Advertisement

ದ್ರಾವಿಡ-ಆರ್ಯ ಸಂಸ್ಕೃತಿ ಮಧ್ಯೆ ಘರ್ಷಣೆ ಸಲ್ಲ: ಮುರುಘಾ ಶ್ರೀ

11:54 AM Mar 01, 2019 | |

ಚಿತ್ರದುರ್ಗ: ದೇಶದಲ್ಲಿ ಎರಡು ಸಂಸ್ಕೃತಿಗಳಿದ್ದು, ದ್ರಾವಿಡ ಮತ್ತು ಆರ್ಯ ಸಂಸ್ಕೃತಿಯಾಗಿದೆ. ಈ ಎರಡು ಸಂಸ್ಕೃತಿಗಳಲ್ಲಿ ಸದಾ ಸಂಘರ್ಷ ನಡೆಯುತ್ತಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

Advertisement

ಇಲ್ಲಿನ ಕಬೀರಾನಂದಾಶ್ರಮದಲ್ಲಿ ಗುರುವಾರದಿಂದ ಆರಂಭಗೊಂಡ 89ನೇ ಮಹಾ ಶಿವರಾತ್ರಿ ಮಹೋತ್ಸವದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶರಣರು ಆಶೀರ್ವಚನ ನೀಡಿದರು.

ಗುರುಗಳಲ್ಲಿ ಸದ್ಗುರುಗಳು ಬೇಕಾಗಿದ್ದಾರೆ. ಭಾರತದಲ್ಲಿ ಎರಡು ಸಂಗತಿ ಅಥವಾ ಸಂಸ್ಕೃತಿ ಇಡೀ ದೇಶವನ್ನು ವ್ಯಾಪಿಸಿಕೊಂಡಿವೆ. ನಾವೆಲ್ಲರೂ ದ್ರಾವಿಡ ಸಂಸ್ಕೃತಿಗೆ ಸೇರಿದ್ದೇವೆ. ದ್ರಾವಿಡ ಸಂಸ್ಕೃತಿ ಭಾರತ ದೇಶದ ಮೂಲ ಸಂಸ್ಕೃತಿಯಾಗಿದ್ದು, ದ್ರಾವಿಡ ಸಂಸ್ಕೃತಿಯ ಮೂಲ ಜನಕ ಶಿವ. ಶಿವ ಸ್ಮಶಾನ ವಾಸಿಯಾಗಿದ್ದು, ಊರ ಹೊರಗೆ ಇದ್ದಾನೆಂದರು.

ಆರ್ಯ ಸಂಸ್ಕೃತಿಯ ಪ್ರವರ್ತಕ ವಿಷ್ಣು ಅಥವಾ ಹರಿ ಅಥವಾ ಕೃಷ್ಣನಾಗಿದ್ದಾನೆ. ಈ ಎರಡು ಸಂಸ್ಕೃತಿಯಲ್ಲಿ ವ್ಯವಸ್ಥಿತಿತವಾದ ಗೊಂದಲ ಏರ್ಪಟ್ಟಿದೆ. ನಮ್ಮ ನಡುವಿನ ಸಂಸ್ಕೃತಿಯನ್ನು ವಿಕೃತಿಗೊಳಿಸುವ ಪ್ರಯತ್ನ ಸದ್ದಿಲ್ಲದೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಎಲ್ಲರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕಿದೆ. ಮಠಗಳ ಮೂಲಕ ಶಿವನ ಪರಿಚಯ ಮಾಡಿಸಬೇಕು ಎಂದು ಕರೆ ನೀಡಿದರು. 

ಅಲ್ಲಮಪ್ರಭು “ತಾಯಿ ತಂದೆ ಇಲ್ಲದ ಕಂದ ನಿನಗೆ ನೀನೆ ಹುಟ್ಟಿ ಬೆಳೆದೆಯಲ್ಲ’ ಎಂದು ಶಿವನ ಕುರಿತು ಹೇಳುತ್ತಾನೆ. ಶಿವತ್ವ ವಿಶ್ವ ವ್ಯಾಪಕತ್ವ, ದೈವತ್ವ, ಸರ್ವತ್ವವಾಗಿದೆ. ಕತೃವಾಗಿರುವ ಶಿವನನ್ನು ಅರ್ಥ ಮಾಡಿಕೊಂಡರೆ ದೇಶದಲ್ಲಿ ಶಾಂತಿ, ಪ್ರೀತಿ ಕಾಣಬಹುದು. ಜನರಲ್ಲಿ ಆಸ್ತಿ, ಹಣ, ಅಂತಸ್ತು, ಅಧಿಕಾರ ಎಲ್ಲವೂ ಇದೆ, ಆದರೆ ಬದುಕಿನಲ್ಲಿ ಶಾಂತಿ ಮತ್ತು ಮಾನವೀಯ ಮೌಲ್ಯ, ಪ್ರೀತಿ ಇಲ್ಲದಂತೆ ಆಗಿರುವುದು ಆತಂಕ ಉಂಟು ಮಾಡಿದೆ ಎಂದರು.

Advertisement

ಗಂಡು ಮೆಟ್ಟಿನ ನಾಡು ಚಿತ್ರದುರ್ಗದಲ್ಲಿ ಆರೂಢ ಪರಂಪರೆಗೆ ಅವಕಾಶ ಆಗಿರುವುದು ಉತ್ತಮ ಬೆಳವಣಿಗೆಯಾಗಿದೆ. ಶಿವರಾತ್ರಿ ಅಂಗವಾಗಿ ಆಯೋಜಿಸಿರುವುದರಿಂದ ಶಿವನ ಚಿಂತನೆಗಳು ನಡೆಯುತ್ತವೆ ಎಂದು ತಿಳಿಸಿದರು.

ಚಿಂತಕ ಡಾ| ಜೆ. ಕರಿಯಪ್ಪ ಮಾಳಿಗೆ ಶಿವೋಪಾಸನೆ ಮತ್ತು ಆರೂಢ, ಅವಧೂತ ಚಿಂತನೆ ಕುರಿತು ಮಾತನಾಡಿ, ಅವಧೂತರು ಹೊರಗಡೆ ಮಲಿನವಾಗಿದ್ದರೂ ಒಳಗಡೆ ಮಾನಸಿಕವಾಗಿ ಶುದ್ಧರಾಗಿ ಅವತಾರ ಪುರುಷರಾಗಿದ್ದಾರೆ. ಸಂಘ-ಸಹಚಾರಗಳಿಂದ ದೂರು ಇದ್ದು ಯೋಗ, ಧ್ಯಾನಗಳ ಮೂಲಕ ಬಹುತ್ವದೆಡೆ ಸಾಗಿದ್ದರು ಎಂದರು.

ಇಲ್ಲಿ ಗುರುವಿಗೆ ಮಹತ್ವವಿದೆ. ಗುರುವನ್ನೇ ಶಿವ ಎಂದು ಆರೂಢರು, ಅವಧೂತರು, ಸಾಧು, ಸಂತರು, ನಾಥರು ಪರಿಗಣಿಸಿದ್ದಾರೆ. ಇವರಲ್ಲಿ ಪ್ರಗತಿಪರ ಚಿಂತನೆಗಳಿದ್ದವು. ಜಾತಿ, ಮತ, ಧರ್ಮಗಳ ಭೇದ ಇರಲಿಲ್ಲ. ಸಮಾನತೆ ಇತ್ತು ಎಂದು ಹೇಳಿದರು. ಇತಿಹಾಸ ಸಂಶೋಧಕ ಪ್ರೊ| ಲಕ್ಷ್ಮಣ
ತೆಲಗಾವಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಗವಿಪುರಂ ಗೋಸಾಯಿ ಮಠದ ಶ್ರೀ ಮಂಜುನಾಥ ಮಹಾರಾಜ್‌, ಸಂಸದ ಬಿ.ಎನ್‌. ಚಂದ್ರಪ್ಪ, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ತಾಪಂ ಅಧ್ಯಕ್ಷ ಲಿಂಗರಾಜು, ಎಂ.ಕೆ. ತಾಜ್‌ಪೀರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next