ಆ ಹಳ್ಳಿಯಲ್ಲಿ ಅಮ್ಮ, ಮಗನ ಹುಡುಗಿಯರು ಕೊಂಚ ಹೆಚ್ಚೇ ಹೆದರುತ್ತಾರೆ. ಕಾರಣ, ತನ್ನ ಮಗನಿಗೆ ಮದುವೆ ಮಾಡಬೇಕು ಅಂತ ಅವನ ಅಮ್ಮ ಕಣ್ಣಿಗೆ ಕಾಣುವ ಆ ಊರ ಹುಡುಗಿಯರನ್ನೆಲ್ಲಾ ತನ್ನ ಮಗನನ್ನು ಮದ್ವೆ ಆಗಿ ಅಂತ ದುಂಬಾಲು ಬೀಳ್ತಾಳೆ. ಅಷ್ಟೇ ಅಲ್ಲ, ಮಗನಿಗೆ ದೋಷವಿದೆ. ದೇವ್ರ ಮುಂದೆ ಮಗನ ಕಿವಿ ಚುಚ್ಚಿಸಿದರೆ ಮದ್ವೆ ಆಗುತ್ತೆ ಎಂಬ ಜನರ ಮಾತು ಕೇಳಿ ದೇವರ ಹರಕೆ ಹೊತ್ತ ಆಕೆ, ಊರ ದೇವ್ರು ಆಂಜನೇಯ ಗುಡಿ ಮುಂದೆ ಮಗನ ಕಿವಿ ಚುಚ್ಚಿಸಲು ಮುಂದಾಗುತ್ತಾಳೆ.
ಕಿವಿ ಚುಚ್ಚಿಸುತ್ತಾಳಾ, ಮಗನಿಗೆ ಹುಡುಗಿ ಸಿಕ್ತಾಳಾ, ಮದುವೆ ಆಗುತ್ತಾ? ಎಂಬುದೇ ಚಿತ್ರದ ಸಾರಾಂಶ. ಇಲ್ಲಿ ಹಾಸ್ಯ ಕಥೆ ಮೂಲಕ ಒಂದಷ್ಟು ಭಾವನಾತ್ಮಕ ಅಂಶಗಳನ್ನು ಸೇರಿಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಮುಗಿಲ್. ಈ ಚಿತ್ರದ ಶೀರ್ಷಿಕೆಗೂ ಕಥೆಗೂ ಯಾವುದೇ ಸಂಬಂಧವಿಲ್ಲ. ಹೇಳಿಕೊಳ್ಳುವಂತಹ ಹೊಂದಾಣಿಕೆಯೂ ಇಲ್ಲ. ಕಥೆಯಲ್ಲಿ ಹೊಸತೇನಿಲ್ಲ. ನಿರೂಪಣೆಯಲ್ಲೂ ಅಷ್ಟೇನು ಚುರುಕುತನವಿಲ್ಲ.
ಕೆಲ ಸನ್ನಿವೇಶಗಳು ನೋಡುಗರಿಗೆ ಕಚಗುಳಿ ಇಡುತ್ತವಾದರೂ, ಕೆಲವೊಮ್ಮೆ ಕಿರಿಕಿರಿಗೂ ಕಾರಣವಾಗುತ್ತವೆ. ಇದೊಂದು ಹಳ್ಳಿ ಸೊಗಡಿನ ಚಿತ್ರ. ಹಳ್ಳಿ ಪರಿಸರವನ್ನು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆಯಾದರೂ, ಚಿತ್ರಕಥೆಯಲ್ಲಿ ಹೇಳಿಕೊಳ್ಳುವಂತಹ ಹಿಡಿತವಿಲ್ಲ. ಹಾಗಾಗಿ ಇಡೀ ಚಿತ್ರ ವೇಗಮಿತಿ ಕಳೆದುಕೊಂಡಿದೆ. ವಿನಾಕಾರಣ ಹಾಸ್ಯದ ದೃಶ್ಯಗಳು ಕಾಣಿಸಿಕೊಂಡು ನೋಡುಗರ ತಾಳ್ಮೆಯನ್ನೂ ಪರೀಕ್ಷಿಸುತ್ತಾ ಹೋಗುತ್ತದೆ.
ಮಗನಿಗೆ ಮದುವೆ ಮಾಡಲು ತುದಿಗಾಲ ಮೇಲೆ ನಿಲ್ಲುವ ಅಮ್ಮ ಮತ್ತು ಉಂಡಲೆಯುವ ಮಗನ ಕಥೆ ಕನ್ನಡಕ್ಕೆ ಹೊಸದೇನಲ್ಲ. ಅದೆಷ್ಟೋ ಚಿತ್ರಗಳಲ್ಲಿ ಈ ರೀತಿಯ ಕಥೆಯ ಎಳೆ ಕಾಣಿಸಿಕೊಂಡಿದೆ. ನಿರ್ದೇಶಕರು ಇಲ್ಲಿ ಒಂದಷ್ಟು ಒಗ್ಗರಣೆ ಹಾಕುವ ಕೆಲಸ ಮಾಡಿದ್ದಾರಷ್ಟೇ. ಇಲ್ಲೊಂದು ಗಮನಿಸಬೇಕಾದ ಅಂಶವೆಂದರೆ, ಮುಗ್ಧ ಮನಸಿನ ಮಗನ ಭಾವನೆಗಳಿಗೆ ತಾಯಿ ಸ್ಪಂದಿಸುವ ರೀತಿ, ಮಗನನ್ನೇ ಸರ್ವಸ್ವ ಅಂದುಕೊಳ್ಳುವ ಆಕೆಯ ಒಡಲಾಳದಲ್ಲಿ ಅವಿತು ಕೂತ ಸಂಕಟಗಳನ್ನು ಆಗಾಗ ತೋರಿಸುವ ಮೂಲಕ ಕೊಂಚ ಭಾವುಕತೆಯನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗಿದೆ.
ಅದನ್ನು ಹೊರತುಪಡಿಸಿದರೆ, ಚಿತ್ರದಲ್ಲಿ ಸೆಳೆಯುವಂತಹ ಯಾವುದೇ ಅಂಶಗಳಿಲ್ಲ. ಮೊದಲರ್ಧ ತರಲೆ ಮಾಡುವ ಅಮ್ಮ, ಮಗನ ಜರ್ನಿಯೊಂದಿಗೆ ಏರಿಳಿತಗಳಲ್ಲೇ ಸಾಗುವ ಚಿತ್ರ, ದ್ವಿತಿಯಾರ್ಧದಲ್ಲಿ ಇನ್ನೊಂದು ಕಥೆಯ ಅನಾವರಣಗೊಳಿಸುತ್ತದೆ. ಅಲ್ಲೊಂದು ಹೊಸ ತಿರುವು ಕೊಡುತ್ತದೆ. ಆ ಹೊಸ ತಿರುವು ಚಿತ್ರದ ಹೈಲೈಟ್. ಆ ಹೈಲೈಟ್ ಬಗ್ಗೆ ತಿಳಿಯುವ ಆಸೆ ಇದ್ದರೆ, ಚಿತ್ರ ನೋಡಿ “ಸುರ್ ಸುರ್ ಬತ್ತಿ’ ಎಷ್ಟೊಂದು ಪ್ರಕಾಶಮಾನ ಎಂಬುದನ್ನು ತಿಳಿಯಬಹುದು.
ಚಿತ್ರದಲ್ಲಿ ಅಮ್ಮ, ಮಗನ ವಾತ್ಸಲ್ಯವಿದೆ, ಹುಡುಗ, ಹುಡುಗಿಯ ಪ್ರೀತಿ ತುಂಬಿದೆ. ರೌಡಿಸಂ ಹಿನ್ನೆಲೆಯ ಅಣ್ಣನ ಆಪ್ತತೆ ಮೇಳೈಸಿದೆ. ವಾಸ್ತವ ಅಂಶಗಳ ಚಿತ್ರಣವೂ ಇದೆ. ಇವುಗಳ ಜೊತೆಗೆ ಹಿನ್ನೆಲೆ ಸಂಗೀತ ಮತ್ತು ಹಾಡುಗಳು ಸಾಥ್ ಕೊಟ್ಟಿದ್ದರೆ, “ಸುರ್ ಸುರ್ ಬತ್ತಿ’ ಇನ್ನಷ್ಟು ಪ್ರಕಾಶಿಸುತ್ತಿತ್ತು. ಚಿತ್ರದಲ್ಲಿ ಅಮ್ಮನಾಗಿ ಊರ್ವಶಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ಹೆತ್ತ ಕರುಳ ಸಂಭ್ರಮ ಸಂಕಟ ಹೇಗೆಲ್ಲಾ ಇರುತ್ತದೆ ಎಂಬುದನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಆರ್ವ ಸಿಕ್ಕ ಪಾತ್ರವನ್ನು ಚೆನ್ನಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ಭಗ್ನ ಪ್ರೇಮಿಯಾಗಿ ಓಕೆ, ಮುಗ್ಧ ಮನಸ್ಸಿನವನಾಗಿ ಪಾತ್ರದಲ್ಲಿ ಇನ್ನಷ್ಟು ತಲ್ಲೀನತೆ ಬೇಕಿತ್ತು. ಸಾಧುಕೋಕಿಲ ಅವರ ಎಂದಿನ ರಿಪೀಟ್ ಕಾಮಿಡಿ ಶೋ ಮೇಳೈಸಿದೆ. ವೈಷ್ಣವಿ ಮೆನನ್ ಪಾತ್ರ ಬಗ್ಗೆ ಹೇಳುವುದೇನೂ ಇಲ್ಲ. ಉಳಿದಂತೆ ಕುಮಾರ್, ಎಂ.ಕೆ.ಮಠ, ರಾಘವೇಂದ್ರ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಂಡಿದ್ದಾರೆ. ಲೋಕೇಶ್ ಸಂಗೀತದಲ್ಲಿ ಯಾವ ಹಾಡು ನೆನಪಲ್ಲುಳಿಯಲ್ಲ. ಗೌತಮ್ ಶ್ರೀವತ್ಸ ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಬೇಕಿತ್ತು. ಎ.ಸಿ.ಮಹೇಂದ್ರ ಛಾಯಾಗ್ರಹಣ ಪರವಾಗಿಲ್ಲ.
ಚಿತ್ರ: ಸುರ್ ಸುರ್ ಬತ್ತಿ
ನಿರ್ಮಾಣ: ಬಿ.ಡಿ.ಕುಮಾರ್
ನಿರ್ದೇಶನ: ಎಂ.ಮುಗಿಲ್
ತಾರಾಗಣ: ಆರ್ವ, ವೈಷ್ಣವಿ ಮೆನನ್, ಊರ್ವಶಿ, ಸಾಧುಕೋಕಿಲ, ಎಂ.ಕೆ.ಮಠ, ರಾಘವೇಂದ್ರ ಇತರರು.
* ವಿಭ