ಠಾಣೆ(ಮಹಾರಾಷ್ಟ್ರ): ಮಹಾಮಳೆಗೆ ಮುಂಬೈ ಅಕ್ಷರಶಃ ತತ್ತರಿಸಿದೆ. ಠಾಣೆ ಹಾಗೂ ಪಾಳ್ಘರ್ ಜಿಲ್ಲೆಗಳಲ್ಲಿ ಮಂಗಳವಾರವೂ ಕುಂಭದ್ರೋಣ ಮಳೆ ಮುಂದುವರಿದಿದ್ದು, ಬಹುತೇಕ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳಿಗೂ ನೀರು ನುಗ್ಗಿದ್ದರಿಂದ ವಾಹನ ಸವಾರರೂ ತೀವ್ರ ತೊಂದರೆ ಅನುಭವಿಸಿದ್ದಾರೆ.
ಈ ನಡುವೆ ಶಾಲಾ ವಾಹನದ ಚಾಲಕನ ಸಮಯ ಪ್ರಜ್ಞೆಯಿಂದಾಗಿ, ಕಾಲುವೆಯಲ್ಲಿ ಹರಿಯುತ್ತಿದ್ದ ರಭಸವಾದ ನೀರಿನಲ್ಲಿ ಸಿಲುಕಿ ಕೊಂಡಿದ್ದ ನಾಲ್ವರು ಮಕ್ಕಳು ಪ್ರಾಣಾಪಾಯ ದಿಂದ ಪಾರಾದ ಘಟನೆ ಪಾಳ್ಘರ್ ಜಿಲ್ಲೆಯ ವಿರಾರ್‌ಗೆ ಸಮೀಪದ ನಾರಂಗಿ ಎಂಬಲ್ಲಿ ನಡೆದಿದೆ. ಆದರೆ, ಮಕ್ಕಳನ್ನು ಬದುಕಿಸಿದ ಚಾಲಕ ತಾನೇ ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ.
ಪರೋಲ್‌ನಿಂದ ವಸಾಯಿಗೆ ಶಾಲಾ ಮಕ್ಕಳನ್ನು ತಮ್ಮ ಬಸ್‌ನಲ್ಲೇ ಚಾಲಕ ಪ್ರಕಾಶ್ ಪಾಟೀಲ್ (40) ಕರೆದೊಯ್ಯುತ್ತಿದ್ದರು. ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ನಾಲೆಯ ಸಮೀಪಕ್ಕೆ ಬರುತ್ತಿದ್ದಂತೆ, ತಮ್ಮ ಬಸ್ ದುರಸ್ತಿಗೀಡಾದ ಕಾರಣ, ಬಸ್ಸನ್ನು ನಿಲ್ಲಿಸಿ ಬೇರೊಂದು ವಾಹನಕ್ಕೆ ಮಕ್ಕಳನ್ನು ಹತ್ತಿಸುತ್ತಿದ್ದರು. ಈ ವೇಳೆ, ಕೆಲವು ಮಕ್ಕಳು ಬ್ಯಾಲೆನ್ಸ್ ಕಳೆದುಕೊಂಡು ಇನ್ನೇನು ನಾಲೆಗೆ ಬೀಳುತ್ತಾರೆ ಎಂದಿದ್ದಾಗ ಚಾಲಕ ಪ್ರಕಾಶ್, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಮಕ್ಕಳನ್ನು ರಕ್ಷಿಸಿದ್ದಾರೆ. ಆದರೆ, ನೀರಿನ ರಭಸಕ್ಕೆ ತಾವೇ ಕೊಚ್ಚಿಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಥಾಣೆಯಲ್ಲಿ ನಡೆದ ಪ್ರತ್ಯೇಕ ಘಟನೆಯಲ್ಲಿ ವಿಜಯ್ ಪವಾರ್ (10) ಎಂಬ ಬಾಲಕ ನೀರಿನಲ್ಲಿ ಕೊಚ್ಚಿಹೋಗಿರು ವುದಾಗಿ ಹೇಳಿದ್ದಾರೆ. ಇದೇ ವೇಳೆ, ಸಿಡಿಲು ಬಡಿದ ಪರಿಣಾಮ ಜಾರ್ಖಂಡ್‌ನಲ್ಲಿ ಐವರು ಮೃತಪಟ್ಟಿದ್ದಾರೆ.