Advertisement

ಹಂಬಲ ಫ‌ಲಿಸಿತು

01:36 PM Apr 14, 2021 | Team Udayavani |

ಕೆಲವೇ ವಾರಗಳ ರಜೆಯ ಮೇಲೆ ಭಾರತಕ್ಕೆ ಬಂದಿದ್ದ ವಾಸುವಿಗೆ ವಿವಾಹ ಮಾಡಿ ಸೊಸೆಯನ್ನು ಮನೆತುಂಬಿಸಿಕೊಳ್ಳಬೇಕು ಎಂದು ಆತನ ತಂದೆತಾಯಿ ಕಾತರರಾಗಿದ್ದರು. ಅಲ್ಲದೇ ವಾಸು ವಿದೇಶದಲ್ಲಿ ಯಾವುದಾದರೂ ಬಿಳಿಯ ಹುಡುಗಿಯನ್ನು ನೆಚ್ಚಿಕೊಂಡರೆ ಎನ್ನುವ ಆತಂಕವೂ ಅವರದಾಗಿತ್ತು. ಆದರೆ ವಾಸುನದ್ದು ಒಂದೇ ಹಠ. ನನಗೆ ಈಗಲೇ ಸಂಸಾರ ಬೇಡ. ಕೆಲಸದಲ್ಲಿ ಹೆಚ್ಚಿನ ಸಾಧನೆ ಮಾಡಬೇಕು ಎಂದು ಗಿಳಿಪಾಠ ಹೇಳುತ್ತಿದ್ದ.

Advertisement

ವಾಸು ಹೊರಡು ಹೊತ್ತಾಯ್ತು, ರಿಕ್ಷಾ ಬಂದಿದೆ. ನನಗೆ ಗೊತ್ತು ನೀನು ಸರಳಾಳನ್ನು ಮೆಚ್ಚುವೆ. ಅಂದದಲ್ಲಿ ಲಕ್ಷ್ಮೀ, ಸರಸ್ವತಿಯಂತಿದ್ದಾಳೆ. ಚಿಕ್ಕ ವಯಸ್ಸಿಗೆ ವೈದ್ಯಳಾಗುವುದು ಸುಲಭವಲ್ಲ ಎನ್ನುತ್ತ ಸರಳಾಳ ವರ್ಣನೆ ಕೇಳುತ್ತಿದ್ದ ವಾಸುವಿನ ಅಂತರಂಗದಲ್ಲಿ ಹೊಸಭಾವನೆ ಅಂಕುರಿಸಿತು. ತನಗೆ ಅರಿವಿಲ್ಲದಂತೆ ಉಡುಪು ಧರಿಸಿ, ಇಟಲಿಯ ಸುಗಂಧ ದ್ರವ್ಯ ಚಿಮುಕಿಸಿಕೊಂಡಿದ್ದ.

ಇತ್ತ ಸರಳಾಳದ್ದೂ ಅದೇ ಕಥೆ. ಅಮ್ಮಾ ನನಗೆ ಮದುವೆಗೆ ಒತ್ತಾಯಿಸಬೇಡ. ನಾನು ವೈದ್ಯಳಾಗಿ ಜನಸೇವೆ ಮಾಡಬೇಕು ಎನ್ನುತ್ತಿದ್ದ ಅವಳ ಮಾತುಗಳು ಯಾರ ಕಿವಿಗೂ ಬಿದ್ದಿಲ್ಲವೇನೋ ಎಂಬಂತಿತ್ತು.

ಅಷ್ಟರಲ್ಲಿ  ಅವಳ ಅಮ್ಮಾ ಬಂದು, ಸರಳ ನನ್ನ ಮಾತು ಕೇಳು, ನಮಗೆ ವಯಸ್ಸಾಗ್ತಿದೆ. ಮುಂದೆ ಮದುವೆ ಮಾಡುವುದು ಕಷ್ಟವಾಗಬಹುದು. ನಿನಗೂ ಒಳ್ಳೆಯ ಗಂಡ ಸಿಗುವುದು ಕಷ್ಟವಾಗುತ್ತದೆ. ನನಗೆ ವಿವಾಹವಾದಾಗ 16 ವರ್ಷ. ಗಳಿಗೆ ಬಂದಾಗ ಅದನ್ನು ತಿರಸ್ಕರಿಸಬಾರದು. ಅದು ಬ್ರಹ್ಮಸಂಕಲ್ಪ. ಇದು ದೈವ ನಿಯಮ. ನಿನ್ನ ಇಚ್ಛೆಗೆ ವಿರುದ್ಧವಾಗಿ ಹೋಗಿ ಮದುವೆ ಮಾಡುವ ಬಯಕೆ ನಮಗಿಲ್ಲ ಎಂದರು.

ಅವರ ಬುದ್ಧಿವಾದದ ಮಾತುಗಳು ನಿಧಾನವಾಗಿ ಸರಳಾಳ ಅಂತರಾಳಕ್ಕೆ ಇಳಿದಿತ್ತು. ಮೇಲಾಗಿ ತಂದೆತಾಯಿಯರ ಮನಸ್ಸು ನೋಯಿಸಬಾರದು ಎಂದು ವಾಸುವನ್ನು ನೋಡಲು ಒಪ್ಪಿದ್ದಳು. ವಾಸುವಿಗೆ ಹಳೆಯ ಪದ್ಧತಿಯ ಮದುವೆ ಏರ್ಪಾಡು ಇಷ್ಟವೇ ಇರಲಿಲ್ಲ. ಆದರೂ ಹಿರಿಯರನ್ನು ನೋಯಿಸಬಾರದು ಎಂದು ರಿಕ್ಷಾ ಹತ್ತಿದ್ದ.  ರಾಹುಕಾಲ ಸಂಜೆ  ಐದು ಗಂಟೆಗೆ ಮುಗಿದಿತ್ತು. ಪುರೋಹಿತ ವೇಣುಗೋಪಾಲ ಅವರು  ಐದೂವರೆಗೆ ಹುಡುಗ ಹುಡುಗಿ ನೋಡಲಿ ಎಂದು ಅವರಿಬ್ಬರ ಜಾತಕ ಕೂಡಿಬರುತ್ತದೆ. ಆದರ್ಶ ದಂಪತಿಗಳಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು.

Advertisement

ಸಂಜೆಯ ಬೆಂಗಳೂರಿನ ಟ್ರಾಫಿಕ್‌ ನಡುವೆ ರಿಕ್ಷಾ ಹಾರುತ್ತಿದೆಯೇನೋ ಎಂದು ಭಾಸವಾಗುತ್ತಿತ್ತು. ಕೆಲಸ ಮುಗಿಸಿ ಮನೆ ತಲುಪುವ ತವಕದಲ್ಲಿದ್ದ ಯುವಕ, ಯುವತಿಯರು, ದಿನಕ್ಕೆ 20 ನಿಮಿಷವಾದರೂ ನಡೆಯಲೇಬೇಕು ಎಂದು ವೈದ್ಯರ ಸಲಹೆ ಪಾಲಿಸುತ್ತಿದ್ದ ವಯೋವೃದ್ಧರು, ದೂರದ ಬಯಲಿನಲ್ಲಿ ಮಕ್ಕಳ ಕ್ರಿಕೆಟ್‌ ಆಟವನ್ನೆಲ್ಲ ನೋಡುತ್ತಿದ್ದ ವಾಸುವಿಗೆ ತಾನು ಕಾಲೇಜ್‌ ಕ್ರಿಕೆಟ್‌ ಟೀಮ್‌ ಕ್ಯಾಪ್ಟನ್‌ ಆಗಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದ ದಿನಗಳು ನೆನಪಾದವು. ಹಕ್ಕಿಗಳು ಗೂಡು ಸೇರುತ್ತಿದ್ದವು. ರವಿ ತನ್ನ ದಿನಚರಿ ಮುಗಿಸಲು ತಯಾರಿ ನಡೆಸುತ್ತಿದ್ದ.

ಮಲ್ಲೇಶ್ವರಂ ಮಾರ್ಕೆಟ್‌ ಎಂದಿನ ಜನಸಂದಣಿಯೊಡನೆ ಬೀಗುತ್ತಿತ್ತು. ಹೂಗಿತ್ತಿಯರ ಬುಟ್ಟಿಗಳಿಂದ ಜಾಜಿ, ಮಲ್ಲಿಗೆ, ಮರುಗ, ತುಳಸಿ ಪರಿಮಳ ಎಲ್ಲೆಡೆ ಹರಡಿತ್ತು. ಹೊಟೇಲ್‌ಗಳಿಂದ ಹೊರಟ ದೋಸೆ, ಪಕೋಡ, ಬೋಂಡಾ, ಉಪ್ಪಿಟ್ಟುಗಳ ಘಮಘಮ ವಾಸನೆ ಜನರನ್ನು ಸ್ವಾಗತಿಸುತ್ತಿತ್ತು.

ವಾಸುವಿನ ತಂದೆ ಹೂವು, ಹಣ್ಣು ಕೊಳ್ಳಲು ರಿಕ್ಷಾ ನಿಲ್ಲಿಸಿದರು. ಬೀಗರ ಮನೆಗೆ ಮೊದಲ ಬಾರಿ ಬರಿಗೈಯಲ್ಲಿ ಹೋಗಬಾರದು ಇದು ಧರ್ಮ ಎಂದ ಅವರು ಮತ್ತೆ ರಿಕ್ಷಾ ಹತ್ತಿದರು. ಸ್ವಲ್ಪ ದೂರ ಹೋದ ಮೇಲೆ ಸ್ವಾಮಿ ಇದೆ ಮನೆ ಎಂದು ರಿಕ್ಷಾ ಚಾಲಕ ಒಂದು ಮನೆಯ ಮುಂದೆ ರಿಕ್ಷಾ ನಿಲ್ಲಿಸಿದ.

ರಿûಾ ಶಬ್ಧ ಕೇಳಿದ ಸರಳಾಳ ತಂದೆತಾಯಿಯರು ಹೊರಬಂದು ಅವರನ್ನು ಸ್ವಾಗತಿಸಿದರು. ಎಲ್ಲರೂ ಒಳಹೊಕ್ಕು ಕುಳಿತಾಗ ತಿಂಡಿ ತಿನಸುಗಳ ಘಮಘಮ ಸುವಾಸನೆ ಮನೆಯೆಲ್ಲ ಪಸರಿಸಿತ್ತು. ಸರಳಾಳ ತಾಯಿ ವನಜಾ ಕಡುನೀಲಿ ಬಣ್ಣದ ಸೀರೆಯಲ್ಲಿ ಲಕ್ಷಣವಾಗಿದ್ದರು.

ಅವರ ಅಂರ್ತಧ್ಯಾನ “ದೇವರೇ ವಾಸು ಸರಳಾಳ ಕೈಹಿಡಿಯಲಿ’ ಎನ್ನುವುದಾಗಿತ್ತು. ಸರಳಾ ಒಂದು ಶಿಫಾನ್‌ ಸೀರೆ ಉಟ್ಟು , ತೆಳುವಾದ ಚಿನ್ನದ ಸರ, ಅದಕ್ಕೆ ಗಣೇಶನ ಪದಕ ಕತ್ತಿನಲ್ಲಿ  ಶೋಭಿಸಿತ್ತು. ಸೀರೆಗೆ ಹೊಂದುವ ಬಳೆಗಳನ್ನು ತೊಟ್ಟು ಅತಿಥಿಗಳ ನಡುವೆ ಪ್ರವೇಶಿಸಿದಳು. ಜಡೆಯ ಅಲಂಕರಿಸಿದ ಮಲ್ಲಿಗೆ ತನ್ನ ಇರುವಿಕೆಯನ್ನು ಪರಿಮಳದ ಮೂಲಕ ಸೂಚಿಸಿತ್ತು. ಇವಳು ನನ್ನ ಮಗಳು ಸರಳಾ ಎಂದಾಗ ವಾಸು ತನ್ನ  ಕೈ ಜೋಡಿಸಿ ನಮಸ್ತೆ ಎಂದ. ನಾಲ್ಕು ಕಣ್ಣುಗಳು ಕಲೆತು ಪ್ರೇಮದ ಪ್ರಥಮ ನೋಟ ಸಾರಿದವು. ಅದಕ್ಕೆ ಉತ್ತರವೆಂಬಂತೆ ವಾಸು, ನಾನು ಸರಳಾಳ ಸಂಗಡ ಮಾತಾಡಬಹುದೇ ಎಂದು ಕೇಳಿಯೇ ಬಿಟ್ಟ.  ಹಿರಿಯರ ಒಪ್ಪಿಗೆ ಪಡೆದ ಸರಳಾ, ವಾಸು ಮನೆಯ ಹೂದೋಟಕ್ಕೆ ನಡೆದು ಬೆಂಚಿನ ಮೇಲೆ ಕುಳಿತರು.

ವಾಸು ನಿಶ್ಶಬ್ಧದ ಕಟ್ಟೆ ಒಡೆದು, ನಿಮ್ಮ ಪರಿಚಯ ನನಗೆ ಖುಷಿಯಾಗಿದೆ. ನಿಮಗೂ ಅಷ್ಟೇ ಎಂದು ಭಾವಿಸುತ್ತೇನೆ. ನಿಮಗೆ ತಿಳಿದಿರಬಹುದು ನನ್ನ ವಾಸ ಇಟಲಿಯಲ್ಲಿ, ನಾನು ಕೆಲಸ ಮಾಡುವುದು ವೆನಿಸ್‌ ನಗರದಲ್ಲಿ.

ಸರಳಾ, ತನ್ನ ಕಣ್ಣುಗಳನ್ನು ತಾನೇ ನಂಬಲಾರದಂತಾದಳು. ಅವಳ ಮನಸ್ಸು ರಾಕೆಟ್‌ನ ವೇಗದಲ್ಲಿ ಅವಳ ಕಾಲೇಜಿನ ದಿನಗಳಿಗೆ ಕೊಂಡೊಯ್ಯಿತು. ಇಂಗ್ಲಿಷ್‌ ಪ್ರೊಫೆಸರ್‌ ವೆಸ್ಲಿ ಅವರು ಪಾಠ ಮಾಡುತ್ತಿದ್ದ ಸನ್ನಿವೇಶ. ಶೇಕ್ಸ್‌ಪಿಯರ್‌ನ ವೆನಿಸ್‌ನ ವ್ಯಾಪಾರಿ ನಾಟಕದ ದೃಶ್ಯದ ವರ್ಣನೆಯಲ್ಲಿ  ವೆನಿಸ್‌ ನಗರ ಕಣ್ಮುಂದೆ ತರುತ್ತಿತ್ತು. ನಾಟಕದ ಪಾತ್ರಧಾರಿಗಳು ತರಗತಿಯ ವೇದಿಕೆಯಲ್ಲಿ ನಟಿಸುತ್ತಿರುವಂತೆ ಅನ್ನಿಸುತ್ತಿತ್ತು. ಅಂದಿನಿಂದ ವೆನಿಸ್‌ ನೋಡುವ ಕನಸು ಕಟ್ಟಿದ್ದ ಸರಳಾಳಿಗೆ ತನ್ನ ಕನಸು ನನಸಾಗುತ್ತಿದೆ ಎಂದುಕೊಂಡಾಗ ಸ್ವರ್ಗಕ್ಕೆ ಇನ್ನು ಎರಡೇ ಗೇಣು ಎಂದೆನಿಸಿತ್ತು.

ವೈದ್ಯ ವೃತ್ತಿಯಲ್ಲಿ ಸಮಯ  ಸಿಕ್ಕಾಗ ವೆನಿಸ್‌ ನಗರಕ್ಕೆ ಸಂಬಂಧಿಸಿದ ಲೇಖನ , ಪುಸ್ತಕಗಳನ್ನು ಓದಿ ವಿಶ್ವದ ವಿಶಿಷ್ಟ್ಯ  ಸಮುದ್ರ ಆವರಿಸಿರುವ ನಗರವನ್ನು ನೋಡುವ ಆಸೆಯ ಬಲೆಯಲ್ಲಿ ಸಿಕ್ಕಿದ್ದವಳಿಗೆ ಈಗ ಸುವರ್ಣಾವಕಾಶ. ವಾಸುವಿನ ಕೈಹಿಡಿಯುವುದರ ಜತೆಗೆ ವೆನಿಸ್‌ ದರ್ಶನ. ನಿಮ್ಮನ್ನು ನೋಡಿ ನನಗೂ ಸಂತೋಷವಾಯಿತು ಎಂದಳಾಕೆ.

ಈ ಮಾತುಗಳ ಧೈರ್ಯದ ಮೇಲೇ ವಾಸು, ಹಾಗಾದರೆ ಸಪ್ತಪದಿ ಬೇಗನೆ ಆಗಲಿ. ಸರಳವಾಗಿ ವಿವಾಹವಾಗೋಣ ಎಂದು ನುಡಿದು ಉತ್ತರಕ್ಕಾಗಿ ಎದುರುನೋಡಿದ. ನನಗೂ ಅದೇ ಇಷ್ಟ ಎಂದು ಸರಳಾ ತನ್ನ ಹೆಸರಿಗೆ ತಕ್ಕಂತೆ ಸರಳವಾಗಿ ಉತ್ತರಿಸಿದಳು.

ವಾಸು ಮಾತು ಮುಂದುವರಿಸುತ್ತ, ವಿವಾಹಕ್ಕೆ ಹೆಚ್ಚು ಖರ್ಚು ಮಾಡುವುದು ಬೇಡ. ಪ್ರಪಂಚದಲ್ಲಿ  ಬಹಳ ಬಡಬಗ್ಗರಿದ್ದಾರೆ. ಅದೇ ಹಣದಲ್ಲಿ ಅವರ ಸೇವೆ ಮಾಡೋಣ ಎಂದು ಹೇಳಿದ. ಈ ನಮ್ಮ ಸಂಧಿಸುವಿಕೆ ದೈವಕೃಪೆ ಎಂದು ಮನದಲ್ಲೇ ಅಂದುಕೊಳ್ಳುತ್ತ ಇಬ್ಬರೂ ಮನೆಯೊಳಗೆ ಪ್ರವೇಶಿಸಿದರು. ಅಷ್ಟರಲ್ಲಿ ಹಿರಿಯರು ಕುತೂಹಲದಿಂದ ಸಿಹಿಸುದ್ದಿಗಾಗಿ ಕಾಯುತ್ತಿದ್ದರು. ಇವರ ಮುಗುಳ್ನಗೆ ಅವರಿಗೆ ಒಪ್ಪಿಗೆ ಸೂಚಿಸಿತ್ತು.

ಕಾಫಿ ತೆಗೆದುಕೊಳ್ಳುತ್ತೀರಾ… ಗಗನ ಸಖೀಯ ಆಹ್ವಾನ ಸರಳಾಳನ್ನು ಭಾವನಾ ಲೋಕದಿಂದ ಹೊರತಂದಿತ್ತು. ಅಷ್ಟರಲ್ಲಿ  ವಿಮಾನದ ಗಂಟೆಯ ಶಬ್ದದೊಡನೆ ಮಾನಿಟರ್‌ ಮೇಲಿನ ಸಂದೇಶ. ಇನ್ನು ಕೆಲವೇ ನಿಮಿಷಗಳಲ್ಲಿ ಮಿಲಾನ್‌ ನಗರದಿಂದ ಮಾಲ್ಪೆನ್ಸಾದಲ್ಲಿ ಇಳಿಯುತ್ತಿದ್ದೇವೆ. ಉತ್ತಮ ಹವಾಮಾನ. ಇಟಲಿಗೆ ಸ್ವಾಗತ. ಏರ್‌ ಇಂಡಿಯಾ ವಿಮಾನ ಪಡೆಯ ಕಡೆಯಿಂದ ನಿಮಗೆ ಧನ್ಯವಾದಗಳು ಎಂದು ಪೈಲೆಟ್‌ ಹೇಳಿದರು.

ನಾವು ಇಟಲಿಗೆ ಬಂದೆವು ನೋಡು. ಮಿಲಾನ್‌ ಬೃಹತ್‌ ಆಧುನಿಕ ನಗರ. ಅಲ್ಲಿಂದ ರೈಲಿನಲ್ಲಿ ಮೇಸ್ತ್ರೇಗೆ ಹೋಗೋಣ. ಅಲ್ಲಿ ನನ್ನ ವಾಸ. ಕೆಲಸ ವೆನಿಸ್‌ನಲ್ಲಿ ಎಂದ ವಾಸುಗೆ  ಸರಿ ಎಂದು ತಲೆದೂಗಿದಳು ಸರಳಾ.

ವಿದೇಶದಲ್ಲಿ  ಆರಂಭದ ದಿನಗಳು ಚೆನ್ನಾಗಿ ಮುಂದೂಡಿತು. ಮೇಸ್ತ್ರೇಯಿಂದ ವೆನಿಸ್‌ಗೆ 15 ನಿಮಿಷ ಬಸ್‌ ಪ್ರಯಾಣ. ನಿತ್ಯವೂ ಸರಳಾಳಿಂದ ತಂದೆ,ತಾಯಿಗೆ ವೆನಿಸ್‌ ನಗರದ ವರ್ಣನೆ.. ಹೀಗಿತ್ತು.

ವೆನಿಸ್‌ ನಗರ ವಿಶ್ವದಲ್ಲೇ ಏಕಮಾತ್ರ ನಗರ. ಸಮುದ್ರದಲ್ಲೇ ಕಟ್ಟಿದ್ದಾರೆ. ಬಸ್‌ ನಿಲ್ದಾಣದಿಂದ ಸಂತಾ ಮಾರ್ಕೋ ವೃತ್ತಕ್ಕೆ ದೋಣಿಯಲ್ಲಿ ಹೋಗಬಹುದು. ಇಲ್ಲದಿದ್ದರೆ ವೆನಿಸ್‌ ಸೊಬಗನ್ನು ಸವಿಯುತ್ತ ನಡೆಯಬಹುದು. ಚಿಕ್ಕ ರಸ್ತೆ. ಬಲಭಾಗದಲ್ಲಿ  ಸಮುದ್ರ. ಸಣ್ಣದೋಣಿಗಳು ಗಾಳಿಗೆ ಅಲೆಗಳೊಡನೆ ನಾಟ್ಯ ಮಾಡುತ್ತಿರುತ್ತವೆ. ಎಡಭಾಗದಲ್ಲಿ ಚಿಕ್ಕ ಚಿಕ್ಕದಾದ ಚೊಕ್ಕವಾಗಿದ್ದ ಸುವೆನೀರ್‌ ಮಾರುವ ಅಂಗಡಿಗಳು. ಸಂತ ಮಾರ್ಕೋ ಚರ್ಚ್‌ ಬಹಳ ಸುಂದರ ಅದ್ಭುತ ಶಿಲ್ಪಕಲೆ, ಚಿತ್ರಕಲೆಗಳ ಸಮ್ಮಿಲನ. ಹೊರಆವರಣದಿಂದ ಕಾಣುವ ಸಮುದ್ರ

ತನ್ನದೇ ಆದ ಅಲೆಗಳ ಶಬ್ದಗಳನ್ನು ಚರ್ಚ್‌ನ ಗಂಟೆಗಳ ನಾದದಲ್ಲಿ ಸೇರಿಸಿ, ಸೂರ್ಯಾಸ್ತದ ಸುಂದರ ದೃಶ್ಯ ವೀಕ್ಷಕರಿಗೂ ಆನಂದ ಉಂಟುಮಾಡುತ್ತದೆ.

ವೆನಿಸ್‌ ಗಾಜಿನ ಕಲೆಗೂ ಪ್ರಸಿದ್ಧಿ. ಸುಂದರ ಗಾಜಿನಲ್ಲಿ ಮಾಡಲ್ಪಟ್ಟ ವಸ್ತುಗಳು ಬಹಳ ಆಕರ್ಷಕ. ವಾಸು ನನ್ನನ್ನು ಮುರಾನೋ ಗಾಜಿನ ಕಾರ್ಖಾನೆಗೆ ಕರೆದುಕೊಂಡು ಹೋಗಿದ್ದರು. ಸಮುದ್ರದಿಂದ ಸುತ್ತುವರಿದ ಮುರಾನೋ ಬಹಳ ಚೆನ್ನಾಗಿದೆ. ಇದನ್ನು ಕೇಳುತ್ತಿದ್ದ ತಂದೆ ತಾಯಿ,  ಮಗಳ ಸಂತೋಷದಲ್ಲಿ ಪಾಲ್ಗೊಳ್ಳುತ್ತಿದ್ದರು.

ಬೇಸಗೆ ಕಳೆದು ಚಳಿಗಾಲದ ಇರುವು ತೋರಿತ್ತು ಪ್ರಕೃತಿ. ವಾಸು ಕೆಲಸದಲ್ಲಿ ಹೆಚ್ಚು ತಲ್ಲೀನನಾದ. ಈಗ ಸರಳಾಳಿಗೆ ವಿದೇಶ ಜೀವನ ನಾಣ್ಯದ ಎರಡನೇ ಮುಖದ ಅನುಭವ.

ಹೊಸ ಭಾಷೆ, ಬೇರೆ ಜನ. ಬೆಂಗಳೂರಿನ ಸಡಗರದ ಜೀವನ, ತಾಯ್ನಾಡಿನಿಂದ ದೂರ, ಮನೆಯ ಗೀಳು, ತನ್ನ ವೈದ್ಯ ವೃತ್ತಿಯ ನೆನಪಾಗಿ ಸರಳಾ ಬಾಡಿಹೋದಳು.ಒಂದು ದಿನ ಒಬ್ಬಳೇ ಮೇಸ್ತ್ರೇಯಲ್ಲಿ ನಡೆಯುತ್ತಿದ್ದಾಗ ಎದುರಿಗೆ ಸಿಕ್ಕವರೊಬ್ಬರು ನೀವು ಭಾರತೀಯರೇ ? ಎಂದಾಗ ಸರಳಾಳ ಕಿವಿಗಳು ನಿಮಿರಿದವು. ಸೀರೆ ಉಟ್ಟ ಒಬ್ಬರು ನಡುವಯಸ್ಸಿನ ಮಹಿಳೆ ಹಾಕಿದ ಪ್ರಶ್ನೆಯದು.

ಇದು ಕನಸೋ, ನನಸೋ ಎಂದುಕೊಳ್ಳುವಷ್ಟರಲ್ಲಿ ಆಕೆ, ನನ್ನ ಹೆಸರು ಪ್ರೇಮಾ. ಇಲ್ಲಿ ನರ್ಸ್‌.  ಇಲ್ಲೇ ಆಸ್ಪತ್ರೆಯಲ್ಲಿ ಕೆಲಸ ಹಾಗೂ ಹೊರದೇಶಗಳಿಂದ ಬಂದ ನಿರಾಶ್ರಿತರ ಶಿಬಿರದಲ್ಲೂ ಕೆಲಸ ಮಾಡುತ್ತೇನೆ. ಮನೆಗೆ ಬನ್ನಿ ಎಂದು ಆಹ್ವಾನಿಸಿ ಹೊರಟರು.

ಕೆಲಸ ಮುಗಿಸಿ ಮನೆಗೆ ಬಂದ ವಾಸುವಿಗೆ ಇದನ್ನು ಸರಳಾ ಹೇಳಿದಾಗ ಅವನಿಗೂ ಸಂತೋಷವಾಯಿತು. ಮಾರನೇ ದಿನ ಪ್ರೇಮಾ ಅವರನ್ನು ಸಂಧಿಸಿದಾಗ ಬಿಸಿ ಕಾಫಿ, ಬೋಂಡಾ ಅವಳಿಗಾಗಿ ಕಾದಿತ್ತು. ಕನ್ನಡದಲ್ಲೇ ಸಂಭಾಷಣೆ. ಸರಳಾ ತನ್ನ ಸಮಸ್ಯೆಗಳನ್ನು ತೋಡಿಕೊಂಡಳು.

ಆಗ ಆಕೆ, ನಿಮ್ಮ ವೈದ್ಯ ವೃತ್ತಿ ಮುಂದುವರಿಸಿ. ಆಸ್ಪತ್ರೆಗೆ ವೈದ್ಯರ ಆವಶ್ಯಕತೆ ಇದೆ. ಮುಖ್ಯವಾಗಿ ನಿರಾಶ್ರಿತರ ಶಿಬಿರದಲ್ಲಿ ಪರೋಪಕಾರಿಗಳು ಬೇಕು. ಅದು ನೀವೇ ಯಾಕಾಗಬಾರದು. ನಾನು ನಾಳೆಯೇ ನಿಮ್ಮನ್ನು ಆಸ್ಪತ್ರೆ ಮುಖ್ಯಸ್ಥರಿಗೆ ಪರಿಚಯಿಸುತ್ತೇನೆ ಎಂದರು. ಆಗ ಸರಳಾಳ ಸಂತೋಷಕ್ಕೆ ಪಾರವೇ ಇರಲಿಲ್ಲ. ವಾಸು ಕೂಡ ಆ ಸಂತೋಷದಲ್ಲಿ ಭಾಗಿಯಾದ.

ಮರುದಿನ ಇಟಲಿಯನ್‌ ಭಾಷೆಯಲ್ಲಿ ಪ್ರೇಮಾ ತನ್ನ ಬಾಸ್‌ಗೆ ನನ್ನನ್ನು ಪರಿಚಯಿಸಿ, ಇವರು ನಮ್ಮ ಶಿಬಿರದಲ್ಲಿ ಕೆಲಸ ಮಾಡಲಿಚ್ಛಿಸುತ್ತಾರೆ ಎಂದಾಗ ಆತ ಸರಳಾಳ ಕೈ ಕುಲುಕಿ ನಾಳೆಯಿಂದಲೇ ಕೆಲಸ ಆರಂಭ ಮಾಡಿ ಎಂದ. ಆಗಲೇ ಮನದಲ್ಲಿ ಕೆಲಸ ಸಿಕ್ಕರೆ ಬೆಂಗಳೂರಿನ ದೊಡ್ಡ ಗಣೇಶನಿಗೆ ನೂರೆಂಟು ತೆಂಗಿನಕಾಯಿ ಒಡೆಸುವ ಪ್ರಾರ್ಥನೆ ಮಾಡಿದ್ದ ಸರಳಾಳಿಗೆ ಈಗ ಅದನ್ನು ಈಡೇರಿಸುವ ಜವಾಬ್ದಾರಿ ಬಿದ್ದಿತ್ತು.  ಕೂಡಲೇ ಈ ಸುದ್ದಿಯನ್ನು  ವಾಸುವಿನೊಂದಿಗೆ ಹಂಚಿಕೊಂಡಳು. ಮನಸ್ಸಿದ್ದರೆ ಮಾರ್ಗ, ದೇವರು ಮಾರ್ಗ ತೋರುತ್ತಾನೆ.  ನೀನು ಪರೋಪಕಾರಿ ಎನ್ನುತ್ತಾ ವಾಸು ಹೂಗುತ್ಛವನ್ನು ಕೊಟ್ಟಾಗ ಆಕೆಯ ಮೊಗವು ಹೂವಿನಂತೆ ಅರಳಿತ್ತು.

 

-ಜಯಮೂರ್ತಿ ಮೈಸೂರು, ಪೀಸಾ, ಇಟಲಿ

Advertisement

Udayavani is now on Telegram. Click here to join our channel and stay updated with the latest news.

Next