ಆಳಂದ: ತೊಗರಿ ಖರೀದಿ ಪುನಾರಂಭಕ್ಕೆ ಒತ್ತಾಯಿಸಿ ಮಾಜಿ ಶಾಸಕ,ಬಿಜೆಪಿ ಮುಖಂಡ ಸುಭಾಷ ಗುತ್ತೇದಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೊಗರಿ ಖರೀದಿ ಹಠಾತ್ತಾಗಿ ಸ್ಥಗಿತಗೊಳಿಸುವ ಮೂಲಕ ರಾಜ್ಯ ಸರ್ಕಾರ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. 2017-18ನೇ ಸಾಲಿಗೆ ಕೇಂದ್ರ ಸರ್ಕಾರದ
ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರೈತರಿಂದ ತೊಗರಿ ಖರೀದಿಸಲಾಗುತ್ತಿದೆ.
ಆದರೆ ಫೆ. 8ರಂದು ಜಿಲ್ಲಾಧಿಕಾರಿಗಳು ದಿಢೀರ್ ಸ್ಥಗಿತಗಿಳಿಸಿರುವುದು ರೈತ ವಿರೋಧಿ ಧೋರಣೆಯಾಗಿದೆ. ತಾಲೂಕಿನಲ್ಲಿ ಪ್ರತಿ ವರ್ಷಕ್ಕಿಂತ ಈ ಬಾರಿ ಅತಿ ಹೆಚ್ಚು ತೊಗರಿ ಬೆಳೆಯಲಾಗಿದೆ. ಬಾಕಿ ಉಳಿದಿರುವ ರೈತರಿಂದ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿ ಖರೀದಿ ಪ್ರಕ್ರಿಯೆಯನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದರು.
ಖರೀದಿ ಕೇಂದ್ರಗಳಿಗೆ ಸಮಪರ್ಕವಾಗಿ ಖಾಲಿ ಚೀಲ ವಿತರಿಸಿಲ್ಲ. ರೈತರು ಖರೀದಿ ಕೇಂದ್ರದ ಮುಂದೆ ತೊಗರಿ ಚೀಲಗಳೊಂದಿಗೆ ಅಹೋರಾತ್ರಿ ನಿದ್ದೆಗೆಟ್ಟು ಕಾಯುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಖರೀದಿ ಕೇಂದ್ರಗಳಿಗೆ ಸ್ಪಷ್ಟವಾದ ಮಾಹಿತಿ ನೀಡಬೇಕು. ಸರಿಯಾದ ಸಮಯಕ್ಕೆ ಸಮರ್ಪಕ ಖಾಲಿ ಚೀಲಗಳನ್ನು ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ ಬಿ.ಜಿ. ಕುದರಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಬಿಜೆಪಿ ಅಧ್ಯಕ್ಷ ಮಲ್ಲಿನಾಥ ಕಂದಗುಳೆ, ಜಿಪಂ ಮಾಜಿ ಸದಸ್ಯ ವೀರಣ್ಣ ಮಂಗಾಣೆ, ತಡಕಲ್ ಗ್ರಾಪಂ ಅಧ್ಯಕ್ಷ ಶಿವುಪುತ್ರಪ್ಪ ಬೆಳ್ಳೆ, ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ ಸಾವಳೇಶ್ವರ, ಅಪ್ಪಸಾಬ ಗುಂಡೆ, ಹಣಮಂತರಾವ ಮಲಾಜಿ, ಬಸು ಬ್ಯಾಳಿ, ಸಿದ್ಧು ಪೂಜಾರಿ, ಸಿದ್ದು ಹಿರೋಳಿ, ಪ್ರಧಾನ ಕಾರ್ಯದರ್ಶಿ ಮಹೇಶ ಗೌಳಿ, ಮಲ್ಲು ಸಾವಳಗಿ, ಚಂದ್ರಮಪ್ಪ ಘಂಟೆ, ಚನ್ನು ಕಾಳಕಿಂಗೆ, ಸಿ.ಕೆ. ಪಾಟೀಲ ಪಾಲ್ಗೊಂಡಿದ್ದರು.
ಆಳಂದ: ತಾಲೂಕಿನಲ್ಲಿ ಪ್ರಾರಂಭಿಸಿದ ತೊಗರಿ ಖರೀದಿಯನ್ನು ಹಠಾತ್ತಾಗಿ ಸ್ಥಗಿತಗೊಳಿರುವ ಕ್ರಮ ಖಂಡಿಸಿದ ಜಯ ಕರ್ನಾಟಕ ಸಂಘಟನೆ ಕಾರ್ಯಕರ್ತರು ಖರೀದಿ ಪುನರ್ ಆರಿಂಭಸದೇ ಇದ್ದಲ್ಲಿ ಫೆ, 12ರಂದು ತಹಶೀಲ್ದಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸಂಘಟನೆ ಮುಖಂಡ ಪ್ರಕಾಶ ಮಾಲಿಪಾಟೀಲ ಕೊಡಲಹಂಗರಗಾ ನೇತೃತ್ವದಲ್ಲಿ ಕಾರ್ಯಕರ್ತರು ಗ್ರೇಡ್-2 ತಹಶೀಲ್ದಾರ ಬಿ.ಜಿ. ಕುದರಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಖರೀದಿಸಲಾದ ತೊಗರಿ ಹಣವನ್ನು ಸಂಬಂಧಿಸಿದ ರೈತರ ಖಾತೆಗೆ ತಕ್ಷಣವೇ ಜಮಾ ಮಾಡಬೇಕು. ಖರೀದಿ ಕೇಂದ್ರ ಹೆಚ್ಚಿಸಬೇಕು. ತೊಗರಿ ಮಾರಾಟಕ್ಕೆ ನೋಂದಾಯಿತ ಎಲ್ಲ ರೈತರ ತೊಗರಿಯನ್ನು ಸರಣಿಯಂತೆ ಖರೀದಿಸಬೇಕು.
ಕೇಂದ್ರಗಳಿಗೆ ಅಗತ್ಯ ಸಾಮಗ್ರಿ ಮತ್ತು ಖಾಲಿ ಚೀಲ ಪೂರೈಸಬೇಕು. ಖರೀದಿ ವೇಳೆ ಬೆಳೆಗಾರರಿಂದ ಅಕ್ರಮ ಹಣವಸೂಲಿ ತಡೆಯಬೇಕು. ದಲ್ಲಾಳಿಗಳ ಮೂಲಕ ಖರೀದಿ ಮಾಡುವುದನ್ನು ಕೂಡಲೇ ನಿಲ್ಲಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಒಬ್ಬ ರೈತರಿಂದ ಕೇವಲ 20 ಟಲ್ ತೊಗರಿ ಖರೀದಿ ಬದಲು ಅದನ್ನು 50 ಕ್ವಿಂಟಲ್‌ಗೆ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು. ಪ್ರಕಾಶ ಮಾಲಿಪಾಟೀಲ ಕೊಡಲಹಂಗರಗಾ, ಶಂಕರ ಫುಲಾರೆ, ಶಿವಲಿಂಗಪ್ಪ ಪಟ್ಟಣಶೆಟ್ಟಿ, ಪರ್ವತಲಿಂಗ ಮೂಲಗೆ, ಈರಣ್ಣ ಹತ್ತರಕಿ, ಸೀತಲ, ಅಮೀತ, ಮಿಥನ, ಪವನಕುಮಾರ ಕಲಶೆಟ್ಟಿ, ದೇವು ವಗರಗಿ ಪಾಲ್ಗೊಂಡಿದ್ದರು.