ಬಂಗಾರಪೇಟೆ: ಪಟ್ಟಣದ ದೇಶಿಹಳ್ಳಿಯಲ್ಲಿ 15 ದಿನದಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಮಹಿಳೆಯರು ಖಾಲಿ ಬಿಂದಿಗೆ ಗಳೊಂದಿಗೆ ನೀರುಗಂಟಿ, ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೆರೆಯಲ್ಲಿ ನೀರಿಲ್ಲದ ಸಮಯದಲ್ಲಿ ಸರಿಯಾಗಿ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈಗ ಕೆರೆ ತುಂಬಾ ನೀರು ಇದ್ದರೂ ನಲ್ಲಿಯಲ್ಲಿ ನೀರಿಲ್ಲ. ಎಲ್ಲಾ ಕಡೆ ಹಾಹಾಕಾರ ಎದ್ದಿದೆ. ನೀರು ಪೂರೈಸುವಲ್ಲಿ ಪುರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.
ಅಧಿಕಾರಿಗಳು, ಪುರಸಭೆ ಸದಸ್ಯರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಅವರ ಬೇಜವಾಬ್ದಾರಿಯಿಂದಲೇ ನೀರಿನ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದರು.
ಪುರಸಭೆಯವರು ನಾವು ನಿರಂತರವಾಗಿ ನೀರು ಪೂರೈಸುತ್ತೇವೆ ಎಂದು ಸುಳ್ಳು ಭರವಸೆಯನ್ನು ನೀಡುತ್ತ ಬಂದಿದ್ದಾರೆ. ಈಗಿನ ಪುರಸಭೆ ಆಡಳಿತ ಈಗಲಾದರೂ ಸಮರ್ಪಕ ವಾಗಿ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ದೇಶಿಹಳ್ಳಿಯಿಂದ ಕಾಲ್ನಡಿಗೆ ಮೂಲಕ ಪುರಸಭೆಗೆ ಬಂದು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಸ್ಥಳೀಯರಾದ ಅಮರಮ್ಮ ಮಾತನಾಡಿ, ನೀರಿನ ಸಮಸ್ಯೆ ತುಂಬಾ ಕಾಡುತ್ತಲಿದೆ. ಈಗ ಮಳೆಗಾಲ ಆರಂಭವಾಗಿದೆ. ಚರಂಡಿಗಳು ಸ್ವಚ್ಛತೆ ಇಲ್ಲದೆ ದುರ್ವಾಸನೆ, ಕಲುಷಿತ ನೀರು ಹರಿದು ಬರುತ್ತಿರುವುದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ನಮ್ಮನ್ನು ಕಾಡುತ್ತಲಿದೆ. ಅಲ್ಲದೆ, ಚರಂಡಿ ವ್ಯವಸ್ಥೆ ಇರುವ ಕಡೆ ಹೂಳು ತುಂಬಿಕೊಂಡಿವೆ ಎಂದು ಆರೋಪಿಸಿದರು.
ಸ್ಥಳೀಯರಾದ ಪ್ರಭಾಕರ್‌ರಾವ್ ಮಾತ ನಾಡಿ, ನಾವು ಎಷ್ಟು ಸಲ ಪುರಸಭೆಗೆ ದೂರು ನೀಡಿದರೂ ನೀರಿನ ಸಮಸ್ಯೆಯನ್ನು ಬಗೆಹರಿ ಸುತ್ತಿಲ್ಲ, ವಾಟರ್‌ಮ್ಯಾನ್‌ಗೆ ದೂರವಾಣಿ ಕರೆ ಮಾಡಿದರೆ ಫೋನನ್ನು ಸ್ವೀಕರಿಸುವುದಿಲ್ಲ ಎಂದರು.
ಈಗಲೇ ಇಂತಹ ಸ್ಥಿತಿ ಇದೆ. ಬೇಸಿಗೆ ಸಮಯದಲ್ಲಿ ಇನ್ನೆಷ್ಟು ಪರದಾಡಬೇಕೋ ಗೊತ್ತಿಲ್ಲ. ಆದ್ದರಿಂದ ಪುರಸಭೆಯ ನೀರಿನ ಸಮಸ್ಯೆಯನ್ನು ತಕ್ಷಣ ಬಗ್ಗೆ ಹರಿಸಬೇಕು. ಇಲ್ಲಿನ ವಾಟರ್ ಮ್ಯಾನ್ ಸಹ ಬೇರೆ ಕಡೆ ವರ್ಗಾಯಿಸಬೇಕೆಂದು ಒತ್ತಾಯ ಮಾಡಿದರು.