ನಾಯಕ ಯಾವುದೋ ಒಂದು ಮಾನಸಿಕ ಸಮಸ್ಯೆಗೆ ಸಿಕ್ಕಿ, ಮುಂದೆ ಅದರಿಂದ ತೊಂದರೆ ಅನುಭವಿಸುವ ಅನೇಕ ಸಿನಿಮಾಗಳು ಈಗಾಗಲೇ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಬಂದಿವೆ. ಈಗ ಆ ಸಾಲಿಗೆ ಹೊಸ ಸೇರ್ಪಡೆ “ಸ್ಟ್ರೈಕರ್’. “ಸ್ಟ್ರೈಕರ್’ ಎಂಬ ಚಿತ್ರ ಆರಂಭವಾಗಿರುವ ವಿಚಾರವನ್ನು ನೀವು ಕೇಳಿರಬಹುದು. ಈಗ ಈ ಚಿತ್ರ ಚಿತ್ರೀಕರಣ ಮುಗಿಸಿ, ಬಿಡುಗಡೆಯ ಹಂತಕ್ಕೆ ಬಂದಿದೆ. ಇದೊಂದು ಸೈಕಲಾಜಿಕಲ್ ಕ್ರೈಮ್ ಥಿಲ್ಲರ್ ಜಾನರ್‌ಗೆ ಸೇರಿದ ಸಿನಿಮಾ. ಪ್ರವೀಣ್ ತೇಜ್ ಈ ಚಿತ್ರದ ನಾಯಕ. ಈ ಹಿಂದೆ ಪ್ರವೀಣ್ ಒಂದಷ್ಟು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದರೂ, ಯಾವ ಚಿತ್ರವೂ ದೊಡ್ಡ ಮಟ್ಟದಲ್ಲಿ ಅವರ ಕೈ ಹಿಡಿಯಲಿಲ್ಲ. ಈಗ “ಸ್ಟ್ರೈಕರ್’ ಮೇಲೆ ನಿರೀಕ್ಷೆ ಇಟ್ಟಿದ್ದಾರೆ. ಇಲ್ಲಿ ಅವರು ಮಾನಸಿಕ ಸಮಸ್ಯೆ ಇರುವ ಮೆಕ್ಯಾನಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರವನ್ನು ಪವನ್ ತ್ರಿವಿಕ್ರಮ ನಿರ್ದೇಶಿಸಿದ್ದಾರೆ. ಇಲ್ಲಿ ಕನಸು ಮತ್ತು ವಾಸ್ತವದ ನಡುವೆ ನಾಯಕ ಹೇಗೆ ಗೊಂದಲಕ್ಕೆ ಒಳಗಾಗುತ್ತಾನೆ ಮತ್ತು ಅದರಿಂದ ಆತ ಹೇಗೆ ಸಮಸ್ಯೆಗೆ ಸಿಕ್ಕಿಕೊಳ್ಳುತ್ತಾನೆ ಎಂಬ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರಂತೆ. ರಾತ್ರಿ ಕಂಡ ಕನಸನ್ನು ನಿಜವೆಂದು ನಂಬುವ ನಾಯಕನ ಸುತ್ತವೇ ಇಡೀ ಕಥೆ ಸಾಗುತ್ತದೆ. ಕೆಲವು ವರ್ಷಗಳ ಹಿಂದೆ ನಿರ್ದೇಶಕರು ಕೂಡಾ ಈ ರೀತಿಯ ಸಮಸ್ಯೆಯನ್ನು ಹೊಂದಿದ್ದರಂತೆ. ಹಾಗಾಗಿ, ಅವರಿಂದಲೇ ಈ ಕಥೆ ಸ್ಫೂರ್ತಿ ಪಡೆದಿದೆ ಎಂದರೂ ತಪ್ಪಲ್ಲ. ಇದೊಂದು ಹೊಸ ಬಗೆಯ ಸಿನಿಮಾವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ನಿರ್ದೇಶಕರಿಗಿದೆ.
ನಾಯಕ ಪ್ರವೀಣ್ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. “ನಾನಿಲ್ಲಿ ಮೆಕ್ಯಾನಿಕ್ ಆಗಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕು ಒಂದು ಸೂಕ್ಷ್ಮ ಅಂಶವನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಸಣ್ಣ ಸಣ್ಣ ಅಂಶಗಳ ಕುರಿತು ಹೆಚ್ಚು ಗಮನಹರಿಸಿದ್ದಾರೆ. ಇದೊಂದು ಸೈಕಲಾಜಿಕಲ್ ಕ್ರೈಮ್ ಥ್ರಿಲ್ಲರ್ ಚಿತ್ರ. ಕನಸು ಮತ್ತು ವಾಸ್ತವದ ನಡುವೆ ಈ ಸಿನಿಮಾ ನಡೆಯುತ್ತದೆ’ ಎಂದು ಚಿತ್ರದ ಬಗ್ಗೆ ವಿವರ ನೀಡಿದರು. ಚಿತ್ರದಲ್ಲಿ ಶಿಲ್ಪಾ ಮಂಜುನಾಥ್ ನಾಯಕಿ. ತಾನೇ ದೊಡ್ಡ ಸಮಸ್ಯೆಯಲ್ಲಿದ್ದೇನೆಂದುಕೊಂಡಿರುವಾಗ ಆಕೆಗೆ ಸಿಗುವ ಬಾಯ್‌ಫ್ರೆಂಡ್ ಅವರಿಂತ ದೊಡ್ಡ ಸಮಸ್ಯೆ ಇರುವವನಾಗಿರುತ್ತಾನಂತೆ. ನಾಯಕನ ಸಮಸ್ಯೆಗೆ ಪರಿಹಾರ ಕೊಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಗಿ ಹೇಳಿಕೊಂಡರು ಶಿಲ್ಪಾ. ಚಿತ್ರದಲ್ಲಿ “ಭಜರಂಗಿ’ ಲೋಕಿ ಮೊದಲ ಬಾರಿಗೆ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ದಕ್ಷ ಪೊಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಈ ಚಿತ್ರವನ್ನು ಜಿ.ಶಂಕರಪ್ಪ, ಸಿ.ರಮೇಶ್ ಬಾಬು ಹಾಗೂ ಸಿ.ಸುರೇಶ್ ಬಾಬು ಸೇರಿ ನಿರ್ಮಿಸಿದ್ದಾರೆ. ಚಿತ್ರಕ್ಕೆ ಭರತ್ ಬಿ.ಜೆ ಸಂಗೀತವಿದೆ. ಚಿತ್ರ ಫೆಬ್ರವರಿ ಕೊನೆ ಅಥವಾ ಮಾರ್ಚ್ ಮೊದಲ ವಾರ ತೆರೆಕಾಣಲಿದೆ.