Advertisement
ಏನಿದು ‘ಡ್ರೀಂ ಬಾಕ್ಸ್’?
ನಮ್ಮೆಲ್ಲರ ಬಾಲ್ಯದ ಜೀವನ ಕಷ್ಟದ್ದಾಗಿದ್ದರೂ ಆ ಕಷ್ಟದಲ್ಲಿ ಒಂದಷ್ಟು ಸುಖವಿತ್ತು. ನಾವು ಬೆಳೆದು ದೊಡ್ಡವರಾದ ಮೇಲೆ ನಮ್ಮ ನೆನಪುಗಳನ್ನು ಶ್ರೀಮಂತಗೊಳಿಸಿದ ಹಲವಾರು ಸಣ್ಣಪುಟ್ಟ ಖುಷಿಗಳು ಅಲ್ಲಿದ್ದವು. ಆದರೆ ತಾಂತ್ರಿಕತೆಯ ನಾಗಾಲೋಟದಲ್ಲಿ ಸಾಗುತ್ತಿರುವ ಈ ಕಾಲದಲ್ಲಿ ಬದುಕುತ್ತಿರುವ ಮಕ್ಕಳು ಅಂತಹ ಸಣ್ಣಪುಟ್ಟ ಖುಷಿಗಳನ್ನು ಕಳೆದುಕೊಳ್ಳುತ್ತಿದ್ದಾರೆಯೋ ಎಂಬ ಭಯ ನಮ್ಮನ್ನೆಲ್ಲಾ ಕಾಡುತ್ತಿದೆ, ಒಂದು ಮಟ್ಟಿಗೆ ಅದು ನಿಜವೂ ಆಗಿದೆ. ಹೀಗೆ ನಮ್ಮ ನಡುವೆ ಬದುಕುತ್ತಿರುವ ಮಕ್ಕಳು ಬೇರೆ ಬೇರೆ ಕಾರಣಗಳಿಂದ ಕಳೆದುಕೊಳ್ಳಬಹುದಾಗುತ್ತಿರುವ ಆ ಬಾಲ್ಯದ ಖುಷಿಯ ವಿಚಾರಗಳನ್ನು ಅವರಿಗೆ ನೀಡುವ ಮತ್ತು ಅದರ ಕುರಿತಾಗಿ ಅವರ ಹೆತ್ತವರಿಗೆ ಮತ್ತು ಸಮಾಜಕ್ಕೆ ತಿಳಿಸಿಕೊಡುವ ಒಂದು ಉತ್ತಮ ಪ್ರಯತ್ನವೇ ಈ ‘ಡ್ರೀಂ ಬಾಕ್ಸ್’ ಯೋಜನೆ. ಮಕ್ಕಳ ಕನಸುಗಳು ಅಮೂಲ್ಯವಾದುದು ಮತ್ತು ಅವುಗಳನ್ನು ಸಾಧ್ಯವಾದಷ್ಟರಮಟ್ಟಿಗೆ ದೊಡ್ಡವರಾದ ನಾವು ಪೂರೈಸುವ ಪ್ರಯತ್ನವನ್ನು ಮಾಡಬೇಕು ಎಂಬ ಸದುದ್ದೇಶದಿಂದ ಪ್ರಾರಂಭಗೊಂಡಿರುವ ಯೋಜನೆ ಇದು.
ಇದಕ್ಕೆ ‘ಬಾಂಧವ್ಯ ಬ್ಲಡ್’ ಗುಂಪಿನ ಸದಸ್ಯರು ಆರಿಸಿಕೊಂಡಿರುವುದು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು. ಈ ಯೋಜನೆಯ ಮೊದಲ ಭಾಗವಾಗಿ ಪಾಂಡೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯನ್ನು ಆಯ್ಕೆ ಮಾಡಿ ಅಲ್ಲಿನ ಮಕ್ಕಳ ಕನಸು, ಆಸೆ, ಸಮಸ್ಯೆಗಳ ಪಟ್ಟಿಯನ್ನು ಡ್ರೀಮ್ ಬಾಕ್ಸ್ ಗೆ ಹಾಕುವಂತೆ ತಿಳಿಸಲಾಗಿತ್ತು. ಮಕ್ಕಳ ಮನಸ್ಸಲ್ಲಿ ಏನೇನೋ ಕನಸಿರುತ್ತೆ, ಆಸೆ ಇರುತ್ತೆ, ಸಮಸ್ಯೆ ಕೂಡ ಇರುತ್ತೆ. ಉದಾಹರಣೆಗೆ. ಚಾಕ್ಲೇಟ್, ಬುಕ್, ಪ್ರವಾಸ, ಓದಿನ ಸಮಸ್ಯೆ, ಇನ್ನಿತರ ವಿಷಯವನ್ನು ವಿಧ್ಯಾರ್ಥಿಗಳು ಪಟ್ಟಿ ಮಾಡಿ ಈ ‘ಡ್ರೀಮ್ ಬಾಕ್ಸ್’ ನಲ್ಲಿ ಹಾಕಬಹುದು. ಇದನ್ನು ಪ್ರತೀ ಹದಿನೈದು ದಿನಕ್ಕೊಮ್ಮೆ ತೆರೆದು ಆ ಚೀಟಿಗಳನ್ನು ವಿಭಾಗಿಸಿ ಅದರಲ್ಲಿ ಮಕ್ಕಳು ಬರೆದು ಹಾಕಿರುವ ಅವರ ಆಸೆ, ಆಕಾಂಕ್ಷೆ, ಬೇಡಿಕೆಗಳನ್ನು ಅವುಗಳ ಮಹತ್ವಕ್ಕನುಗುಣವಾಗಿ ವಿಭಾಗಿಸಿ ಬಳಿಕ ಅವುಗಳಲ್ಲಿ ಸಾಧ್ಯವಾದಷ್ಟು ಬೇಡಿಕೆಗಳನ್ನು ಈಡೇರಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವೆನ್ನುತ್ತಾರೆ ಇದರ ರೂವಾರಿ ದಿನೇಶ್ ಬಾಂಧವ್ಯ ಅವರು. ಹೀಗೆ ಪಾಂಡೇಶ್ವರ ಶಾಲೆಯಲ್ಲಿ ಪ್ರಾಯೋಗಿಕ ಮಾದರಿಯಲ್ಲಿ ಇರಿಸಲಾಗಿದ್ದ ‘ಡ್ರೀಂ ಬಾಕ್ಸ್’ ಅನ್ನು ಇತ್ತೀಚೆಗೆ ತೆರೆದ ಸಂದರ್ಭದಲ್ಲಿ ಆ ಶಾಲೆಯ ಪುಟಾಣಿಗಳು ತಮ್ಮ ಪುಟ್ಟ ಕೈಗಳಿಂದ ಸುಮಾರು 150ಕ್ಕೂ ಹೆಚ್ಚು ಪತ್ರಗಳು 15 ದಿನಗಳಲ್ಲಿ ಬಾಕ್ಸ್ ಸೇರಿದ್ದು ಅದರಲ್ಲಿ 50% ಶಾಲೆಗೆ ಬೇಕಾಗುವ ಅಗತ್ಯ ಸೌಕರ್ಯಗಳು ಹಾಗೂ ಸಮಸ್ಯೆಯನ್ನು ಮಕ್ಕಳು ನಮಗೆ ಮನವಿ ಮಾಡಿದ್ದರು. ಅವುಗಳಲ್ಲಿ ಕೆಲವು ಚೀಟಿಗಳಲ್ಲಿ ಚಾಕೊಲೇಟ್ ಬೇಕು, ಐಸ್ ಕ್ರೀಂ ಬೇಕು, ಎಂಬ ಚಿಣ್ಣರ ಬೇಡಿಕೆಗಳಿದ್ದರೆ ಇನ್ನು ಕೆಲವು ಚೀಟಿಗಳಲ್ಲಿ ತಮ್ಮ ಶಾಲೆಯಲ್ಲಿ ಇರುವ ಸಮಸ್ಯೆಗಳ ಕುರಿತಾಗಿ ವಿದ್ಯಾರ್ಥಿಗಳು ಬರೆದು ಹಾಕಿದ್ದರು.
ಇನ್ನು ಕೆಲವರು ತಮಗೆ ಡ್ರಾಯಿಂಗ್ ನಲ್ಲಿ ಆಸಕ್ತಿಯಿದೆ, ಸಂಗೀತದಲ್ಲಿ ಆಸಕ್ತಿ ಇದೆ ಎಂದು ತಮ್ಮ ಮನಸ್ಸಿನ ಭಾವನೆಗಳನ್ನು ಅಕ್ಷರ ರೂಪದಲ್ಲಿ ಬರೆದು ಹಾಕಿದ್ದರು. ಇನ್ನು ಶಾಲೆ ಅವಧಿ ಮುಗಿದ ಬಳಿಕ ಶಾಲೆಯ ಮೈದಾನವನ್ನು ಬೇರೆಯವರು ಆಡಲು ಬಳಸುತ್ತಿರುವುದರ ಕುರಿತು ಮತ್ತು ಅಲ್ಲಿ ಸಿಗರೇಟು ಸೇದಿ ಚೂರುಗಳನ್ನು ಹಾಕುವ ಕುರಿತಾದಂತೆ ದೂರುಗಳನ್ನು ಬರೆದು ಹಾಕಲಾಗಿತ್ತು. ‘ನನಗೆ ಫಿಲ್ಮ್ ಆಕ್ಟರ್ ಆಗಬೇಕೆಂಬ ಆಸೆ – ಪ್ಲೀಸ್ ಹೆಲ್ಪ್ ಮಿ’ ಎಂಬ ಬಯಕೆಯನ್ನು ವ್ಯಕ್ತಪಡಿಸಿದ ಚೀಟಿಯೂ ಸಿಗುತ್ತದೆ. ಹೀಗೆ ಮಕ್ಕಳ ಮನಸನ್ನು ಅರಿತುಕೊಂಡು ಅವರ ಕನಸಿಗೆ ಬಲ ತುಂಬುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ಈ ‘ಡ್ರೀಂ ಬಾಕ್ಸ್’ ಯೋಜನೆಯ ಪ್ರಾರಂಭದಲ್ಲಿಯೇ ಮಕ್ಕಳಿಂದ ಉತ್ತಮ ಸ್ಪಂದನೆ ದೊರೆತಿದೆ. ಇದರಲ್ಲಿ ಎಲ್ಲರ ಮನಸ್ಸನ್ನು ತಟ್ಟಿದ್ದು ‘ನನಗೆ ಅಮ್ಮ ಬೇಕು…’ ಎಂಬ ಬೇಡಿಕೆ ಇರುವ ಚೀಟಿ!
Related Articles
ಸೂಕ್ತ ಕೌನ್ಸಿಲಿಂಗ್ ಕೊಡಿಸಲಾಗುವುದು
‘ನನಗೆ ಅಮ್ಮ ಬೇಕು..’ ಎಂದು ಬರೆದಿದ್ದ ಆರನೆ ತರಗತಿಯಲ್ಲಿ ಕಲಿಯುತ್ತಿರುವ ಆ ಹುಡುಗಿಗೆ ಈಗ ಅಗತ್ಯವಾಗಿ ಬೇಕಾಗಿರುವುದು ತಾಯಿ ಪ್ರೀತಿ ಎಂಬುದನ್ನು ಮನಗಂಡ ದಿನೇಶ್ ಬಾಂಧವ್ಯ ಮತ್ತು ಶಾಲಾ ಶಿಕ್ಷಕ ವರ್ಗದವರು ಮೊದಲಿಗೆ ಈ ಹುಡುಗಿಗೆ ಸೂಕ್ತ ಕೌನ್ಸಿಲಿಂಗ್ ಕೊಡಿಸುವ ನಿರ್ಧಾರವನ್ನು ಮಾಡಿದ್ದಾರೆ. ಬಳಿಕ ಆಕೆಯಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬುವ ಕೆಲಸವೂ ನಡೆಯಬೇಕಾಗಿದೆ. ಇದಕ್ಕೆ ಆಕೆಯ ಶಿಕ್ಷಕರು, ಮನೆಯವರ ಸಹಕಾರ ಅಗತ್ಯವಾಗಿರುತ್ತದೆ. ಆದರೆ ಈ ಯೋಜನೆಯ ಮೂಲಕ ವಿದ್ಯಾರ್ಥಿನಿಯೊಬ್ಬಳ ಮನಸ್ಸಿನಲ್ಲಿ ಕಾಡುತ್ತಿದ್ದ ತುಮುಲವೊಂದನ್ನು ಅರಿತುಕೊಂಡ ಸಾರ್ಥಕತೆಯನ್ನು ‘ಡ್ರೀಂ ಬಾಕ್ಸ್’ ಪ್ರಾರಂಭದಲ್ಲಿಯೇ ಪಡೆದುಕೊಂಡಂತಾಗಿದೆ.
Advertisement
ನನಸಾಯ್ತು 49 ಮಕ್ಕಳ ಆಸೆ, ಕನಸುಗಳುಡ್ರೀಮ್ ಬಾಕ್ಸ್ ನ ಮೊದಲ ಹಂತದಲ್ಲಿ ಸುಮಾರು 49 ಮಕ್ಕಳ ಆಸೆ, ಕನಸನ್ನು ಪೂರೈಸಲಾಯಿತು ಸೇಬು, ಬಾಳೆಹಣ್ಣು, ಪುಸ್ತಕ, ಪೆನ್ನು, ಪೆನ್ಸಿಲ್, ರಬ್ಬರ್, ಕಥೆ ಪುಸ್ತಕ, ಗಾದೆ ಪುಸ್ತಕ, ಚಾಕ್ಲೇಟ್, ಬೂಸ್ಟ್, ಹೀಗೆ ಇನ್ನಿತರ ಸಾಮಾಗ್ರಿಗಳನ್ನು ನೀಡಲಾಯಿತು. ಬಹು ಮುಖ್ಯವಾಗಿ 50%ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಬೇಕಾಗುವ ವಸ್ತು ಹಾಗೂ ಸೌಲಭ್ಯದ ಕುರಿತು ಬರೆದಿದ್ದರು. ಹಾಗೆಯೇ ದಿಶಾ ಎನ್ನುವ ಬಾಲಕಿ ಶಾಲೆಗೆ ಬೇಕಾದ ಅಗತ್ಯವಿರುವ ಸೌಲಭ್ಯದ ಕುರಿತು ಮನವರಿಕೆ ಮಾಡಿದ್ದಳು. ಇದಕ್ಕೆ ಪೂರಕವಾಗಿ 2 ಟಾಯ್ಲೆಟ್ ಬ್ರಶ್ ಹಾಗೂ ಹಾರ್ಪಿಕ್ ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು. ಈ ಎಲ್ಲಾ ಸಾಮಾಗ್ರಿಗಳನ್ನು ಡಾl ಕೀರ್ತಿ ಪಾಲನ್ ರವರು ತನ್ನ ಹುಟ್ಟುಹಬ್ಬದ ಪ್ರಯುಕ್ತ ನೀಡಿದರು.
ಈಗಾಗಲೇ ಈ ನೂತನ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಮುಂದಿನ ದಿನಗಳಲ್ಲಿ ಗ್ರಾಮೀಣ ಭಾಗದ ಮಕ್ಕಳ ಕನಸಿಗೆ ಪೂರಕವಾಗಿ ನಿಲ್ಲಲು ಆರಕ್ಕಿಂತಲೂ ಹೆಚ್ಚು ದಾನಿಗಳು ಮುಂದೆ ಬಂದಿದ್ದಾರೆ. ಇದೀಗ ಸಾಲಿಗ್ರಾಮದಲ್ಲಿರುವ ಕಾರ್ಕಡ ಸರಕಾರಿ ಶಾಲೆಯನ್ನು ಈ ಯೋಜನೆಗೆ ಆರಿಸಿಕೊಳ್ಳಲಾಗಿದ್ದು ಸದ್ಯವೇ ಇಲ್ಲಿ ಮಕ್ಕಳ ಪಾಲಿನ ‘ಮಾಯಾ ಪೆಟ್ಟಿಗೆ’ ಕಾರ್ಯಾರಂಭ ಮಾಡಲಿದೆ. ಇನ್ನು ಗ್ರಾಮೀಣ ಭಾಗದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕ ವೃಂದದವರು, ಶಾಲಾ ಅಭಿವೃದ್ಧಿ ಸಮಿತಿಯವರು, ಮಕ್ಕಳ ಹೆತ್ತವರು ಮತ್ತು ಸಾರ್ವಜನಿಕರು ಈ ಯೋಜನೆಗೆ ಒತ್ತಾಸೆಯಾಗಿ ನಿಂತಲ್ಲಿ ‘ಡ್ರೀಂ ಬಾಕ್ಸ್’ ಒಂದು ವಿನೂತನ ಯೋಜನೆಯಾಗಿ ರಾಜ್ಯಮಟ್ಟದಲ್ಲಿ ಗಮನಸೆಳೆಯುವುದರಲ್ಲಿ ಯಾವ ಸಂಶಯವೂ ಇಲ್ಲ.