗಿದೆ.
ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಬಾಡಿಗೆ ಆಧಾರದ ಮೇಲೆ ಡ್ರೋನ್ ಕೆಮರಾ ಅಳವಡಿಸಿ ನಕಲು/ಅಕ್ರಮಗಳು ನಡೆಯದಂತೆ ಕ್ರಮ ಕೈಗೊಳ್ಳುವಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದಾರೆ.
ಪೊಲೀಸ್ ಇಲಾಖೆಯಿಂದ ಮಫ್ತಿ ಮೂಲಕ ವೀಡಿಯೋ ಚಿತ್ರೀಕರಣ ಮಾಡಬೇಕು, ಪರೀಕ್ಷಾ ಕೇಂದ್ರದ ಪ್ರತಿ ಕೊಠಡಿಗಳಿಗೆ ಸಿಸಿ ಕೆಮರಾ ಮತ್ತು ಡಿವಿಆರ್ ಅಳವಡಿಸಿ ದೃಶ್ಯಾವಳಿಯನ್ನು ಡಯಟ್ ಅಧಿಕಾರಿಗಳಿಂದ ಪರಿಶೀಲಿಸಬೇಕು, ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನು ನೇಮಿಸುವಾಗ ಪಿಡಿಒ, ಗ್ರಾಮ ಲೆಕ್ಕಿಗರು ಸಹಿತ ಇತರ ಇಲಾಖೆಯ ಅಧಿಕಾರಿಗಳನ್ನು ನೇಮಿಸಬೇಕು ಎಂಬ ಸೂಚನೆಯನ್ನು ನೀಡಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವುದನ್ನು ಮತ್ತು ಕೊನೆಯಲ್ಲಿ ಸೀಲ್ ಮಾಡುವುದನ್ನು ವೆಬ್ ಕಾಸ್ಟಿಂಗ್ ಮಾಡಬೇಕು, ಪರೀಕ್ಷಾ ಕೇಂದ್ರಗಳಿಗೆ ಅದೇ ಶಾಲೆಯ ಪ್ರಥಮ ಅಥವಾ ದ್ವಿತೀಯ ದರ್ಜೆಯ ಸಹಾಯಕರನ್ನು, ವಾಟರ್ ಬಾಯ್, ಗ್ರೂಪ್ ಡಿ ಹಾಗೂ ಇತರ ಸಿಬಂದಿ ನೇಮಿಸಿಕೊಳ್ಳದಂತೆ ನೋಡಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ನೆಲ ಮಹಡಿಯಲ್ಲಿ ಪರೀಕ್ಷೆ ನಡೆಸುವಂತಿಲ್ಲ ಹೋಬಳಿ ಮತ್ತು ತಾಲೂಕು ಹಂತ ದಲ್ಲಿ ಹೆಚ್ಚಿನ ಸಾಮರ್ಥ್ಯದ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಬೇಕು, ಪರೀಕ್ಷೆಯನ್ನು ನೆಲ ಮಹಡಿಯಲ್ಲಿ ನಡೆಸಬಾರದು.