Advertisement

23ರಂದು ಕಲಬುರಗಿಯಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ

11:42 AM Dec 17, 2018 | Team Udayavani |

ಕಲಬುರಗಿ: ನಾಡಿನ ಕಲೆ, ಸಾಂಸ್ಕೃತಿಕ ಕಲೆಗಳಿಗೆ ಪ್ರೋತ್ಸಾಹಿಸುವ ಹಾಗೂ ಗುರುತಿಸುವ ನಿಟ್ಟಿನಲ್ಲಿ ರಾಜ್ಯ-ದೇಶವಲ್ಲದೇ ವಿದೇಶ ಗಮನ ಸೆಳೆಯುವ ಕಾರ್ಯ ಮೈಗೂಡಿಸುತ್ತಾ ಬಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆಯ ಆಳ್ವಾಸ್‌ ನುಡಿಸಿರಿ-ವಿರಾಸತ್‌ ಸಮ್ಮೇಳನ ಈಗ ಬಿಸಿಲು ನಾಡಿನಲ್ಲೂ ಮೊಳಗಲು ಶುರು ಮಾಡಿಕೊಂಡಿದೆ.

Advertisement

ದೇಶದ ವಿವಿಧ ಭಾಗಗಳ ಕಲೆಗಾರಿಕೆ ನೃತ್ಯಗಳನ್ನು 350 ಕಲಾವಿದರು ಒಂದೇ ವೇದಿಕೆಯಡಿ ನಿರೂಪಿಸುವ ಅತ್ಯಾಕರ್ಷಕ ಹಾಗೂ ಮನೋರಂಜನೆ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸುವ ಆಳ್ವಾಸ್‌ ಸಾಂಸ್ಕೃತಿಕ ವೈಭವವನ್ನು ಡಿ. 23ರಂದು ಸಂಜೆ 6ಕ್ಕೆ ಶರಣಬಸವೇಶ್ವರ ಜಾತ್ರಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಆಳ್ವಾಸ್‌ ನುಡಿಸಿರಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ| ಪಿ.ಎಸ್‌. ಶಂಕರ ಹಾಗೂ ಅಧ್ಯಕ್ಷರಾಗಿರುವ ಎಚ್‌ ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಆಳ್ವಾಸ್‌ ಸಾಂಸ್ಕೃತಿಕ ವೈಭವ ಅರ್ಥಪೂರ್ಣ ಹಾಗೂ ಉಪಯುಕ್ತವಾಗಿಸುವ ನಿಟ್ಟಿನಲ್ಲಿ ಸಕಲ ಸಿದ್ಧತೆಗಳು ನಡೆದಿದ್ದು, ಸುಮಾರು 10 ಸಾವಿರ ಪ್ರೇಕ್ಷಕರು ಮನಃಪೂರ್ವಕ ಕಲೆಗಾರಿಕೆ ನೋಡಿ ಆನಂದಿಸಬೇಕೆಂಬ ಮಹತ್ವಕಾಂಕ್ಷಿ ಹೊಂದಲಾಗಿದೆ. ಕೇರಳದ ಮೋಹಿನಿಯಾಮ್‌, ಬುಡುಗುತಿಟ್ಟು ಯಕ್ಷಗಾನ, ಆಂಧ್ರದ ಜನಪದ ಬಂಜಾರ ನೃತ್ಯ, ಮಣಿಪುರಿ ಸ್ಟಿಕ್‌ ಡ್ಯಾನ್ಸ್‌, ಶಾಸ್ತ್ರೀಯ ನೃತ್ಯ, ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ, ಮಲ್ಲಕಂಬ ಮತ್ತು ರೋಪ ಕಸರತ್ತು, ಗುಜರಾತಿನ ಗಾರ್ಭ ಮತ್ತು ದಾಂಡಿಯಾ, ಮಣಿಪುರಿ ದೋಲ್‌ ಚಲಮ್‌, ಕಥಕ್‌ ನೃತ್ಯ, ತೆಂಕೆಯುಕ್ಷ ಪ್ರಯೋಗ ಸೇರಿದಂತೆ ಇತರ ಪ್ರಕಾರದ ಕಲಾ ಪ್ರಕಾರಗಳು ಪ್ರದರ್ಶಿತಗೊಳ್ಳಲಿವೆ. ಒಟ್ಟಾರೆ ಮೂರುವರೆ ಗಂಟೆಗಳ ಕಾಲ ನಿರಂತರವಾಗಿ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ವಿವರಣೆ ನೀಡಿದರು. ಡಿ. 24ರಂದು ಆಳಂದ ಪಟ್ಟಣದಲ್ಲಿ ಶಾಸಕ ಸುಭಾಷ ಗುತ್ತೇದಾರ ಅಧ್ಯಕ್ಷತೆಯಲ್ಲಿ ಶಾಲಾ ಆವರಣದಲ್ಲಿ ಆಳ್ವಾಸ್‌ ಸಾಂಸ್ಕೃತಿಕ ವೈಭವ ನಡೆಯಲಿದೆ. ಡಿ. 25ರಂದು ಸುರಪುರ ಪಟ್ಟಣದಲ್ಲಿ ಹಾಗೂ 26ರಂದು ವಿಜಯಪುರ ನಗರದಲ್ಲೂ ನಡೆಯಲಿದೆ.

ಇದಕ್ಕೂ ಮುಂಚೆ ಡಿ. 22ರಂದು ಬೀದರ್‌ ದಲ್ಲಿ ನಡೆಯಲಿದೆ ಎಂದರು. ಸಾಂಸ್ಕೃತಿಕ ವಾತಾವರಣದ ಮೂಲಕ ಆಧುನಿಕ ಶಿಕ್ಷಣದ ಹೊಸ ಆಯಾಮಗಳಿಗೆ ಪರಿಚಯಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಕಲಾ ಪ್ರಕಾರಗಳ ಮೂಲಕ ಶಿಕ್ಷಣದ ಜಾಡಿಗೆ ಹೊಸದೊಂದು ಶಕ್ತಿಯನ್ನು ನೀಡುವುದು ಪ್ರಮುಖ ಧ್ಯೇಯವಾಗಿದೆ. ದೇಶದಾದ್ಯಂತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಮನಸ್ಸುಗಳನ್ನು ಬೆಳೆಸುವ ಹಾಗೂ ಕಟ್ಟುವ ಮಹತ್ವದ ಕೆಲಸ ಈ ಕಾರ್ಯಕ್ರಮದ್ದಾಗಿದೆ. ಅಲ್ಲದೇ ಆಳ್ವಾಸ್‌ ನುಡಿಸಿರಿ ಖ್ಯಾತಿಯ ಡಾ| ಮೋಹನ್‌ ಆಳ್ವಾರದ್ದಾಗಿದೆ ಎಂದರು.

ರವಿ ಮುಕ್ಕಾ, ರಮೇಶ ತಿಪ್ಪನೂರ, ಉಮೇಶ ಶೆಟ್ಟಿ, ವಿದ್ಯಾಸಾಗರ ಕುಲಕರ್ಣಿ, ಜಂಟಿ ಕಾರ್ಯದರ್ಶಿ ಪ್ರವೀಣ ಜತ್ತನ್‌, ದಕ್ಷಿಣ ಕನ್ನಡ ಸಂಘದ ಅಧ್ಯಕ್ಷರು ಹಾಗೂ ಕೋಶಾಧಿಕಾರಿ ನರಸಿಂಹ್‌ ಮೆಂಡನ್‌ ಮುಂತಾದವರಿದ್ದರು. 

Advertisement

ಆಳ್ವಾಸ್‌ ನುಡಿ ವಿರಾಸತ್‌ ಸಮ್ಮೇಳನ ಮೂಲಕ ನಾಡಿನ ಕಲೆಗಾರಿಕೆ ಬೆಳೆಸುವ ಹಾಗೂ ಪ್ರೋತ್ಸಾಹಿಸುತ್ತಾ ಬರುತ್ತಿರುವ ಡಾ| ಮೋಹನ್‌ ಆಳ್ವಾರಂತೆ ಹೈಕ ಭಾಗದ ಕಲೆಗಳನ್ನು ನಾಡಿನುದ್ದಕ್ಕೂ ಬೆಳೆಸುವ ಹಾಗೂ ಕಲೆಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಈ ಭಾಗದ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯಮಿದಾರರು ಮುಂದೆ ಬರುವುದು ಅಗತ್ಯವೆನಿಸುತ್ತಿದೆ.
 ಡಾ| ಪಿ.ಎಸ್‌. ಶಂಕರ, ಖ್ಯಾತ ವೈದ್ಯ ಸಾಹಿತಿಗಳು

ಅಪರೂಪದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನೋಡಲು ಕಲಾಸಕ್ತರು ಕುಟುಂಬ ಸಮೇತ ಆಗಮಿಸಬೇಕು. ಕಾರ್ಯಕ್ರಮ ಸಂಜೆ 6 ಗಂಟೆಗೆ ಆರಂಭವಾಗುವುದು. ಮಾದರಿಯಾದ ಈ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಸಂಘದವರು, ಹೋಟೆಲ್‌ ಮಾಲೀಕರ ಸಂಘದವರು ಹಾಗೂ ಇತರರು ಪ್ರೋತ್ಸಾಹಿಸುತ್ತಿದ್ದಾರೆ.
 ಅಮರನಾಥ ಪಾಟೀಲ, ಅಧ್ಯಕ್ಷರು, ಎಚ್‌ಕೆಸಿಸಿಐ, ಕಲಬುರಗಿ

Advertisement

Udayavani is now on Telegram. Click here to join our channel and stay updated with the latest news.

Next