ನಂಜನಗೂಡು: ಕಾಮಗಾರಿಯನ್ನೇ ಕೈಗೊಳ್ಳದೇ ಅಧಿಕಾರಿಗಳು ಹಣ ಪಡೆದಿದ್ದಾರೆ ಎಂದು ಆಪಾದಿಸಿ ತಾಲೂಕಿನ ತಗಡೂರಿನಲ್ಲಿ ಸೋಮವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ನಾಗರಿಕರು, ಗ್ರಾಮ ಪಂಚಾಯಿತಿ ಆವರಣದ ವರೆಗೆ ಮೆರವಣಿಗೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿದರು. ಹಣ ಪಡೆದ ಕಾಮಗಾರಿ ಎಲ್ಲಿದೆ ತೋರಿಸಿ ಎಂದು ಪ್ರಶ್ನಿಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ 14ನೇ ಹಣಕಾಸು ಯೋಜನೆಯಡಿ ಮಂಜೂರು ಮಾಡಿದ ಅಭಿವೃದ್ಧಿ ಕಾಮಗಾರಿಯನ್ನು ಮಾಡದೇ ಹಣ ಪಡೆಯಲಾಗಿದೆ. ಇದು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ದಾಖಲೆಯಲ್ಲಿ ಸಾಬೀತಾಗಿದೆ. ಮೂರು ವರ್ಷಗಳ ಹಿಂದೆಯೇ (2015-16) ಕಾಮಗಾರಿಯನ್ನೇ ಆರಂಭಿಸದೇ ಅವುಗಳೆಲ್ಲವನ್ನೂ ಪೂರ್ಣಗೊಳಿಸಲಾಗಿದೆ ಎಂಬುದಾಗಿ ಸುಳ್ಳು ದಾಖಲೆೆ ಸೃಷ್ಟಿಸಿ ಹಣ ಡ್ರಾ ಮಾಡಿಕೊಳ್ಳಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗಾಗಿ ಮೀಸಲಾಗಿದ್ದ ಸುಮಾರು 20 ಲಕ್ಷ ರೂ. ದುರುಪಯೋಗ ಆಗಿದೆ. ಈ ಹಣದಲ್ಲಿ ಅಭಿವೃದ್ಧಿಯಾಗಿದೆ ಎನ್ನಲಾದ ಬಸ್ ನಿಲ್ದಾಣದಲ್ಲಿನ ಶೌಚಾಲಯ, ಜನತಾ ಶಾಲೆಯ ಕಾಂಪೌಂಡ್ ಮತ್ತಿತರ ಕಾಮಗಾರಿಗಳು ಎಲ್ಲಿವೆ ತೋರಿಸಿ ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಕಂಠರಾಜೇ ಅರಸು, “ಈ ಆರೋಪಗಳ ಬಗ್ಗೆ ಜಂಟಿ ಸಮಿತಿ ರಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಇದರಿಂದ ಮತ್ತಷ್ಟು ಕೆರಳಿದ ಪ್ರತಿಭಟನಾಕಾರರು, “ಇದು ಆರೋಪ ಅಲ್ಲ, ನೀವೇ ಆ ಕಾಮಗಾರಿಗಳನ್ನು ಖುದ್ದಾಗಿ ತೋರಿಸಿ, ಇಲ್ಲವೇ ಹಣ ಇರುವುದನ್ನಾದರೂ ಸಾಬೀತುಪಡಿಸಿ ಎಂದು ಪಟ್ಟುಹಿಸಿದರು.
ಈ ವೇಳೆ, ಮಧ್ಯಪ್ರವೇಶಸಿದ ತಾಪಂ ಇಒ, ಅಕ್ರಮ ಸಂಬಂಧ ತಪ್ಪಿತಸ್ಥರ ವಿರುದ್ಧ ಇಂದೇ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ನಂತರ ಕ್ರಮ ಜರುಗಿಸುವುದಾಗಿ ತಿಳಿಸಿದರು. ಆರ್‌ಟಿಐ ಮೂಲಕ ಅವ್ಯವಹಾರ ಬಹಿರಂಗಪಡಿಸಿದ ಕೃಷ್ಣ ದೇವನೂರು, ಜಿಪಂ ಸದಸ್ಯ ಸದಾನಂದರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮಹೇಶ್, ಪ್ರಜ್ವಲ್, ಶಶಿ, ರಂಗನಾಥ, ಮಾಧು, ನವೀನ್, ಮಾದಪ್ಪ, ನಾಗೇಶ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.