Advertisement
ಸರಕಾರವು ಕೊಡಗಿನಲ್ಲಿ ಸುಮಾರು 10 ಕಡೆ ನಿರಾಶ್ರಿತರಿಗೆ ಮನೆ ನಿರ್ಮಾಣ ಮಾಡಲು ಜಾಗ ಗುರುತಿಸಿದೆ. ಎರಡನೇ ಮೊಣ್ಣಂಗೇರಿ ಮತ್ತು ಜೋಡುಪಾಲದ ನಿರಾಶ್ರಿತರಿಗೆ ಮದೆನಾಡು ಹಾಗೂ ಕೊಡಗು ಸಂಪಾಜೆಯ ಶಾಲೆ ಬಳಿ ಈಗಾಗಲೇ ಜಾಗ ಗುರುತಿಸಲಾಗಿದ್ದು, ಅಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಇದರಿಂದ ನಿರಾಶ್ರಿತರು ಸ್ವಲ್ಪ ಮಟ್ಟಿಗೆ ನಿರಾಳಗೊಂಡಿದ್ದಾರೆ.
ಮಹಾ ಮಳೆಯಿಂದ ನಿರಾಶ್ರಿತರಾದ ಕೊಡಗಿನ 845 ಕುಟುಂಬಗಳಿಗೆ ತಲಾ 9.85 ಲಕ್ಷ ರೂ. ವೆಚ್ಚದಲ್ಲಿ ಎರಡು ಬೆಡ್ ರೂಮ್‌ಗಳಿರುವ ಸುಸಜ್ಜಿತ ಮನೆಗಳನ್ನು ನಿರ್ಮಿಸಲಾಗುವುದು. ಡಿ. 8ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ ಖಾದರ್ ಬೆಂಗಳೂರಿನಲ್ಲಿ ಗುರುವಾರ ತಿಳಿಸಿದ್ದಾರೆ. ನಿರಾಶ್ರಿತರು ಬೀದಿಗೆ ಬೀಳಬಾರದು ಎಂಬ ಉದ್ದೇಶದಿಂದ ಮಾನವೀಯ ನೆಲೆಯಲ್ಲಿ ಸರಕಾರ ತಿಂಗಳಿಗೆ 10 ಸಾವಿರ ರೂ. ಮನೆ ಬಾಡಿಗೆ ನೀಡುತ್ತಿದೆ. 815 ಕುಟುಂಬದವರಿಗೆ ಈಗಾಗಲೇ ತಲಾ 50 ಸಾವಿರ ರೂ. ಹಸ್ತಾಂತರಿಸಲಾಗಿದೆ ಎಂದೂ ಹೇಳಿದ್ದಾರೆ. ಆರು ಮಾದರಿ
ಮಡಿಕೇರಿ ಆರ್‌ಟಿಒ ಕಚೇರಿ ಪಕ್ಕ 6 ಮಾದರಿ ಮನೆಗಳ ನಿರ್ಮಾಣ ಕೆಲಸ ನಡೆದಿದೆ. ಈ ಮಾದರಿ ಮನೆಗಳಂತೆ ನಿರಾಶ್ರಿತರಿಗೆ ಗುರುತಿಸಲಾದ ಜಾಗದಲ್ಲಿ ಒಟ್ಟು ಐದು ಏಜೆನ್ಸಿಗಳು ಮನೆ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಲಿವೆ. ಕೊಡಗು ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ 24 ಕುಟುಂಬ ವಾಸವಿದ್ದು 13 ಶಾಲಾ ಮಕ್ಕಳ ಸಹಿತ 73 ಜನರಿದ್ದಾರೆ. ದ.ಕ. ಸಂಪಾಜೆ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ 10 ಕುಟುಂಬ ವಾಸವಿದ್ದು 9 ಶಾಲಾ ಮಕ್ಕಳ ಸಹಿತ 40 ಜನರಿದ್ದಾರೆ. ವೃದ್ಧೆಯೂ ಈ ಕೇಂದ್ರದಲ್ಲಿದ್ದಾರೆ.
Related Articles
ನಿರಾಶ್ರಿತರಾದವರಿಗೆ ಗುರುತಿಸ ಲಾದ ಜಾಗದಲ್ಲಿ ಮನೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಜೋಡುಪಾಲ ಮತ್ತು ಎರಡನೇ ಮೊಣ್ಣಂಗೇರಿ ಭಾಗದ ನಿರಾಶ್ರಿತರಿಗೆ ಕೊಡಗು ಸಂಪಾಜೆ ಮತ್ತು ಮದೆನಾಡಿನಲ್ಲಿ ಮನೆ ನಿರ್ಮಾಣ ಮಾಡಿ ಕೊಡಲಾಗುವುದು. ಈಗಾಗಲೇ ಮಾದರಿ ಮನೆಗಳ ನಿರ್ಮಾಣ ಕಾರ್ಯ ನಡೆದಿದೆ. ನಿರಾಶ್ರಿತರು ಯಾವುದೇ ಆತಂಕಗೊಳ್ಳಬೇಕಾಗಿಲ್ಲ.
-ಶ್ರೀವಿದ್ಯಾ, ಕೊಡಗು ಜಿಲ್ಲಾಧಿಕಾರಿ
Advertisement
ತೇಜೇಶ್ವರ್ ಕುಂದಲ್ಪಾಡಿ