Advertisement

ಆಶ್ರಯ ಮನೆಗೆ ದಾಖಲೆ ಸಲ್ಲಿಸಲು ಅಲೆದಾಟ

12:17 PM Feb 07, 2018 | Team Udayavani |

ಆಳಂದ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವಸತಿ ರಹಿತ ಬಡವರಿಗೆ ವಾಜಪೇಯಿ ಆಶ್ರಯ ಯೋಜನೆ ಅಡಿ ಜಿ1 ಸಾವಿರ ಮನೆ ನಿರ್ಮಿಸಿ ಹಂಚಿಕೆ ಪ್ರಕ್ರಿಯೆ ಆರಂಭಿಸಲಾಗಿದ್ದು, ಬಡವರು ಮತ್ತು ಅನಕ್ಷರಸ್ಥರು ದಾಖಲೆ ಸಂಗ್ರಹಿಸಿ ಅರ್ಜಿ ಸಲ್ಲಿಸಲು ಹಲವು ದಿನಗಳಿಂದ ತೀವ್ರ ಪರದಾಡುತ್ತಿದ್ದಾರೆ.

Advertisement

ಜ.16ರಿಂದ 31ರ ವರೆಗೆ ಅರ್ಜಿ ಸ್ವೀಕರಿಸಲು ಕೋರಲಾಗಿತ್ತಾದರು, ಫೆ.5ರ ವರೆಗೆ ದಿನಾಂಕ ವಿಸ್ತರಿಸಿದರು ಸಹ ಬಡವರಿಗೆ ಸಕಾಲಕ್ಕೆ ಅಗತ್ಯ ದಾಖಲೆ ದೊರೆಯದೆ ಇರುವುದು ಅರ್ಜಿ ಸಲ್ಲಿಕೆಗೆ ಇನ್ನಷ್ಟು ಕಾಲಾವಕಾಶ ಕೇಳತೊಡಗಿದ್ದಾರೆ. ಅರ್ಜಿ ಸಲ್ಲಿಸುವುದರ ಜತೆಗೆ ಮನೆ ಕೊಡಿಸುವಂತೆ ಬಡವರು ಮಧ್ಯವರ್ತಿಗಳಿಗೆ ದುಂಬಾಲು ಬೀಳ ತೊಡಗಿದ್ದಾರೆ.

ಅರ್ಜಿ ಕರೆದಿರುವುದು ಇದೇ ಮೊದಲೆನ್ನಲ್ಲ. 2ನೇ ಬಾರಿಗೆ. ಹೀಗಾಗಿ ಹಿಂದೊಮ್ಮೆ 2012ರಲ್ಲಿ ಬರೀ ನಿವೇಶನ ಹಂಚಿಕೆಗಾಗಿ ಕರೆದ ಸಂದರ್ಭದಲ್ಲಿ ಸಾವಿರಾರು ಬಡವರು ಅರ್ಜಿ ಸಲ್ಲಿಸಿದ್ದಾರೆ. ಆಗಲೂ ದಾಖಲೆ ಸಂಗ್ರಹಿಸಲು ದಿನದ ಕೂಲಿ ಬಿಟ್ಟು ಕೈ ಸುಟ್ಟಿಕೊಂಡಿದ್ದಾರೆ.

ಅಂದು ಒಟ್ಟು 535 ಮಂದಿ ಫಲಾನುಭವಿಗಳ ಆಯ್ಕೆ ಮಾಡಿ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೂ ಆಯ್ಕೆ ಮಾಡಲಾದ ಫಲಾನುಭವಿಗಳ ಪಟ್ಟಿಯಲ್ಲಿ ಅನರ್ಹರು ಸೇರಿದ್ದಾರೆ ಎಂಬ ಆಕ್ಷೇಪ ವ್ಯಕ್ತವಾದ ಕಾರಣ ಸುಮಾರು ಆರು ವರ್ಷಗಳಿಂದಲೂ ನಿವೇಶನ ಹಂಚಿಕೆ ಕಾರ್ಯ ನನೆಗುದ್ದಿಗೆ ಬಿದ್ದಿದೆ.

ಪುರಸಭೆಯಿಂದ ಮತ್ತೂಮ್ಮೆ ಅರ್ಜಿ ಕರೆದಿರುವುದಿರಿಂದ ಹಿಂದೆ ಅರ್ಜಿ ಸಲ್ಲಿಸಿ ಪಟ್ಟಿಯಲ್ಲಿ ಆಯ್ಕೆಯಾದವರು ಸಹ ಹೊಸಬರೊಂದಿಗೆ ಮತ್ತೂಮ್ಮೆ ಅರ್ಜಿ ಸಲ್ಲಿಸುತ್ತಿರುವುದು ಗೊಂದಲದ ಗೂಡಾಗಿ ಪರಿಣಮಿಸಿದೆ. ಅಲ್ಲದೆ, ಬಡವರು ಮನೆ, ನಿವೇಶನ ಯಾವಾಗ ಕೊಡುತ್ತಾರೆ. ಎಷ್ಟು ಬಾರಿ ಅರ್ಜಿ ಕೊಡಬೇಕು. ಸುಮನ್ನೆ ರೊಕ್ಕ ಹಾಳಾಗುತ್ತಿದೆ ಎಂದು ಅಳಲು ತೋಡಿಕೊಂಡು ಆಡಳಿತ ವ್ಯವಸ್ಥೆ ವಿರುದ್ಧ ಹಿಡಿಶಾಪ ಹಾಕತೊಡಗಿದ್ದಾರೆ.

Advertisement

ಸರ್ವೆಯಲ್ಲಿದ್ದರೆ ಮನೆ: ಈಗಾಗಲೇ ಎಚ್‌ಎಫ್‌ಎ ಅಡಿ ಕೈಗೊಂಡ ಸರ್ಕಾರಿ ಅಧಿಕಾರಿಗಳ ಸರ್ವೆಯಲ್ಲಿ ವಸತಿ ರಹಿತರ ಹೆಸರು ನೋಂದಾಯಿಸಿದವರು ಮತ್ತು ನಗರ ವಾಸಿಗಳಾಗಿದ್ದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿತ್ತಾರೆ. ಆದರೆ ಸರ್ವೆಯಲ್ಲಿ ಹೆಸರಿದೆಯೋ ಇಲ್ಲವೋ ಗೊತ್ತಿಲ್ಲ. ಆದರೂ ಬಡವರು ಅರ್ಜಿ ಸಲ್ಲಿಸಲು ಮುಂದಾಗಿ ಕೈಸುಟ್ಟುಕೊಳ್ಳುತ್ತಿದ್ದಾರೆ. 

ಹಿಂದಿನ 535 ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಪುನರ್‌ ಸಮೀಕ್ಷೆ ನಡೆಸಿದಾಗ 27 ಜನರು ಅನರ್ಹರಾಗಿದ್ದರು. ಇನ್ನೂ 100 ಜನರ ಅರ್ಜಿಗಳೆ ಇಲ್ಲ ಎಂಬುದು ಅ ಧಿಕಾರಿ ಮಾಹಿತಿ ಪ್ರಕಾರ ಕಳೆದು ಹೋಗಿವೆ. ಅನರ್ಹರನ್ನು ಹೊರತುಪಡಿಸಿ ಮೊದಲಿನ ಫಲಾನುಭವಿಗಳ ಪಟ್ಟಿ ಒಳಗೊಂಡು ಹೊಸದಾಗಿ 475 ಬಡವರ ಅರ್ಜಿ ಕರೆದು ಒಟ್ಟು ಒಂದು ಸಾವಿರ ಜಿ+1 ಮನೆಗಾಗಿ ಫಲಾನುಭವಿಗಳ ಪಟ್ಟಿ ಸಿದ್ಧಪಡಿಸಲು ಅರ್ಜಿ ಕರೆಯಲಾಗಿದೆ. 

ಪಟ್ಟಣದಲ್ಲಿ ಕಳೆದೊಂದು ವಾರದಿಂದ ಅರ್ಜಿಗೆ ಸಂಬಂಧಿಸಿ ಅದಾಯ ಮತ್ತು ಜಾತಿ ಪ್ರಮಾಣ ಪತ್ರ, ವಾಸಸ್ಥಳ, ಚುನಾವಣೆ ಗುರುತಿನ ಚೀಟಿ, ಬಾಂಡ್‌ ಪ್ರತಿ, ಆಧಾರ್‌ ಹೀಗೆ ಅಗತ್ಯ ದಾಖಲೆ ಸಂಗ್ರಹಿಸಿ ಅರ್ಜಿ ಸಲ್ಲಿಸಲು ನಿತ್ಯ ನೆಮ್ಮದಿ ಕೇಂದ್ರ, ಪುರಸಭೆ ಕಚೇರಿಗೆ ಅಲೆಯುತ್ತಿದ್ದಾರೆ. ದಾಖಲೆ ಸಂಗ್ರಹಿಸಲು ಅನಕ್ಷರಸ್ಥ ವಯೋವೃದ್ಧರು, ಮಹಿಳೆಯರು ಕಚೇರಿಗಳಿಗೆ ಎಡತಾಕುತ್ತಿರುವುದು ಹೆಚ್ಚಾಗಿ ಕಂಡು ಬಂದಿದೆ.

ಅರ್ಜಿ ಸಲ್ಲಿಕೆಗೆ ನೂರಾರು ಮಂದಿ ಮುಂದಾಗಿದ್ದರಿಂದ ಝರಾಕ್ಸ್‌ ಅಂಗಡಿ ಟೈಪ್‌ರೈಟರ್‌ಗಳಿಗೆ ಸುಗ್ಗಿಯಾಗಿದೆ. ಆದರೆ ಅರ್ಜಿ ದಾಖಲೆಯಾವು. ಎಲ್ಲಿ ಸಲ್ಲಿಸಬೇಕು. ಹೇಗೆ ಪಡೆಯಬೇಕು ಎಂಬುದು ಗೊತ್ತಿಲ್ಲದೆ ಜನರು ಮನೆ ಕೊಡುತ್ತಾರೋ ಇಲ್ಲ ಎಂಬ ಚಿಂತೆಯಲ್ಲಿದ್ದಾರೆ.

2012ರಿಂದ ಫಲಾನುಭವಿಗಳಿಗೆ ನಿವೇಶನ ದೊರೆಯಲು ವಿಳಂಬವಾಯಿತಾದರು. ಮತ್ತೂಂದಡೆ ಅವರಿಗೆ ಸರ್ಕಾರ ಹೊಸದಾಗಿ ಆರಂಭಿಸಿದ ವಸತಿ ರಹಿತರಿಗೆ ಮನೆಗಳ ನೀಡುವ ಯೋಜನೆಯಲ್ಲಿ ಈಗ ನೇರವಾಗಿ ವಾಸಿಸಲು ಕಟ್ಟಿದ ಮನೆಯೇ ನೀಡಲಾಗುವುದು. ಪಟ್ಟಣದ ಶರಣನಗರ ಸಮೀಪದಲ್ಲಿ ಮಾಜಿ ಸಂಸದ ಡಾ| ಬಿ.ಜಿ. ಜವಳಿ ಅವರು ನೀಡಿದ ಜಮೀನಿನ ಸರ್ವೆ ನಂ.750ರಲ್ಲಿ ಬಹುಮಹಡಿ (ಅರ್ಪಾಟ್‌ಮೆಂಟ್‌) ನಿರ್ಮಿಸಿ ಸಾವಿರ ಫಲಾನುಭವಿಗಳಿಗೆ ಒಂದೆ ಸೊರಿನಡಿ ಮನೆಗಳ ನೀಡುವ ಗುರಿಹೊಂದಲಾಗಿದೆ ಎಂದು ಮುಖ್ಯಾಧಿಕಾರಿ, ಆಶ್ರಯ ಸಮಿತಿ ಕಾರ್ಯದರ್ಶಿ ಚಂದ್ರಕಾಂತ ಪಾಟೀಲ ತಿಳಿಸಿದ್ದಾರೆ.

2012-13ನೇ ಸಾಲಿನಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ 535 ಫಲಾನುಭವಿಗಳ ಪಟ್ಟಿಯಲ್ಲಿ ಪುನರ್‌ ಸಮೀಕ್ಷೆ ನಡೆಸಿದಾಗ 27 ಜನರು ಅನರ್ಹರಾಗಿದ್ದಾರೆ. ಇನ್ನೂ 100 ಜನರ ಅರ್ಜಿಗಳೆ ಇಲ್ಲ. ಈಗ ಅನರ್ಹರನ್ನು ಹೊರತುಪಡಿಸಿ ಮೊದಲಿನ ಫಲಾನುಭವಿಗಳ ಪಟ್ಟಿ ಒಳಗೊಂಡು ಹೊಸದಾಗಿ ಅರ್ಜಿ ಕರೆದು 475 ಫಲಾನುಭವಿಗಳ ಆಯ್ಕೆ ಸೇರಿ ಒಟ್ಟು ಸಾವಿರ ಫಲಾನುಭವಿಗಳ ಪಟ್ಟಿಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದರು. 

ಯೋಜನೆ ಅಡಿ ಹಿಂದೆ ಆಯ್ಕೆಯಾದ 535 ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರ ನೀಡಬೇಕು. ಸರ್ವೇ ನಂ. 750ರಲ್ಲಿ ರಾಜೀವ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತದಿಂದ 2014ರಲ್ಲೆ ಫಲಾನುಭವಿಗಳ ಪಟ್ಟಿ ಮಂಜೂರಿ ಪಡೆದು 2016ರಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಪುರಸಭೆ ಕಚೇರಿಗೆ ಕಳುಹಿದರೂ ಇಲ್ಲಿಯವರೆಗೆ ಹಕ್ಕುಪತ್ರ ನೀಡಿಲ್ಲ.

ಈಗ ಇದೇ ಸರ್ವೇ ನಂ.750ರಲ್ಲಿ ವಾಜಪೇಯಿ ನಗರ ಆಶ್ರಯ ಯೋಜನೆಯಲ್ಲಿ ಮನೆಗಳಿಗೆ ಅರ್ಜಿ ಕರೆದಿದ್ದಾರೆ. ಮೊದಲಿನ 535 ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಆ ಮೇಲೆ ಹೊಸ ಅರ್ಜಿ ಸ್ವೀಕರಿಸಲು ಪುರಸಭೆ ಮುಖ್ಯಾಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಆದೇಶಿಸಬೇಕು. ಇಲ್ಲವಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಎಚ್ಚರಿಸಿದ್ದಾರೆ.

„ಮಹಾದೇವ ವಡಗಾಂವ 

Advertisement

Udayavani is now on Telegram. Click here to join our channel and stay updated with the latest news.

Next