Advertisement

Dakshinakannada: ಬಿಗಡಾಯಿಸುತ್ತಿದೆ ಕುಡಿಯುವ ನೀರಿನ ಸಮಸ್ಯೆ

11:11 PM Apr 13, 2023 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಶೀಘ್ರ ಬೇಸಗೆ ಮಳೆ ಸುರಿಯದಿದ್ದಲ್ಲಿ ಎಪ್ರಿಲ್‌ ಅಂತ್ಯ, ಮೇ ವೇಳೆಗೆ ಹಲವೆಡೆ ನೀರಿಗೆ ಹಾಹಾಕಾರ ಉಂಟಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿವೆ.

Advertisement

ಕಳೆದ ವರ್ಷ ಬೇಸಗೆ ಮಳೆ ಬೇಗ ಆರಂಭವಾದ ಹಿನ್ನೆಲೆಯಲ್ಲಿ ಸಮಸ್ಯೆಯಾಗಿರಲಿಲ್ಲ. ಆದರೆ ಈ ಬಾರಿ ಸದ್ಯ ಒಂದೆರಡು ಮಳೆ ಮಾತ್ರ ಸುರಿದಿದೆ. ಕೆಲವು ಕಡೆಗಳಲ್ಲಿ ತೋಡು, ತೊರೆಗಳಿಗೆ ಕಟ್ಟಿರುವ ಕಿಂಡಿ ಅಣೆಕಟ್ಟುಗಳೇ ತಕ್ಕಮಟ್ಟಿಗೆ ನೀರಿನ ಸಮಸ್ಯೆ ದೂರವಾಗಿಸಿವೆ. ಆದರೆ ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ಅಣೆಕಟ್ಟುಗಳಲ್ಲಿ ಸಂಗ್ರಹವಿರುವ ನೀರು ಆವಿಯಾಗುತ್ತಿದೆ.

ಸಂಗಬೆಟ್ಟು ಖಾಲಿಯಾದ ಅಣೆಕಟ್ಟು
ಬಹುಗ್ರಾಮ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಬಂಟ್ವಾಳ ತಾಲೂಕಿನ ಸಂಗಬೆಟ್ಟುವಿನಲ್ಲಿರುವ ಫಲ್ಗುಣಿ ನದಿಯ ಅಣೆಕಟ್ಟಿನಲ್ಲಿ ನೀರು ಖಾಲಿಯಾಗಿದ್ದು, ಇದರಿಂದ ಸುತ್ತಮುತ್ತಲಿನ 15 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಂಟ್ವಾಳ ನಗರಕ್ಕೆ ನೀರು ಪೂರೈಕೆ ಮಾಡುವ ಜಕ್ರಿಬೆಟ್ಟು ಜ್ಯಾಕ್‌ವೆಲ್‌ವೆಲ್‌ನಲ್ಲಿ ಸದ್ಯ ನೀರಿದೆ. ಆದರೆ ಮಳೆ ಸುರಿಯದಿದ್ದರೆ ಪರಿಸ್ಥಿತಿ ಕಷ್ಟಕರವಾಗಲಿದೆ.

ನೇತ್ರಾವತಿ ಹರಿವು ಕ್ಷೀಣ
ಪುತ್ತೂರು ನಗರ ವ್ಯಾಪ್ತಿಯಲ್ಲಿ ಕೆಲವು ಪ್ರದೇಶಗಳಿಗೆ ಟ್ಯಾಂಕರ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಬೋರ್‌ವೆಲ್‌ಗ‌ಳನ್ನು ದುರಸ್ತಿ ಮಾಡಿಸಿ ಸಿದ್ಧಗೊಳಿಸಲಾಗಿದೆ. ನಗರಸಭೆ ವ್ಯಾಪ್ತಿಗೆ ನೀರು ಪೂರೈಕೆ ಮಾಡುವ ನೆಕ್ಕಿಲಾಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಬಾವಿ, ಕೊಳವೆ ಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಮಳೆ ಸುರಿಯದಿದ್ದರೆ ಪುತ್ತೂರು ಭಾಗದಲ್ಲೂ ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಹರಿಯುವಿಕೆ ಕ್ಷೀಣಿಸಿದೆ. ಇದರಿಂದಾಗಿ ನದಿ ಪಾತ್ರದ ಬಾವಿ, ಕೆರೆಗಳಲ್ಲಿ ನೀರು ತಳಮುಟ್ಟಿದ್ದು, ನದಿಯನ್ನು ಆಶ್ರಯಿಸಿ ಕೃಷಿ ಮಾಡುತ್ತಿದ್ದ ರೈತರು ಮಳೆಗಾಗಿ ಎದುರು ನೋಡುತ್ತಿದ್ದಾರೆ.

ಪಯಸ್ವಿನಿ ಕೆಂಪು ನೀರು
ಸುಳ್ಯಭಾಗದಲ್ಲಿ ಪಯಸ್ವಿನಿಗೆ ಪ್ರತಿ ವರ್ಷದಂತೆ ಈ ಬಾರಿಯೂ ನಾಗಪಟ್ಟಣದಲ್ಲಿ ಮರಳಿನ ಕಟ್ಟ ಕಟ್ಟಿ ನಗರಕ್ಕೆ ನೀರು ಪೂರೈಕೆ ನಡೆಯುತ್ತಿದೆ. ಶುದ್ಧೀಕರಣ ಘಟಕ ಹಳೆಯದಾಗಿದ್ದು, ಪರಿಣಾಮ ನಳ್ಳಿಯಲ್ಲಿ ಪೂರೈಕೆಯಾಗುವ ನೀರಿನ ಬಣ್ಣ ಯಾವಾಗಲೂ ಕೆಂಪೇ ಇರುತ್ತದೆ. ಹೊಸ ಕಿಂಡಿ ಅಣೆಕಟ್ಟು ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಪಯಸ್ವಿನಿಯಲ್ಲೂ ನೀರಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮಾಂತರ ಭಾಗದಲ್ಲಿ ಸಮಸ್ಯೆ ಕಡಿಮೆ ಇದೆ. ಸುಬ್ರಹ್ಮಣ್ಯದಲ್ಲಿ ಸದ್ಯ ಸಮಸ್ಯೆಯಾಗಿಲ್ಲ.

Advertisement

ಕಿಂಡಿ ಅಣೆಕಟ್ಟಿನಿಂದ ಒಸರು
ಬೆಳ್ತಂಗಡಿಯಲ್ಲೂ ಕೆಲವೆಡೆ ನೀರಿನ ಸಮಸ್ಯೆ ಇದೆ. ಬಹುತೇಕ ಕಡೆಗಳಲ್ಲಿ ಬೋರ್‌ವೆಲ್‌ ನೀರು ಪೂರೈಕೆ ಮಾಡಲಾಗುತ್ತಿದೆ. ಕೊಳವೆಬಾವಿ, ಬಾವಿ, ಕಿಂಡಿ ಅಣೆಕಟ್ಟುಗಳೇ ನೀರಿನ ಮೂಲಗಳು. ಕಿಂಡಿ ಅಣೆಕಟ್ಟು ಹೆಚ್ಚಾಗಿರುವುದರಿಂದ ನೀರಿನ ಒಸರು ಕೆಲವೆಡೆ ಹೆಚ್ಚಾಗಿ, ಮೂಲಗಳು ಬರಿದಾಗಿಲ್ಲ. ಮಳೆ ನಿರಂತರವಾಗಿ ಸುರಿದರೆ ಸಮಸ್ಯೆ ದೂರವಾಗಲಿದೆ.

ಮೂಲ್ಕಿಯಲ್ಲಿ ಟ್ಯಾಂಕರ್‌ ನೀರು
ಮೂಲ್ಕಿಯಲ್ಲಿ ಈ ಬಾರಿಯೂ ಬೇಸಗೆ ಬರುತ್ತಿದ್ದಂತೆ ಟ್ಯಾಂಕರ್‌ ಮೂಲಕ ಕುಡಿಯುವ ನೀರಿನ ಪೂರೈಕೆ ಆರಂಭವಾಗಿದೆ. ಸುತ್ತಲೂ ನದಿಯಿಂದ ಕೂಡಿದ್ದರೂ ಉಪ್ಪು ನೀರು ಸಮಸ್ಯೆ ಕಾಡುತ್ತಿದೆ. ಪಾಲಿಕೆಯ ತುಂಬೆ ಅಣೆಕಟ್ಟಿನ ನೀರು ವಾರದಲ್ಲಿ ಎರಡು ದಿನ ವ್ಯವಸ್ಥೆ ಮಾಡಿದ್ದರೂ ಅದೂ ಸಮಪರ್ಕಕವಾಗಿ ಮೂಲ್ಕಿಗೆ ತಲುಪುತ್ತಿಲ್ಲ. ಈ ಭಾಗದಲ್ಲೂ ಜನರು ಮಳೆಯ ನಿರೀಕ್ಷೆಯಲಿದ್ದಾರೆ.

ಉಳ್ಳಾಲ ಜಲಕ್ಷಾಮ
ಉಳ್ಳಾಲ ತಾಲೂಕು ವ್ಯಾಪ್ತಿಯ ನಗರ, ಗ್ರಾಮೀಣ ಭಾಗದಲ್ಲೂ ಜಲಕ್ಷಾಮ ಉಂಟಾಗಿದೆ. ಉಳ್ಳಾಲ ನಗರಸಭೆ, ತಲಪಾಡಿ-ಸೋಮೇಶ್ವರ ಪುರಸಭೆ ಸೇರಿದಂತೆ ಸುಮಾರು 19 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಹಲವೆಡೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಬಾವಿಗಳಲ್ಲೂ ಒರತೆ ಕಡಿಮೆಯಾಗಿದೆ. ಅಡ್ಯಾರ್‌-ಹರೇಕಳ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದರೂ ನೀರು ಪೂರೈಕೆಗೆ ವ್ಯವಸ್ಥೆಯಾಗಿರುವುದು ಈ ಭಾಗಕ್ಕೆ ದೊಡ್ಡ ಹಿನ್ನಡೆ.

ಎಎಂಆರ್‌ನಿಂದ ಸಮಸ್ಯೆ ದೂರ
ಮಂಗಳೂರು ನಗರದಲ್ಲಿ ಸದ್ಯ ನೀರಿನ ಸಮಸ್ಯೆ ಉಂಟಾಗಿಲ್ಲ. ಎಎಂಆರ್‌ ಅಣೆಕಟ್ಟಿನಿಂದ ತುಂಬೆಗೆ ನೀರು ಹರಿಸಿರುವ ಪರಿಣಾಮ ನೀರಿನ ಮಟ್ಟ 6ಮೀ.ಗೆ ಏರಿಕೆಯಾಗಿದೆ. ಸದ್ಯ 50 ದಿನಗಳಿಗೆ ಬೇಕಾಗುವಷ್ಟು ನೀರಿದ್ದು, ಘಟ್ಟ ಪ್ರದೇಶದಲ್ಲಿ ಸುರಿಯುವ ಮಳೆಯೇ ಮಂಗಳೂರಿನ ನೀರಿನ ಆಧಾರವಾಗಿದ್ದು, ಮಳೆಯಾದರೆ ಯಾವುದೇ ಸಮಸ್ಯೆಯಾಗದು. ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಅಲ್ಲಲ್ಲಿ ಆರಂಭವಾಗಿದೆ.

ಮೂಡುಬಿದಿರೆ/ಕಡಬ
ಮೂಡುಬಿದಿರೆ ನಗರ ವ್ಯಾಪ್ತಿಗೆ 2ದಿನಕ್ಕೊಮ್ಮೆ ನೀರು ಪೂರೈಕೆ ಮಾಡುವ ಕುರಿತಂತೆ ಈಗಾಗಲೇ ಪುರಸಭೆ ಪ್ರಕಟನೆ ಹೊರಡಿಸಿದೆ. ಕಡಬದಲ್ಲಿ ಸದ್ಯ ಸಮಸ್ಯೆ ಕಾಣಿಸದಿದ್ದರೂ ಮಳೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಅಧಿಕಾರಿಗಳ ಸಭೆ ನಡೆಸಿ, ಸೂಕ್ತ ನಿರ್ದೇಶನ ನೀಡಲಾಗಿದೆ. ಚುನಾವಣ ಕರ್ತವ್ಯದ ನಡುವೆಯೂ ನೀರಿನ ಸಮಸ್ಯೆ ಕಾಡದಂತೆ ಎಚ್ಚರ ವಹಿಸಲಾಗುತ್ತಿದೆ. ಸಮಸ್ಯೆ ಇರುವಲ್ಲಿ ಪರ್ಯಾಯ ಮೂಲ ಸಿದ್ಧಪಡಿಸಿ ಇಟ್ಟುಕೊಳ್ಳುವಂತೆಯೂ ಸೂಚಿಸಲಾಗಿದೆ.
– ರವಿಕುಮಾರ್‌ ಎಂ.ಆರ್‌. ದ.ಕ. ಜಿಲ್ಲಾಧಿಕಾರಿ

– ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next