ಟೆಕ್ಸಾಸ್: ಹೊಸ ಡ್ರೆಸ್ ಕೋಡ್ ನೀತಿಯನ್ನು ಘೋಷಿಸಿದ ಟೆಕ್ಸಾಸ್ ನ ಶಾಲೆಯೊಂದು ಈಗ ಸುದ್ದಿಯಲ್ಲಿದೆ. ಮಾನಸಿಕ ಆರೋಗ್ಯದ ಕಾಳಜಿಯನ್ನು ಉಲ್ಲೇಖಿಸಿ ಶಾಲೆಯು ವಿದ್ಯಾರ್ಥಿಗಳು ಎಲ್ಲಾ ರೀತಿಯ ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಿದೆ.
ಯುಎಸ್ಎ ಟುಡೆ ವರದಿಯ ಪ್ರಕಾರ, ಶಾಲಾಂಭಕ್ಕೆ ಮುಂಚಿತವಾಗಿ ಚಾರ್ಲ್ಸ್ ಮಿಡಲ್ ಸ್ಕೂಲ್ ಪ್ರಿನ್ಸಿಪಾಲ್ ನಿಕ್ ಡಿಸಾಂಟಿಸ್ ಅವರು ಈ ನಿರ್ಧಾರವನ್ನು ಬಹಿರಂಗಪಡಿಸಿದ್ದಾರೆ.
“ಖಿನ್ನತೆ, ಮಾನಸಿಕ ಆರೋಗ್ಯ ಸಮಸ್ಯೆಗಳು ಜೊತೆಗಿನ ಗ್ರಹಿಸಿದ ಸಂಬಂಧದಿಂದಾಗಿ ಎಲ್ಲಾ ಕಪ್ಪು ಉಡುಪುಗಳನ್ನು ನಿಷೇಧಿಸಲಾಗಿದೆ” ಎಂದು ಶಾಲೆಯು ಪತ್ರವೊಂದರಲ್ಲಿ ವಿವರಿಸಿದೆ.
ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಶಾಲೆಯ ಈ ನಿರ್ಧಾರಕ್ಕೆ ಭಾರಿ ವಿರೋಧ- ಟೀಕೆ ವ್ಯಕ್ತವಾಗಿದೆ. ಬಟ್ಟೆಯ ಬಣ್ಣ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯಕ್ಕೆ ಯಾವ ರೀತಿಯ ಸಂಬಂಧವಿದೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. “ವಿದ್ಯಾರ್ಥಿಗಳನ್ನು ಬೇರೆ ಬಣ್ಣವನ್ನು ಧರಿಸುವಂತೆ ಮಾಡುವುದುಗಿ ಅವರನ್ನು ಸಂಪೂರ್ಣವಾಗಿ ವಿಭಿನ್ನ ವ್ಯಕ್ತಿಯಾಗಿಸಲು ಸಾಧ್ಯವಾಗುವುದಿಲ್ಲ” ಎಂದು ಒಬ್ಬ ಬಳಕೆದಾರ ಟೀಕಿಸಿದ್ದಾರೆ.
ಹಲವು ವಿದ್ಯಾರ್ಥಿಗಳ ಪೋಷಕರು ಈ ಬಗ್ಗೆ ಕಿಡಿಕಾರಿದ್ದಾರೆ. ಅದರಲ್ಲೂ ಈಗಾಗಲೇ ತಮ್ಮ ಮಕ್ಕಳಿಗೆ ಕಪ್ಪು ಬಣ್ಣದ ಬಟ್ಟೆ ಖರೀದಿಸಿದ ಪೋಷಕರು ಇದನ್ನು ವಿರೋಧಿಸಿದ್ದಾರೆ. “ನಾವು ಈಗಾಗಲೇ ಕಪ್ಪು ಪ್ಯಾಂಟ್ ಅನ್ನು ಖರೀದಿಸಿದ್ದೇವೆ, ಆದ್ದರಿಂದ ನಾವು ಮತ್ತೆ ಖರೀದಿಸಬೇಕಾಗಿದೆ” ಎಂದು ಪೋಷಕರು ಹೇಳಿದ್ದಾರೆ.