ಆಳಂದ: ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಪಟ್ಟಣದ ಕೊಳಚೆ ಪ್ರದೇಶದ ನಿವಾಸಿಗಳಿಗಾಗಿ 250 ಮನೆ ನಿರ್ಮಾಣಕ್ಕೆ ಶಾಸಕ ಸುಭಾಷ ಗುತ್ತೇದಾರ ಭೂಮಿಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದರು.
ಹತ್ತ್ಯಾನ ಗಲ್ಲಿ, ಗೊಲ್ಲರ ಬಡಾವಣೆ ಹಾಗೂ ಕರ್ಪೂರಲಿಂಗೇಶ್ವರ ಬಡಾವಣೆಯಲ್ಲಿ ಮನೆ ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಶಾಸಕರು, ಫಲಾನುಭವಿಗಳ ವಂತಿಗೆ ಭರಿಸಿದ ಬಳಿಕ ಗುತ್ತಿಗೆದಾರರು ಗುಣಮಟ್ಟದ ಮನೆ ನಿರ್ಮಿಸಿಕೊಟ್ಟು ಬಡವರಿಗೆ ಅನುಕೂಲ ಒದಗಿಸಬೇಕು ಎಂದು ತಾಕೀತು ಮಾಡಿದರು.
ಸಾವಿರಾರು ಬಡವರು ಮನೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಹಂತ, ಹಂತವಾಗಿ ಮನೆಗಳ ನಿರ್ಮಾಣಕ್ಕೆ ಸರ್ಕಾರದ ಅನುಮತಿ ದೊರೆತಿದೆ. ಎಲ್ಲ ಬಡವರಿಗೂ ಈ ಯೋಜನೆಯಲ್ಲಿ ಮನೆ ದೊರೆಯುಂತಾಗಬೇಕು ಎಂದು ಹೇಳಿದರು.
ಮನೆ ಕಟ್ಟಲು 4.98 ಲಕ್ಷ ರೂ. ಮಂಜೂರಾಗಿದೆ. ಅದರಲ್ಲಿ ಮೂರು ಕಂತುಗಳಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಜನಾಂಗದ ಫಲಾನುಭವಿಗಳು 42 ಸಾವಿರ ಹಾಗೂ ಸಾಮಾನ್ಯ ವರ್ಗದದ ಫಲಾನುಭವಿಗಳು 74 ಸಾವಿರ ವಂತಿಗೆ ಹಣ ಭರಿಸಿದರೆ ಒಂದು ಬಿಎಚ್ಕೆ (ಅಡುಗೆ ಕೋಣೆ 1, ವಿಶ್ರಾಂತಿ ಕೋಣೆ 1, ಹಾಲ್, ಶೌಚಾಲಯ ಹಾಗೂ ಸ್ನಾನಗೃಹ) ಮನೆ ನಿರ್ಮಿಸುವ ಯೋಜನೆ ಇದಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ 1.50 ಲಕ್ಷ ರೂ. ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಕ್ಕೆ 2 ಲಕ್ಷ ಹಾಗೂ ಫಲಾನುಭವಿಗಳಿಗೆ ಬಾಕಿ ಉಳಿದ ಮೊತ್ತ 1.48ಲಕ್ಷ ರೂ. ಭರಿಸಬೇಕಾಗಿದ್ದು, ಈ ಪೈಕಿ ಫಲಾನುಭವಿಗಳು ಶೇ 10ರಂತೆ 49, 800 ರೂ. ಮೊತ್ತದ ಬ್ಯಾಂಕ್ ಡಿಡಿ ರೂಪದಲ್ಲಿ ಹಾಗೂ ಬಾಕಿ ಉಳಿದ ಮೊತ್ತ 98,200 ರೂ. ಬ್ಯಾಂಕ್‌ನಿಂದ ಸಾಲ ಪಡೆಯಬೇಕು ಹಾಗೂ ಇತರೆ ವರ್ಗಕ್ಕೆ ಕೇಂದ್ರ ಸರ್ಕಾರದಿಂದ 1.50 ಲಕ್ಷ ರೂ. ಮಾತ್ರ, ರಾಜ್ಯದಿಂದ 1.20ಲಕ್ಷ ರೂ. ಹಾಗೂ ಫಲಾನುಭವಿಗಳಿಗೆ ಬಾಕಿ ಉಳಿದ ಮೊತ್ತ 2.28ಲಕ್ಷ ರೂ. ಭರಿಸತಕ್ಕದ್ದು, ಈ ಪೈಕಿ ಫಲಾನುಭವಿ ಶೇ.15ರಷ್ಟು 74,700 ರೂ. ಡಿಡಿ ರೂಪದಲ್ಲಿ ಹಾಗೂ ಬಾಕಿ ಉಳಿದ ರೂಪಾಯಿ 1,53,300 ಬ್ಯಾಂಕ್‌ನಿಂದ ಸಾಲ ಪಡೆದು ಆಯುಕ್ತರು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಬೆಂಗಳೂರು ಇವರಿಗೆ ಸಲ್ಲಿಸುವ ನಿಯಮದ ಕುರಿತು ಬಡವರಿಗೆ ಪರಿಣಿತರ ಮಾಹಿತಿ ನೀಡಿ ಅನುಕೂಲ ಒದಗಿಸಬೇಕು ಎಂದು ಹೇಳಿದರು.
ಪುರಸಭೆ ಸದಸ್ಯ ಶ್ರೀಶೈಲ ಪಾಟೀಲ, ಮಾಜಿ ಅಧ್ಯಕ್ಷ ಅಂಬಾದಾಸ ಪವಾರ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಮುಖಂಡ ಶ್ರೀಶೈಲ ಖಜೂರಿ, ಶರಣು ನಾಗದೆ, ಬಾಬುರಾವ ರಡ್ಡಿ, ಶಿವುಪುತ್ರ ಹತ್ತಿ, ಮಹಾಂತೇಶ ಡೊಳ್ಳೆ, ಹಣಮಂತರಾವ ಪಾಟೀಲ, ಶಿವಯ್ಯ ಸ್ವಾಮಿ, ಚಂದ್ರಶೇಖರ ಬುಕ್ಕೆ, ಈರಣ್ಣ ವರನಾಳೆ, ಸೋಮಶೇಖರ ಬಿರಾದಾರ, ಶ್ರೀಕಾಂತ ಹತ್ತಿ, ಹುಬ್ಬಣ್ಣ ನಾಗದೆ, ಸಾಗರ ಬೆಲಸೂರೆ, ಶಿವುಕುಮಾರ ಪರಗೆ ಭಾಗವಹಿಸಿದ್ದರು.