Advertisement

‘ಬಾರ್’ ಬೇಡ ಎಂದ ಮಹಿಳಾ ಮಣಿಗಳು, ಬೇಕು ಅಂತಾ ಧರಣಿ ನಡೆಸಿದ ಮದ್ಯಪ್ರಿಯರು

09:08 PM Aug 06, 2021 | Team Udayavani |

ಚಿಕ್ಕಮಗಳೂರು: ಒಂದೆಡೆ ಮಹಿಳೆಯರಿಂದ ಬಾರ್ ಮುಚ್ಚುವಂತೆ ಧರಣಿ, ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಪ್ರತಿಧರಣಿ ನಡೆದ ಪ್ರಸಂಗ ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಅಂಚೆ ಚೋಮನಹಳ್ಳಿಯಲ್ಲಿ ನಡೆದಿದೆ.

Advertisement

ಇಲ್ಲಿನ ಬಾರ್‌ ಮುಚ್ಚುವಂತೆ ಚಿಕ್ಕಮಗಳೂರು ಅಬಕಾರಿ ಕಚೇರಿ ಬಳಿ ಮಹಿಳೆಯರು ಧರಣಿ ನಡೆಸಿದ್ದಾರೆ. ಆದರೆ, ಇದಕ್ಕೆ ವಿರುದ್ಧವಾಗಿ ಮತ್ತೊಂದೆಡೆ ಬಾರ್ ಮುಚ್ಚದಂತೆ ಮದ್ಯಪ್ರಿಯರಿಂದ ಧರಣಿ ನಡೆದಿದೆ. ಅಬಕಾರಿ ಕಚೇರಿಯ ಬಳಿ ಬಾರ್‌ ಪರ, ವಿರುದ್ಧ ಪ್ರತಿಭಟನೆ ಜೋರಾಗಿ ನಡೆದಿದೆ.

ಗ್ರಾಮದಲ್ಲಿ ತಿಂಗಳ ಹಿಂದೆ ಚಂದನ್ ಬಾರ್‌ ಆರಂಭವಾಗಿತ್ತು. ಇದೀಗ ಅದಕ್ಕೆ ಮಹಿಳೆಯರಿಂದ ವಿರೋಧ ವ್ಯಕ್ತವಾಗಿದೆ. ಮದ್ಯಪ್ರಿಯರು ಮಹಿಳೆಯರ ವಿರೋಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಾರ್ ಮುಚ್ಚದಂತೆ ತಾವೂ ಧರಣಿ ನಡೆಸಿದ್ದಾರೆ. ಚಿಕ್ಕಮಗಳೂರಿನ ಅಬಕಾರಿ ಕಚೇರಿ ಬಳಿ ಈ ಪ್ರತಿಭಟನೆ ನಡೆದಿದೆ. ಎಣ್ಣೆ ಬೇಕೆಂದು ಒಂದು ಗುಂಪು, ಬೇಡವೆಂದು ಮತ್ತೊಂದು ಗುಂಪು, ಬಾರ್ ಪರ- ವಿರುದ್ದ ರಸ್ತೆ ಮಧ್ಯೆ ಪ್ರತಿಭಟನೆ ನಡೆಸಿದೆ. ಬಾರ್ ಬೇಡವೆಂದು ಮಹಿಳೆಯರು ಬೀದಿಗಿಳಿದಿದ್ದಾರೆ. ಬಾರ್ ಬೇಕೇ ಬೇಕೆಂದು ಮದ್ಯಪ್ರಿಯರು ಬೀದಿಗಳಿದಿದ್ದಾರೆ.

ನನ್ ಗಂಡ ಬೆಳ್ಗೆಯಿಂದ ಸಂಜೆ ತನಕ ಕುಡೀತಾನೆ ಇರ್ತಾನೆ ಸರ್. ಕುಡ್ಕೋ ಬಂದು ಹೊಡೀತಾನೆ, ಬಡೀತಾನೆ. ನಮ್ ಕಷ್ಟ ಯಾರಿಗೆ ಹೇಳೋದ್ ಸರ್. ಬಾರ್ ಹತ್ರ ಇದ್ರೆ ನನ್ನ ಗಂಡನ ಕಾಟ ಮತ್ತಷ್ಟು ಜಾಸ್ತಿಯಾಗುತ್ತೆ. ಹಾಗಾಗೀ ಬಾರ್ ಬೇಡ ಅಂತಾ ಡಿಸಿ ಅವ್ರಿಗೆ ಮನವಿ ಮಾಡೋಕೆ ಬಂದೀವಿ ಸರ್ ಎಂದು ಮಹಿಳೆಯರು ಕಣ್ಣೀರು ಹಾಕಿದ್ದಾರೆ.

ಇತ್ತ, ನಾನ್ ಸಂಜೆ 6 ಗಂಟೆಗೆ ಕೆಲ್ಸ ಮುಗ್ಸಿ ಬರ್ತೀನಿ, ಆಮೇಲೆ ಬಾರ್ ಹುಡ್ಕೊಂಡ್ ಬಾಣಾವಾರಕ್ಕೆ ಹೋಗ್ಬೇಕಂದ್ರೆ 10 ಕೀಲೋ ಮೀಟರ್, ಮತ್ತಿಘಟ್ಟಕ್ಕೆ ಹೋಗೋಕೂ 10 ಕೀಲೋ ಮೀಟರ್ ಆಗುತ್ತೆ. ದೇವನೂರು ಹೋಗ್ಬೇಕಂದ್ರೆ 10 ಕೀಲೋ ಮೀಟರ್. ಕುಡಿಬೇಕು ಅಂದ್ರೆ ಎಲ್ಲಾ ಬೇಲಿ ಸಾಲಲೆಲ್ಲಾ ಹೋಗ್ಬೇಕು. ನಮ್ಮೂರಲ್ಲೇ ಆದ್ರೆ ಈ ಕಷ್ಟನೇ ಇರಲ್ಲ. ಅಲ್ದೇ ಕೆಲ ಕಡೆ ಅಂಗಡಿಯಲ್ಲಿ ಕದ್ದು ಮಾರ್ತಾರೆ, ಅಲ್ಲಿ ಒನ್ ಟು ಡಬಲ್ ದುಡ್ಡು ಕೊಟ್ಟು ಕದ್ದು ಕುಡಿಯಬೇಕು. ಅಷ್ಟು ದುಡ್ಡು ಕೊಟ್ಟು ಕದ್ದು ಕುಡಿಯೋ ಹಣೆಬರಹ ಯಾಕೆ ? ಅನ್ನೋದು ಮದ್ಯಪ್ರಿಯರ ಪ್ರಶ್ನೆ.

Advertisement

ಎರಡು ತಿಂಗಳ ಹಿಂದೆ ಮಂಚೇಗೌಡ ಎಂಬವರ ಚಂದನ್ ಬಾರ್ ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಆರಂಭಗೊಂಡಿತ್ತು. ಬಾರ್ ಏಕಾಏಕಿ ಓಪನ್ ಆದಾಗ ಅಂಚೆಚೋಮನಹಳ್ಳಿ ಗ್ರಾಮ ಪಂಚಾಯತಿ ಸೇರಿದಂತೆ ಊರಿನ ಮಹಿಳೆಯರು ಬಾರ್ ವಿರುದ್ಧ ದನಿ ಎತ್ತಿದ್ದರು. ಬಾರ್ ತೆರೆಯಬಾರದು ಎಂದು ಬಾರ್ ಮುಂದೆಯೇ ಪ್ರತಿಭಟನೆಯನ್ನು ಕೆಲದಿನಗಳ ಹಿಂದೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಬಾರ್ ಓಪನ್ ಆಗಲು ನಮ್ಮೂರಲ್ಲಿ ಬಿಡಲ್ಲ ಎಂದು ಊರಿನ ಮಹಿಳೆಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆ ಬಳಿಕ ಬಾರ್ ಕೆಲ ದಿನಗಳ ತನಕ ಮುಚ್ಚಲಾಗಿತ್ತು. ಆದರೆ, ಈಗ ಮತ್ತೆ ಬಾರ್ ಓಪನ್ ಮಾಡೋ ಸುಳಿವು ಪಡೆದುಕೊಂಡ ಮಹಿಳೆಯರು ಇಂದು ಚಿಕ್ಕಮಗಳೂರು ಅಬಕಾರಿ, ಡಿಸಿ ಕಛೇರಿ ಎದುರು ಬಾರ್ ತೆರೆಯಬಾರದು ಎಂದು ಪ್ರತಿಭಟನೆ ನಡೆಸಿದ್ದಾರೆ. ಅಂಚೆಚೋಮನಹಳ್ಳಿ ಗ್ರಾಮದಲ್ಲಿ ಬಾರ್ ಓಪನ್ ಮಾಡಿದ್ಮೇಲೆ ಗಂಡ-ಹೆಂಡತಿಯರ ಗಲಾಟೆ ಜಾಸ್ತಿಯಾಗಿದೆ. ನಮ್ ಶಾಪ ಖಂಡಿತಾ ಬಾರ್ ಓನರ್ಗೆ ತಟ್ಟೇ ತಟ್ಟುತ್ತೆ ಎಂದು ಮಹಿಳೆಯರು ಅಳಲು ತೋಡಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next