Advertisement

ಯೋಗಿ ಕಣ್ಣಲ್ಲಿ ಮತ್ತೆ ಕನಸು

06:00 AM Jun 29, 2018 | |

“ನಾನು ಸ್ಕೂಲ್‌ ಗೆಟಪ್‌ನಲ್ಲಿ ಕಾಣಿಸಿಕೊಂಡ ನಂತರ ಒಂದು ವಾರ ನನ್ನ ಹೆಂಡತಿ ಸರಿಯಾಗಿ ಮಾತನಾಡಲೇ ಇಲ್ಲ …’

Advertisement

– ಹೀಗೆ ಹೇಳಿ ನಕ್ಕರು ಯೋಗಿ. ಪಕ್ಕದಲ್ಲಿದ್ದ ನಿರ್ದೇಶಕ ಕೃಷ್ಣರಾಜ್‌ ಅವರಿಗೂ ನಗು ತಡೆಯಲಾಗಲಿಲ್ಲ. ಏಕೆಂದರೆ, ಯೋಗಿಯ ಸ್ಕೂಲ್‌ ಗೆಟಪ್‌ಗೆ ಕಾರಣರಾದವರು ಅವರೇ. ಅಷ್ಟಕ್ಕೂ ಯೋಗಿ ಸ್ಕೂಲ್‌ ಗೆಟಪ್‌ ಹಾಕಲು, ಮನೆಯಲ್ಲಿ ಅವರ ಹೆಂಡತಿ, ತಾಯಿ ರೇಗಿಸಲು ಕಾರಣವಾಗಿದ್ದು, “ಲಂಬೋದರ -ಬಸವನಗುಡಿ ಬೆಂಗಳೂರು’. ಇದು ಯೋಗೇಶ್‌ ಅಭಿನಯದ ಹೊಸ ಸಿನಿಮಾ. ಎರಡು ಹಾಡು ಬಿಟ್ಟರೆ ಉಳಿದಂತೆ ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ಈ ಚಿತ್ರದಲ್ಲಿ ಯೋಗಿ ಮೂರು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಅದರಲ್ಲೊಂದು ಹೈಸ್ಕೂಲ್‌ ಹುಡುಗನ ಗೆಟಪ್‌. ಆ ಪಾತ್ರಕ್ಕಾಗಿ ಯೋಗಿ ಗಡ್ಡ-ಮೀಸೆ ಬೋಳಿಸಿ, ಯುನಿಫಾರಂ ಹಾಕಿ ನಿಂತಿದ್ದನ್ನು ನೋಡಿದ ಯೋಗಿ ಪತ್ನಿಗೆ ಅಚ್ಚರಿಯಾಗಿದೆ. ಪಕ್ಕಾ ಸ್ಕೂಲ್‌ ಹುಡುಗನಂತೆ ಕಂಡ ಅವರನ್ನು ನೋಡಿ ಒಂದು ವಾರ ಸರಿಯಾಗಿ ಮಾತನಾಡಿಸಲೇ ಇಲ್ಲವಂತೆ. ಇನ್ನು, ಯೋಗಿ ಅಮ್ಮ ಕೂಡಾ ಮಗನನ್ನು ಬೇಜಾನ್‌ ರೇಗಿಸಿದ್ದಾರೆ. ಅದೇನೇ ಆದರೂ ಯೋಗಿ ಮಾತ್ರ “ಲಂಬೋದರ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಅದಕ್ಕೆ ಕಾರಣ ಕಥೆ. “ನಮ್ಮ ಸಿನಿಮಾ ಡಿಫ‌ರೆಂಟ್‌ ಆಗಿದೆ, ಸಂದೇಶವಿದೆ, ಯಾರೂ ಮಾಡದ್ದನ್ನು ನಾವು ಮಾಡಿದ್ದೀವಿ  ಎಂದು ಹೇಳಿಕೊಳ್ಳೋದಿಲ್ಲ. ಆದರೆ, ಒಂದು ಕಮರ್ಷಿಯಲ್‌ ಸಿನಿಮಾವಾಗಿ ಪ್ರೇಕ್ಷಕರು ಏನು ಬಯಸುತ್ತಾರೋ ಆ ಅಂಶದೊಂದಿಗೆ ನಿರ್ದೇಶಕ ಕೃಷ್ಣರಾಜ್‌ ಈ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಪೋಲಿ ಬಿದ್ದಿರುವ ಮಧ್ಯಮ ವರ್ಗದ ಹುಡುಗನ ಸುತ್ತ ಈ ಕಥೆ ಸಾಗುತ್ತದೆ. ಜವಾಬ್ದಾರಿ ಇಲ್ಲದ ಆತನ ಜೀವನದಲ್ಲಿ ಬರುವ ಹುಡುಗಿ, ಹೇಗೆ ಆತನ ಬದಲಾವಣೆಗೆ ಕಾರಣಳಾಗುತ್ತಾಳೆಂಬ ಅಂಶವನ್ನು ಇಲ್ಲಿ ಹೇಳಲಾಗಿದೆ’ ಎಂದು ಚಿತ್ರದ ಬಗ್ಗೆ ಹೇಳಿಕೊಂಡರು. ಇಷ್ಟು ಹೇಳಿದ ಮೇಲೆ ಲವ್‌, ತುಂಟತನ, ಪುಂಡಾಟಿಕೆ ಎಲ್ಲವೂ
ಇರುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.  “ನಿರ್ದೇಶಕರು ಜೀವನದಲ್ಲಿ ಹೇಗಿದ್ದರೋ ಅದನ್ನು ನನ್ನಲ್ಲಿ ಪಾತ್ರವಾಗಿ ಮಾಡಿಸಿದ್ದಾರೆ’ ಎನ್ನುತ್ತಾ ನಕ್ಕರು ಯೋಗಿ. 

ನಿರ್ದೇಶಕ ಕೃಷ್ಣರಾಜ್‌ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಯೋಗಿಯ “ಕಾಲಾಯ ತಸ್ಮೈ ನಮಃ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿದೆ. ಕಥೆ ಮಾಡಿಕೊಂಡು, ನಿರ್ಮಾಪಕರನ್ನು ಒಪ್ಪಿಸಿದ ನಂತರ ಯೋಗಿಗೆ ಕಥೆ ಹೇಳಿದರಂತೆ. ಯೋಗಿ ಕೂಡಾ ಕಥೆ ಇಷ್ಟಪಡುವ ಮೂಲಕ ಸಿನಿಮಾ ಆರಂಭವಾಗಿದೆ. ಎಲ್ಲಾ ಓಕೆ, “ಲಂಬೋದರ -ಬಸವನಗುಡಿ ಬೆಂಗಳೂರು’ ಎಂಬ ಟೈಟಲ್‌ ಇಡಲು ಕಾರಣವೇನು ಎಂದು ನೀವು ಕೇಳಬಹುದು. “ನಮ್ಮ ಚಿತ್ರದ ಕಥೆ ನಡೆಯೋದು ಬೆಂಗಳೂರಿನ ಹಳೆಯ ಏರಿಯಾದಲ್ಲಿ. ಹಳೆಯ ಏರಿಯಾ ಎಂದಾಗ ಸಿಗೋದು ಮಲ್ಲೇಶ್ವರಂ ಮತ್ತು ಬಸವನಗುಡಿ. ನಾವು ಬಸವನಗುಡಿಯನ್ನು ತೋರಿಸಿದ್ದೇವೆ. ಆದಷ್ಟು ಬಸವನಗುಡಿಯ ಹಳೆಯ ಏರಿಯಾಗಳಲ್ಲೇ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಗಣೇಶ, ಗಣಪತಿ ಎಂಬರ್ಥದ ಟೈಟಲ್‌ ಬೇಕಿತ್ತು. ಆದರೆ, ಈಗಾಗಲೇ ಗಣೇಶ ಹೆಸರಿನಲ್ಲಿ ಟೈಟಲ್‌ ಬಂದಿವೆ. ಹಾಗಾಗಿ, ಲಂಬೋದರ ಎಂದಿಟ್ಟೆವು. ಜೊತೆಗೆ ಬಸವನಗುಡಿಯ ದೊಡ್ಡ ಗಣಪತಿ ದೇವಾಲಯ ಕೂಡಾ ತುಂಬಾ ಫೇಮಸ್‌’ ಎಂದು ವಿವರ ಕೊಟ್ಟರು. ಇನ್ನು ಬಸವನಗುಡಿಯ ಕಡಲೇಕಾಯಿ ಪರಿಷೆ, ವಿದ್ಯಾರ್ಥಿ ಭವನ ಸೇರಿದಂತೆ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆಯಂತೆ. ಈ ಚಿತ್ರವನ್ನು ಉಡುಪಿ ಮೂಲದ ರಾಘವೇಂದ್ರ ಭಟ್‌ ಅವರು ನಿರ್ಮಿಸಿದ್ದಾರೆ. ಕಥೆ ಇಷ್ಟವಾಗಿ ಸಿನಿಮಾ ಮಾಡಿದ್ದಾಗಿ ಹೇಳಿಕೊಂಡರು ಅವರು.

ಚಿತ್ರದಲ್ಲಿ ಧರ್ಮಣ್ಣ ಹಾಗೂ ಸಿದ್ದು ಮೂಳೀಮನೆ ನಟಿಸಿದ್ದಾರೆ. ನಾಯಕನ ಜೊತೆಗಿದ್ದು, ಆತನನ್ನು ಹಾಳು ಮಾಡುವ ಪಾತ್ರ ಮಾಡಿದ್ದಾಗಿ ಹೇಳಿದರು. ಚಿತ್ರದಲ್ಲಿ ಆಕಾಂಕ್ಷಾ ನಾಯಕಿ. ಚಿತ್ರಕ್ಕೆ ಹರೀಶ್‌ ಗಿರಿ ಗೌಡ ಅವರ ಸಂಕಲನವಿದೆ. 

Advertisement

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next