Advertisement
ಮಲ್ಪೆ: ಮಳೆಗಾಲದ ಎರಡು ತಿಂಗಳು ಯಾಂತ್ರಿಕ ಮೀನುಗಾರಿಕೆಗೆ ರಜೆಯಾಗಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಹಸಿ ಮೀನುಗಳು ಈಗ ಯಾವುದೇ ಮಾರುಕಟ್ಟೆಯಲ್ಲಿ ಇರುವುದಿಲ್ಲ. ನಾಡದೋಣಿಗಳಿಂದ ಚಿಲ್ಲರೆ ಮೀನು ಬಂದರೂ ಬಾರಿ ಬೇಡಿಕೆಯನ್ನು ಪಡೆದುಕೊಳ್ಳುತ್ತಿದ್ದು ದರವೂ ಹೆಚ್ಚಳವಾಗಿರುತ್ತದೆ. ಅಂತಹ ಸಮಯದಲ್ಲಿ ಜನರು ಹೆಚ್ಚಾಗಿ ಒಣ ಮೀನುಗಳಿಗೆ ಮೊರೆ ಹೋಗುವುದು ಸಾಮಾನ್ಯ.ಅಂದ ಹಾಗೆ ಒಣ ಮೀನು ಕಡಿಮೆ ದರದಲ್ಲಿ ದೊರೆಯುತ್ತದೆ ಅಂತೇಳಿ ಅಲ್ಲ. ಹಸಿ ಮೀನಿನಷ್ಟೇ ದರ ಇದಕ್ಕೂ ಇದೆ. ಆದರೆ ಇದರ ವಿಭಿನ್ನ ರುಚಿ ಮೀನು ಪ್ರಿಯರಿಗಷ್ಟೆ ಗೊತ್ತು. ವರ್ಷಪೂರ್ತಿ ಒಣಮೀನು ಲಭ್ಯವಾಗಿದ್ದರೂ ಮಳೆಗಾಲದಲ್ಲಿ ಮಾತ್ರ ಹೆಚ್ಚಿನ ಬೇಡಿಕೆಯನ್ನು ಪಡೆದು ಕೊಳ್ಳುತ್ತದೆ. ಹಾಗಾಗಿ ಬೇಸಗೆಯಲ್ಲಿ ಒಣ ಮೀನನ್ನು ಸಂಗ್ರಹಿಸಿಡಲಾಗುತ್ತದೆ. ಮೀನು ಮಾರುಕಟ್ಟೆ ಮತ್ತು ವಾರದ ಸಂತೆ ಮಾರುಕಟ್ಟೆಯಲ್ಲಿ ಇದೀಗ ಒಣ ಮೀನಿನ ಮಾರಾಟದ ಭರಾಟೆ ಜೋರಾಗಿ ನಡೆಯುತ್ತದೆ. ಉಪ್ಪು ಬೆರೆಸಿ
ಮೀನುಗಾರ ಮಹಿಳೆಯರು ಬಂದರಿನಲ್ಲಿ ಹಸಿಮೀನನ್ನು ಏಲಂ ಮೂಲಕ ರಖಂ ಆಗಿ ಖರೀದಿ ಮಾಡಿಕೊಳ್ಳುತ್ತಾರೆ. ಖರೀದಿಸಿದ ಮೀನನ್ನು ಚೆನ್ನಾಗಿ ತೊಳೆದು ಸಿಗಿದು ಉಪ್ಪು ಬೆರೆಸಿ ಬಿಸಿಲಲ್ಲಿ ಒಣಗಿಸಲು ಹಾಕುತ್ತಾರೆ. ಸುಮಾರು ಎರಡು ಮೂರು ದಿನ ಒಣಗಿಸಿದ ಬಳಿಕ ಗಾಳಿ ತಾಗದಂತೆ ಬೆಚ್ಚಗಿನ ವಾತಾವರಣದಲ್ಲಿ ಸಂಗ್ರಹಿಸಿಟ್ಟು ವಾರದ ಸಂತೆ ಮಾರುಕಟ್ಟೆ ಅಥವಾ ಮೀನಿನ ಮಾರುಕಟ್ಟೆಯಲ್ಲಿ ಮೀನನ್ನು ಮಾರಾಟ ಮಾಡಲಾಗುತ್ತದೆ. ಮಲ್ಪೆಯಲ್ಲಿ ಸ್ಥಳೀಯವಾಗಿ ಸುಮಾರು 500ಕ್ಕಿಂತ ಹೆಚ್ಚು ಮಹಿಳೆಯರು ಒಣಮೀನಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ವ್ಯಾಪಾರಿಗಳಿಗೆ ರಖಂ ನಲ್ಲಿ ಇವರು ಮಾರಾಟ ಮಾಡುತ್ತಾರೆ.
Related Articles
ತಾಟೆ, ತೊರಕೆ, ಬಂಗುಡೆ, ಕುರ್ಚಿ, ಗೋಲಯಿ, ನಂಗ್, ಅಡೆಮೀನು, ಕಲ್ಲರ್, ಆರಣೆಮೀನು, ಮಡಂಗ್ ಮೊದಲಾದ ವಿವಿಧ ಜಾತಿಯ ಒಣ ಮೀನುಗಳನ್ನು ಮಾರುಕಟ್ಟೆಯಲ್ಲಿ ಕಾಣಬಹುದು.
Advertisement
ಗೋಲಯಿ ಮೀನು ಕೆ.ಜಿ.ಗೆ 200, ನಂಗ್ 350- 370 ರೂ., ಅಡೆಮೀನು 350 ರೂ. ಇನ್ನು ತಾಟೆ, ತೊರಕೆ ಮೀನುಗಳು ಇದರ ದುಪ್ಪಟ್ಟು ಬೆಲೆಗಳನ್ನು ಪಡೆದುಕೊಳ್ಳುತ್ತವೆ. ಹೆಚ್ಚು ಒಣಗಿದ ಮೀನುಗಳಿಗೆ ಬೇಡಿಕೆ ಜಾಸ್ತಿ. ಈ ಮೀನನ್ನು ಹೆಚ್ಚು ಸಮಯದವರೆಗೆ ಸಂಗ್ರಹಿಸಿಟ್ಟರೂ ಹಾಳಾಗುವುದಿಲ್ಲ ಎನ್ನುತ್ತಾರೆ ಒಣಮೀನು ಮಾರಾಟಗಾರ ಮಹಿಳೆಯರು.
ಒಣಮೀನು ಚಟ್ನಿ – ಗಂಜಿ ಊಟಹಸಿಮೀನಿನ ಪದಾರ್ಥಕ್ಕಿಂತ ಒಣಮೀನಿನ ರುಚಿ ವಿಭಿನ್ನವಾಗಿರುತ್ತದೆ. ಕೆಲವರಿಗೆ ಹಸಿಮೀನಿನಷ್ಟು ರುಚಿಸದಿದ್ದರೂ ಮಳೆಗಾಲದಲ್ಲಿ ಒಣಮೀನಿನಿಂದ ತಯಾರಿಸಲಾಗುವ ವಿವಿಧ ಖಾದ್ಯಗಳು ಕರಾವಳಿಯ ಜನರನ್ನು ಸೆಳೆದಿವೆ. ಒಣ ಮೀನಿನ ಚಟ್ನಿ ರುಚಿಯೇ ಬೇರೆ, ಒಣಮೀನನ್ನು ಸುಟ್ಟು ತಿನ್ನುವುದು ಮತ್ತು ತರಕಾರಿಯ ಜತೆಗೆ ಪದಾರ್ಥಕ್ಕೆ ಬೆರೆಸಿ ತಯಾರಿಸುವುದು ಕರಾವಳಿಯ ಭಾಗದಲ್ಲಿ ಹೆಚ್ಚು ಜನಪ್ರಿಯ. ಇನ್ನು ಸಣ್ಣಗಾತ್ರದ ಸಿಗಡಿ ಮೀನಿನ (ಮಯಕದ ಎಟ್ಟಿ) ಚಟ್ನಿ ತುಂಬ ರುಚಿಕರ. ಒಣಮೀನು ಮತ್ತು ಗಂಜಿ ಊಟ ಒಂದಕ್ಕೊಂದು ಕಾಂಬಿನೇಷನ್ ಕೂಡ ಆಗಿರುತ್ತದೆ. ಒಣಮೀನಿನ ದರಗಳು ಒಂದೇ ರೀತಿಯಾಗಿರುವುದಿಲ್ಲ. ಬೇಡಿಕೆಗೆ ಅನುಗುಣವಾಗಿರುತ್ತದೆ. ನಾವು ಬೋಟಿನಿಂದ ಜಾಸ್ತಿ ದರ ಕೊಟ್ಟು ಮೀನು ಖರೀದಿಸಿ ಒಣಮೀನನ್ನು ತಯಾರಿಸಿದರೆ ಹೊರರಾಜ್ಯ ಅಥವಾ ಹೊರ ಬಂದರುಗಳಿಂದ ಮೀನುಗಳು ಬಂದರೆ ಜಾಸ್ತಿ ಬೆಲೆಗೆ ಖರೀದಿಸಿ ಮೀನನ್ನು ಬೇಡಿಕೆಯಿಲ್ಲದೆ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಒಣಗಿಸಿಟ್ಟ ಸಮಯದಲ್ಲಿ ಮಳೆಬಂದು ನೀರು ಬಿದ್ದರೂ ಎಲ್ಲ ಮೀನು ಹಾಳಾಗುತ್ತದೆ. ಇಂತಹ ಸಂದರ್ಭದಲ್ಲಿ ನಷ್ಟ ಉಂಟಾಗುತ್ತದೆ
– ಜಲಜಾ ಕೋಟ್ಯಾನ್, ಒಣಮೀನು ವ್ಯಾಪಾರಿ – ನಟರಾಜ್ ಮಲ್ಪೆ