Advertisement

ರಾಷ್ಟ್ರಪತಿ ಚುನಾವಣೆಗೆ ಕಣ ರೆಡಿ: ದ್ರೌಪದಿ ಮುರ್ಮು Vs ಯಶವಂತ್‌ ಸಿನ್ಹಾ

11:54 PM Jun 21, 2022 | Team Udayavani |

ಜು. 18ರ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಒಡಿಶಾದ ಆದಿವಾಸಿ ಮಹಿಳೆ ದ್ರೌಪದಿ ಮುರ್ಮು ಅವರನ್ನು ಕಣಕ್ಕಿಳಿಸಿದರೆ, ವಿಪಕ್ಷಗಳು ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿವೆ. ಹೀಗಾಗಿ ಈ ಬಾರಿಯೂ ರಾಷ್ಟ್ರಪತಿ ಚುನಾವಣೆ ಕುತೂಹಲ ಮೂಡಿಸಿದೆ.

Advertisement

ಸಮರ್ಥ ಆಡಳಿತಗಾರ್ತಿ ದ್ರೌಪದಿ ಮುರ್ಮು
ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಒಡಿಶಾ ಬಿಜೆಪಿ ನಾಯಕಿ ದ್ರೌಪದಿ ಮುರ್ಮು(64) ಅವರು ಆದಿವಾಸಿ ಜನಾಂಗದ ಜನಪ್ರಿಯ ಮಹಿಳಾ ನಾಯಕಿ ಮಾತ್ರವಲ್ಲ, ಝಾರ್ಖಂಡ್‌ ರಾಜ್ಯಪಾಲರಾಗಿ ಕಾರ್ಯನಿರ್ವಹಿಸುವ ಮೂಲಕ ತಾವೊಬ್ಬ ಸಮರ್ಥ ಆಡಳಿತಗಾರ್ತಿ ಎಂಬುದನ್ನೂ ಸಾಬೀತುಪಡಿಸಿದ್ದಾರೆ.

ಝಾರ್ಖಂಡ್‌ ರಾಜ್ಯ ಸ್ಥಾಪನೆ(2000)ದ ಬಳಿಕ ನೇಮಕಗೊಂಡ ಮೊದಲ ಮಹಿಳಾ ರಾಜ್ಯಪಾಲೆಯೂ ಹೌದು.
ರಾಯ್‌ರಂಗಪುರದಲ್ಲಿ ಮೊದಲಿಗೆ ಕೌನ್ಸಿಲರ್‌ ಆಗಿ ಆಯ್ಕೆಯಾಗುವ ಮೂಲಕ 1997ರಿಂದ ಮುರ್ಮು ಅವರ ರಾಜಕೀಯ ಜೀವನ ಆರಂಭವಾಯಿತು. ಅನಂತರದಲ್ಲಿ ಬಿಜೆಪಿ ಒಡಿಶಾ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷೆಯಾಗಿ, ಅನಂತರ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ರಾಯ್‌ರಂಗಪುರದಿಂದ ಶಾಸಕಿಯಾಗಿ ಆಯ್ಕೆಯಾಗಿ 2 ಬಾರಿ ಒಡಿಶಾ ಅಸೆಂಬ್ಲಿಯನ್ನು ಪ್ರತಿನಿಧಿಸಿದ್ದರು. ಅಲ್ಲದೇ, ಬಿಜೆಪಿ ಬೆಂಬಲದೊಂದಿಗೆ ಬಿಜೆಡಿ ಒಡಿಶಾದಲ್ಲಿ ಸರಕಾರ ರಚನೆ ಮಾಡಿದ್ದ ಸಂದರ್ಭದಲ್ಲಿ ಸಚಿವೆಯಾಗಿಯೂ ಮುರ್ಮು ಸೇವೆ ಸಲ್ಲಿಸಿದ್ದರು.

ವರ್ಷದ ಅತ್ಯುತ್ತಮ ಶಾಸಕರಿಗೆ ಒಡಿಶಾ ಸರಕಾರ ನೀಡುವ “ನೀಲಕಂಠ ಪ್ರಶಸ್ತಿ’ಯೂ 2007ರಲ್ಲಿ ದ್ರೌಪದಿ ಅವರ ಪಾಲಾಗಿತ್ತು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಒಡಿಶಾದ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ಶ್ರಮಪಟ್ಟಿದ್ದಾರೆ.

Advertisement

ಮೂಲತಃ ಛತ್ತೀಸ್‌ಗಢದವರಾದ ದ್ರೌಪದಿ ಅವರು 2015ರ ಮೇಯನಲ್ಲಿ ಝಾರ್ಖಂಡ್‌ನ‌ ರಾಜ್ಯಪಾಲೆಯಾದರು. ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿ ಪಡೆದಿರುವ ಅವರು, ಸುಮಾರು 2 ದಶಕಗಳ ಕಾಲ ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ರಾಷ್ಟ್ರಪತಿಯಾಗಿ ಆಯ್ಕೆಯಾದರೆ ದೇಶದ ರಾಷ್ಟ್ರಪತಿ ಹುದ್ದೆಗೇರಿದ ಬುಡಕಟ್ಟು ಜನಾಂಗದ ಮೊದಲ ಮಹಿಳೆ ಎಂಬ ಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ.

ಸಿನ್ಹಾ ಜನತಾದಳ, ಬಿಜೆಪಿ, ಟಿಎಂಸಿ, ಈಗ ರಾಷ್ಟ್ರಪತಿ ಅಭ್ಯರ್ಥಿ
ಬಿಜೆಪಿ ಮಾಜಿ ನಾಯಕ, ಕೇಂದ್ರದ ಮಾಜಿ ಸಚಿವ ಯಶವಂತ್‌ ಸಿನ್ಹಾಗೆ ಈಗ 84 ವರ್ಷ. ಈಗವರು ಯುಪಿಎನ ಸರ್ವಸಮ್ಮತ ರಾಷ್ಟ್ರಪತಿ ಚುನಾವಣೆ ಅಭ್ಯರ್ಥಿಯಾಗಿ ಕಣಕ್ಕಿಳಿದಿ ದ್ದಾರೆ! ಜನತಾದಳದಿಂದ ರಾಜಕೀಯ ಜೀವನ ಆರಂಭಿಸಿದ ಅವರು ಎನ್‌ಡಿಎ, ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗ ವಿತ್ತ ಸಚಿವರಾಗಿ, ವಿದೇಶಾಂಗ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಂತರ ಬಿಜೆಪಿ ತೊರೆದು, ಪ್ರಸ್ತುತ ಟಿಎಂಸಿಯಲ್ಲಿ ಪಾತ್ರ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಮೂಲತಃ ಸಿನ್ಹಾ ಐಎಎಸ್‌ ಅಧಿಕಾರಿ. ಬಿಹಾರ ಸರಕಾರದಲ್ಲಿ ವಿವಿಧ ಹುದ್ದೆ ನಿಭಾಯಿಸಿದ್ದರು. ಅನಂತರ ಕೇಂದ್ರದಿಂದ ವಿದೇಶಗಳಲ್ಲೂ ಜವಾ ಬ್ದಾರಿ ಹೊಂದಿದ್ದರು. ಜಯಪ್ರಕಾಶ ನಾರಾಯಣ ಅವರಿಂದ ಪ್ರೇರಿತ ರಾಗಿ ಸರಕಾರಿ ಹುದ್ದೆ ತೊರೆದು ರಾಜಕೀಯ ಜೀವನ ಆರಂಭಿಸಿದರು. 1989ರಲ್ಲಿ ಜನತಾದಳ ಸೇರಿ 90ರಿಂದ 91ರವರೆಗೆ ಕೇಂದ್ರ ವಿತ್ತ ಸಚಿವರಾಗಿದ್ದರು.

ಬಿಜೆಪಿ ಸೇರ್ಪಡೆ: 1992ರಲ್ಲಿ ಬಿಜೆಪಿ ಸೇರಿದ ಸಿನ್ಹಾ 25 ವರ್ಷಗಳ ಕಾಲ ಪಕ್ಷದಲ್ಲಿದ್ದರು. 1998ರಲ್ಲಿ ಝಾರ್ಖಂಡ್‌ನ‌ ಹಜಾರಿಬಾಘ…ದಿಂದ ಸ್ಪರ್ಧಿಸಿ ಗೆದ್ದರು. ವಿತ್ತ ಸಚಿವರೂ ಆದರು. ಸರಕಾರ ಪತನಗೊಂಡು, 1999ರಲ್ಲಿ ಮತ್ತೆ ಲೋಕಸಭಾ ಚುನಾವಣೆದಾಗ ಲೂ ಗೆದ್ದರು. 2002-04ರವರೆಗೆ ವಿದೇಶಾಂಗ ಸಚಿವರಾಗಿದ್ದರು. 2004ರಲ್ಲಿ ರಾಜ್ಯಸಭಾ ಸದಸ್ಯರಾದರು. 2009ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದರು. ಇದೇ ವೇಳೆ ಬಿಜೆಪಿ ಮೇಲೆ ಮುನಿಸಿಕೊಂಡ ಅವರು 2012ರ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಣವ್‌ ಮುಖರ್ಜಿಗೆ ಮತ ಹಾಕಿದರು. 2014ರಲ್ಲಿ ತಮ್ಮ ಲೋಕಸಭಾ ಸ್ಥಾನವನ್ನು ಪುತ್ರ ಜಯಂತ್‌ ಸಿನ್ಹಾಗೆ ಬಿಟ್ಟುಕೊಟ್ಟರು. 2018ರಲ್ಲಿ ಬಿಜೆಪಿ ತೊರೆದರು.

ಮೋದಿ ಟೀಕಾಕಾರ: ಬಿಜೆಪಿ ತೊರೆದ ಮೇಲೆ ಪಕ್ಷ ಮತ್ತು ನರೇಂದ್ರ ಮೋದಿಯ ಟೀಕಾಕಾರರಾಗಿ ಬದಲಾದರು. ಬಿಜೆಪಿಯ ಸಿಎಎ ಕಾಯ್ದೆ ವಿರೋಧಿಸಿ 3,000 ಕಿ.ಮೀ. ಪಾದಯಾತ್ರೆ ಹಮ್ಮಿಕೊಂಡಿದ್ದರು. 2021ರಲ್ಲಿ ಟಿಎಂಸಿ ಸೇರಿಕೊಂಡರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next