Advertisement
ಸರಕಾರದ ಆದೇಶದಂತೆ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಸೋಮವಾರದಿಂದ ಇ-ಪಾವತಿ ಕಾರ್ಯಾರಂಭಿಸಲಾಗಿದೆ. ಇದಕ್ಕೆ ಇಲ್ಲಿನ ವರ್ತಕರು ಅಸಹಕಾರ ವ್ಯಕ್ತಪಡಿಸಿದ್ದು ಅಲ್ಲದೆ ಜು.27ರಿಂದ ವಹಿವಾಟು ಬಂದ್ ಮಾಡಿ ಪ್ರತಿಭಟಿಸಲು ನಿರ್ಧರಿಸಿದ್ದಾರೆ. ಎಪಿಎಂಸಿಯ ಆಡಳಿತ ಮಂಡಳಿ ಸರಕಾರದ ಸೂಚನೆಯಂತೆ ಮಾರುಕಟ್ಟೆಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.
Related Articles
Advertisement
ಖರೀದಿಗೆ ಟಿಎಪಿಸಿಎಂ ನೇಮಕ: ಎಪಿಎಂಸಿಗೆ ರೈತರು ತರುವ ಉತ್ಪನ್ನಗಳನ್ನು ಖರೀದಿಸಲು ವರ್ತಕರು ಹಿಂದೇಟು ಮಾಡಿದರೆ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳವನ್ನು ಖರೀದಿ ಸಂಸ್ಥೆಯಾಗಿ ನೇಮಿಸಿಕೊಳ್ಳಲು ಸರಕಾರ ಸೂಚಿಸಿದೆ.
ಅದರಂತೆ ಹುಬ್ಬಳ್ಳಿ ಎಪಿಎಂಸಿಯಲ್ಲಿ ಮಾರ್ಕೆಟಿಂಗ್ ಫೆಡರೇಶನ್ ಮುಖಾಂತರ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘವನ್ನು ನೇಮಿಸಲಾಗಿದೆ. ಈ ಸಂಘದ ಮೂಲಕ ಸೋಮವಾರ ಹೆಸರು, ಸೋಯಾಬಿನ್ ಖರೀದಿ ಮಾಡಲಾಗಿದೆ ಎಂದು ಸಹಕಾರ ಸಂಘಗಳಿಂದ ಎಪಿಎಂಸಿಗೆ ಆಯ್ಕೆಯಾಗಿರುವ ರಘುನಾಥ ಕೆಂಪಲಿಂಗನಗೌಡರ ತಿಳಿಸಿದರು.
ವರ್ತಕರ ಆಕ್ಷೇಪ: ಒಮ್ಮೇಲೆ ಇ-ಪಾವತಿ ವ್ಯವಸ್ಥೆ ಜಾರಿ ಮಾಡಿರುವುದರಿಂದ ವರ್ತಕರಿಗೆ ತುಂಬಾ ಅನಾನುಕೂಲವಾಗಿದೆ. ರೈತರಿಂದ ಉತ್ಪನ್ನ ಖರೀದಿಸಿದ ಮೇಲೆ ಒಂದೇ ದಿನದಲ್ಲಿ ಅವರಿಗೆ ಹಣ ಪಾವತಿ ಮಾಡಲು ಎಲ್ಲಿಂದ ಇಡಿಗಂಟು ತರಬೇಕು. ಇ-ಪಾವತಿ ಜಾರಿ ಮಾಡುವುದಾದರೆ ಜಿಎಸ್‌ಟಿ ರೀತಿ ರಾಜ್ಯಾದ್ಯಂತ ಜಾರಿಗೊಳಿಸಲಿ.
ಅದನ್ನು ಬಿಟ್ಟು ಸರಕಾರವು ತನ್ನ ಪ್ರಯೋಗವನ್ನು ನಮ್ಮ ಮೇಲಷ್ಟೆ ಯಾಕೆ ಮಾಡಬೇಕು. ಈ ಭಾಗದ ರೈತರು ಬೇರೆ ಬೇರೆ ಎಪಿಎಂಸಿಗಳಿಗೆ ಹೋಗುತ್ತಾರೆ. ಆಗ ನಮಗಷ್ಟೇ ದೊಡ್ಡ ಹೊಡೆತ ಬೀಳುತ್ತದೆ. ಇದು ಸರಕಾರದ ನೀತಿಯೂ ಅಲ್ಲವೆಂದು ವರ್ತಕರ ಕ್ಷೇತ್ರದ ಚನ್ನಬಸಪ್ಪ ಹೊಸಮನಿ, ಎಪಿಎಂಸಿ ನಿರ್ದೇಶಕ ಸುರೇಶ ಕಿರೇಸೂರ ಹೇಳಿದರು.
ಇ-ಪಾವತಿ ಜಾಗೃತಿಗೆ ತಂಡ ರಚನೆ: ಇ-ಪಾವತಿ ಜಾರಿ ಕುರಿತು ರೈತರಿಗೆ ಮಾಹಿತಿ ನೀಡಲು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಎಪಿಎಂಸಿ ಆಡಳಿತ ಮಂಡಳಿಯು ಏಳು ತಂಡಗಳನ್ನು ರಚಿಸಿದೆ. ಪ್ರತಿ ತಂಡದಲ್ಲಿ ಉಪ ನಿರ್ದೇಶಕ ಸೇರಿದಂತೆ ಐದು ಜನರು ಇರುತ್ತಾರೆ. ಒಂದೊಂದು ತಂಡವು ಆಯಾ ಕ್ಷೇತ್ರದ ಎಪಿಎಂಸಿ ಸದಸ್ಯರ ನೇತೃತ್ವದಲ್ಲಿ 2 ಕ್ಷೇತ್ರಗಳಲ್ಲಿ ಸಂಚರಿಸಿ ಜಾಗೃತಿ ಮೂಡಲಿಸಲಿದೆ.